ADVERTISEMENT

ಬಡವರಿಗೆ ₹ 1 ಲಕ್ಷದಲ್ಲಿ ಫ್ಲ್ಯಾಟ್‌ : 114 ಎಕರೆ ಜಮೀನು ಬಿಲ್ಡರ್‌ಗಳ ಪಾಲು !

ಪಿ.ಎಂ.ರಘುನಂದನ್
Published 5 ಅಕ್ಟೋಬರ್ 2017, 20:22 IST
Last Updated 5 ಅಕ್ಟೋಬರ್ 2017, 20:22 IST
ಬಡವರಿಗೆ ₹ 1 ಲಕ್ಷದಲ್ಲಿ ಫ್ಲ್ಯಾಟ್‌ : 114 ಎಕರೆ ಜಮೀನು ಬಿಲ್ಡರ್‌ಗಳ ಪಾಲು !
ಬಡವರಿಗೆ ₹ 1 ಲಕ್ಷದಲ್ಲಿ ಫ್ಲ್ಯಾಟ್‌ : 114 ಎಕರೆ ಜಮೀನು ಬಿಲ್ಡರ್‌ಗಳ ಪಾಲು !   

ಬೆಂಗಳೂರು: ರಾಜ್ಯ ಸರ್ಕಾರ ₹ 1 ಲಕ್ಷಕ್ಕೊಂದು ಫ್ಲ್ಯಾಟ್‌ ಯೋಜನೆ ಖಾಸಗಿ– ಸಾರ್ವಜನಿಕ ಪಾಲುದಾರಿಕೆಯಲ್ಲಿ ಕೈಗೆತ್ತಿಕೊಳ್ಳಲಿದ್ದು, ಶೇ 40 ರಷ್ಟು ಜಮೀನಿನ ಹಕ್ಕು ಮತ್ತು ಒಡೆತನವನ್ನು ಡೆವಲಪರ್‌ಗಳ ಬಳಕೆಗೆ ಬಿಟ್ಟುಕೊಡಲಿದೆ. ಶೇ 60 ರಷ್ಟು ಜಮೀನು ಮಾತ್ರ ಫ್ಲ್ಯಾಟ್‌ಗಳ ನಿರ್ಮಾಣಕ್ಕೆ ಬಳಕೆಯಾಗಲಿದೆ.

ಈ ಯೋಜನೆಗಾಗಿ ರಾಜ್ಯ ಸರ್ಕಾರ ಬೆಂಗಳೂರು ನಗರದ ಸುತ್ತಮುತ್ತ 286 ಎಕರೆ ಜಮೀನು ಗುರುತಿಸಿದೆ. ಶೇ 40 ಎಂದರೆ 114 ಎಕರೆ ಜಮೀನಿನ ಹಕ್ಕು ಸಂಪೂರ್ಣ ಖಾಸಗಿಯವರ ಪಾಲಾಗುತ್ತದೆ. ಭೂಮಿಯ ಮಾಲೀಕತ್ವವೂ ಖಾಸಗಿಯವರದೇ ಆಗಲಿದೆ. ಇದಕ್ಕೆ ಪ್ರತಿಯಾಗಿ ಶೇ 60 ರಷ್ಟು ಜಮೀನಿನಲ್ಲಿ ₹ 1 ಲಕ್ಷದ ಫ್ಲ್ಯಾಟ್‌ಗಳನ್ನು ಕಟ್ಟಿಕೊಡಬೇಕು. ಈ ಯೋಜನೆಗೆ ರಾಜ್ಯ ಸಚಿವ ಸಂಪುಟ ಇತ್ತೀಚೆಗೆ ಒಪ್ಪಿಗೆ ನೀಡಿತ್ತು.

ಬಿಲ್ಡರ್‌ಗಳನ್ನು ಸ್ಪರ್ಧಾತ್ಮಕ ಬಿಡ್‌ ಮೂಲಕ ಆಯ್ಕೆ ಮಾಡಲಾಗುವುದು. ಯೋಜನೆಯಡಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ದುರ್ಬಲ ವರ್ಗದವರಿಗೆ ಒಂದು ಬೆಡ್‌ ರೂಮ್‌, ಹಾಲ್‌ ಮತ್ತು ಅಡುಗೆ ಮನೆಯನ್ನು ಒಳಗೊಂಡ ಫ್ಲ್ಯಾಟ್‌ಗಳನ್ನು ನಿರ್ಮಿಸಲಾಗುವುದು. ಎರಡು ಬೆಡ್‌ ರೂಮ್‌ ಫ್ಲ್ಯಾಟ್‌ ನಿರ್ಮಿಸುವ ಉದ್ದೇಶವಿದೆ. ಈ ಯೋಜನೆ ಅಂದಾಜು ವೆಚ್ಚ ₹ 6,000 ಕೋಟಿ.

ADVERTISEMENT

ಆರಂಭದಲ್ಲಿ ಯೋಜನೆಯನ್ನು ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮ ಮತ್ತು  ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಮೂಲಕ ಜಾರಿ ಮಾಡಲು ಉದ್ದೇಶಿಸಲಾಗಿತ್ತು. ಯೋಜನೆಯಲ್ಲಿ ಶೇ 25 ರಷ್ಟು ಜಮೀನು ಹರಾಜಿನ ಮೂಲಕ ಖಾಸಗಿಯವರಿಗೆ ನೀಡಲು ತೀರ್ಮಾನಿಸಲಾಗಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ವಸತಿ ಯೋಜನೆಗಳ ಹಣವನ್ನು ಇದಕ್ಕೆ ಬಳಸಲು ಉದ್ದೇಶಿಸಲಾಗಿತ್ತು. ಯೋಜನೆ ಆರಂಭಕ್ಕೆ ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮ ₹ 500 ಕೋಟಿ ಮೂಲ ಬಂಡವಾಳ ಕೇಳಿತ್ತು.

ಈ ಯೋಜನೆಗೆ ಸಚಿವ ಸಂಪುಟದ ಒಪ್ಪಿಗೆ ಪಡೆಯುವುದಕ್ಕೆ ಮೊದಲೇ ಖಾಸಗಿ ಸಹಭಾಗಿತ್ವಕ್ಕೆ ಅನುಕೂಲ ಮಾಡಲು, ಕರ್ನಾಟಕ ಕೈಗೆಟುಕುವ ವಸತಿ ನೀತಿಯ ಸೆಕ್ಷನ್‌ 17.2.1 ಅನ್ನು ಯೋಜನೆಗೆ ಸೇರಿಸಲಾಯಿತು ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಸೆಕ್ಷನ್‌ 17.2.1 ರ ಅಡಿ ಶೇ. 40 ರಷ್ಟು ಸರ್ಕಾರಿ ಖಾಲಿ ಜಮೀನಿನಲ್ಲಿ ಕೈಗೆಟಕುವ ದರ ವಸತಿ ಯೋಜನೆಯನ್ನು ಖಾಸಗಿ ಡೆವಲಪರ್‌ಗಳು ಅಭಿವೃದ್ಧಿಪಡಿಸಲು ಅವಕಾಶವಿದೆ. ಆದರೆ, ಇದಕ್ಕೆ ರಾಜ್ಯ ಮಟ್ಟದ ಉನ್ನತಾಧಿಕಾರ ಸಮಿತಿ ಒಪ್ಪಿಗೆ ನೀಡಬೇಕು. ಉಳಿದ ಜಮೀನನ್ನು ಮಾಸ್ಟರ್‌ ಪ್ಲ್ಯಾನ್‌/ ಸಿಡಿಪಿ ಭೂ ಬಳಕೆ ಮತ್ತು ಸ್ಥಳೀಯ ವಲಯ ನಿಯಮಾವಳಿ ಅನ್ವಯ ಖಾಸಗಿ ಡೆವಲಪರ್‌ಗೆ ಪೂರ್ಣ ಒಡೆತನದ ಹಕ್ಕು ವರ್ಗಾಯಿಸಬೇಕು.

ಈ ಮಧ್ಯೆ ರಾಜ್ಯ ಸರ್ಕಾರ ಸ್ವತ್ತು ವರ್ಗಾವಣೆ ಕಾಯ್ದೆ ಸೆಕ್ಷನ್‌ 53 ಎ ಅನ್ವಯ ಶೇ. 40 ರಷ್ಟು ಜಮೀನು ಡೆವಪಲರ್‌ಗೆ ವರ್ಗಾಯಿಸಲು ನಿರ್ಧರಿಸಿದೆ. ಈ ಕಾಯ್ದೆಯಡಿ ಜಮೀನು ವರ್ಗಾವಣೆ ಮಾಡಿಸಿಕೊಂಡವನಿಗೇ ಶುದ್ಧ ಕ್ರಯಪತ್ರದೊಂದಿಗೆ ಒಡೆತನದ ಸಂಪೂರ್ಣ ಹಕ್ಕು ನೀಡಲಾಗುತ್ತದೆ. ಇದರಿಂದ ಮುಂದೊಂದು ದಿನ ಜಮೀನು ವರ್ಗಾಯಿಸಿದ ಸರ್ಕಾರ ಕೂಡ ಭೂ– ಹಕ್ಕಿಗೆ ಸಂಬಂಧಿಸಿದಂತೆ ತಕರಾರು ಎತ್ತುವುದಕ್ಕೆ ಅವಕಾಶವೂ ಇರುವುದಿಲ್ಲ. ಸರ್ಕಾರ ಶೇ. 40 ರಷ್ಟು ಜಮೀನು ನೀಡುವುದರ ಜತೆಗೆ ವಸತಿ ಯೋಜನೆ ನಿರ್ಮಿಸಲು ಡೆವಲಪರ್‌ಗಳಿಗೆ ಹಣಕಾಸು ವ್ಯವಸ್ಥೆಯನ್ನೂ ಮಾಡುತ್ತದೆ ಎಂದೂ ಮೂಲಗಳು ತಿಳಿಸಿವೆ.

ಸ್ವತ್ತು ವರ್ಗಾವಣೆ ಕಾಯ್ದೆಯಡಿ ಖಾಸಗಿಯವರಿಗೆ ಶೇ 40 ರಷ್ಟು ಜಮೀನು ನೀಡಿ ಯೋಜನೆ ಕಾರ್ಯಗತಗೊಳಿಸುವ ಪ್ರಸ್ತಾವನೆಯನ್ನು ಆರಂಭದಲ್ಲಿಯೇ ವಸತಿ ಇಲಾಖೆಯ ಕೆಲವು ಹಿರಿಯ ಅಧಿಕಾರಿಗಳು ವಿರೋಧ ವ್ಯಕ್ತಪಡಿಸಿದ್ದರು.

ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ವಸತಿ ಸಚಿವ ಎಂ.ಕೃಷ್ಣಪ್ಪ, ಕಾಯ್ದೆಯಲ್ಲಿ ಶೇ 40 ರಷ್ಟು ಜಮೀನಿನಲ್ಲಿ ವಸತಿ ಯೋಜನೆ ಅಭಿವೃದ್ಧಿಪಡಿಸಬೇಕು ಎಂದು ಇರುವುದನ್ನು ಸಚಿವ ಸಂಪುಟ ಶೇ. 60 ಕ್ಕೆ ಏರಿಸಿದೆ. ಇದರಿಂದ ಯೋಜನೆಯನ್ನು ಆದಷ್ಟು ಬೇಗ ಜಾರಿ ಮಾಡಲು ಸಾಧ್ಯ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.