ADVERTISEMENT

ಬರಹಗಾರ ತನ್ನ ನೆಲೆ ಬಿಟ್ಟು ಹೋಗಬಾರದು: ಯು.ಆರ್. ಅನಂತಮೂರ್ತಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 19:30 IST
Last Updated 25 ಫೆಬ್ರುವರಿ 2012, 19:30 IST

ಬೆಂಗಳೂರು: `ಬರಹಗಾರ ತನ್ನ ನೆಲೆ ಯಾವುದು ಎಂದು ಮೊದಲು ತಿಳಿದುಕೊಳ್ಳಬೇಕು, ನೆಲೆಯನ್ನು ಬಿಟ್ಟು ಬೇರೆ ಆಗಬಾರದು~ ಎಂದು ಸಾಹಿತಿ ಡಾ. ಯು.ಆರ್. ಅನಂತಮೂರ್ತಿ ಹೇಳಿದರು.

ಪಲ್ಲವ ಪ್ರಕಾಶನ ಮತ್ತು ಕಾವ್ಯ ಮಂಡಲ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ನಟರಾಜ್ ಹುಳಿಯಾರ್ ಅವರ ಗಾಳಿ- ಬೆಳಕು ಮತ್ತು ಮಾಯಾ ಕಿನ್ನರಿ ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ನಮ್ಮಲ್ಲಿ ಶ್ರೇಷ್ಠ ಕಥೆಗಾರರಿದ್ದಾರೆ. ಕತೆಯಲ್ಲಿ ಇರುವಷ್ಟು ಪ್ರತಿಭೆಗಳು ಕಾವ್ಯದಲ್ಲಿ ಕಾಣುತ್ತಿಲ್ಲ. ಸಾಹಿತಿಗಳು ರಾಜಕೀಯ ಅಂಕಣ ಬರೆಯುತ್ತಿದ್ದಾರೆ. ಹತ್ತು ಅಂಕಣಗಳಲ್ಲಿ ಹೇಳುವ ವಿಷಯವನ್ನು ಒಂದು ಕಥೆಯಲ್ಲಿ ಕಟ್ಟಿಕೊಡಬಹುದು. ಯಾವುದೇ ಬರಹಗಾರ ತನ್ನ ನೆಲೆಯನ್ನು ಬಿಟ್ಟು ಹೋಗಬಾರದು ಎಂದು ಅವರು ಹೇಳಿದರು.

ಕಂಡಿದ್ದೆಲ್ಲವನ್ನು ಸಾಹಿತಿ ಒಪ್ಪಿಕೊಳ್ಳಬಾರದು. ಯಾವುದೇ ವಿಷಯದ ಬಗ್ಗೆ ಒಂದು ಅನುಮಾನ ಇರಬೇಕು. ಭೂತ, ಭವಿಷ್ಯ ಮತ್ತು ವರ್ತಮಾನದ ಕಲ್ಪನೆಯನ್ನೂ ಇಟ್ಟುಕೊಂಡಿರಬೇಕು. ನಟರಾಜ್ ಅವರು ಗುಮಾನಿ ಸಾಧ್ಯತೆ ಕಳೆಯದ ಹಾಗೆ ನಂಬಿಕೆ ಸೃಷ್ಟಿಸಿ ಬರೆಯುತ್ತಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

`ನಿತ್ಯದ ವಸ್ತುಗಳನ್ನು ಕಥೆಗೆ ಆಯ್ಕೆ ಮಾಡಿಕೊಂಡಿರುವ ಲೇಖಕರು ಸಾಮಾಜಿಕ, ರಾಜಕೀಯ ಹಿನ್ನೆಲೆಯಲ್ಲಿ ಅವುಗಳನ್ನು ಬರೆದಿದ್ದಾರೆ~ ಎಂದು ಸಾಹಿತಿ ಡಾ. ಬಂಜಗೆರೆ ಜಯಪ್ರಕಾಶ್ ಹೇಳಿದರು.

ಕಿರುತೆರೆ ಕಲಾವಿದರಾದ ಶೈಲಶ್ರೀ ಮತ್ತು ಧರ್ಮೇಂದ್ರ ಅವರು ಕಥಾ ಮಂಡನೆ ಮಾಡಿದರೆ, ಪೂರ್ವಿ ಹಾಡಿದರು. ಪ್ರಕಾಶಕ ಪಲ್ಲವ ವೆಂಕಟೇಶ್, ಡಾ.ಟಿ. ವೆಂಕಟೇಶಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.