ADVERTISEMENT

ಬಸವ, ಅಂಬೇಡ್ಕರ್ ಕ್ರಾಂತಿಕಾರಿ: ನಿಸಾರ್

​ಪ್ರಜಾವಾಣಿ ವಾರ್ತೆ
Published 14 ಜೂನ್ 2013, 21:00 IST
Last Updated 14 ಜೂನ್ 2013, 21:00 IST

ಬೆಂಗಳೂರು: `ರಾಜ್ಯೋತ್ಸವ ಪ್ರಶಸ್ತಿಯು ಮೊದಲು ಅರ್ಹತೆಯಿರುವ ಆಯ್ದ ಕೆಲವು ವ್ಯಕ್ತಿಗಳಿಗೆ ಮಾತ್ರ ದೊರೆಯುತ್ತಿತ್ತು. ಆದರೆ, ಈಗ ಪ್ರಶಸ್ತಿ ಪಡೆಯುವವರ ಸಂಖ್ಯೆಯು ಹನುಮನ ಬಾಲದಂತೆ ಬೆಳೆದಿದೆ' ಎಂದು ಕವಿ ಕೆ.ಎಸ್. ನಿಸಾರ್ ಅಹಮದ್ ವಿಷಾದ ವ್ಯಕ್ತಪಡಿಸಿದರು.

ಸಪ್ನ ಬುಕ್ ಹೌಸ್ ಮತ್ತು ಗುಲ್ಬರ್ಗದ ಪ್ರೊ.ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನವು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಪ್ನ ಬುಕ್ ಹೌಸ್ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಆರ್.ದೊಡ್ಡೇಗೌಡರಿಗೆ ಪ್ರತಿಷ್ಠಾನದ `ಪುಸ್ತಕ ಬಹುಮಾನ ಪ್ರಶಸ್ತಿ' ವಿತರಿಸಿ ಅವರು ಮಾತನಾಡಿದರು.

`ಮೊದಲು ಅರ್ಹತೆಯಿದ್ದವರಿಗೆ ಪ್ರಶಸ್ತಿ ದೊರೆಯುತ್ತಿತ್ತು. ಆದರೆ, ಈಗ ಎಲ್ಲರಿಗೂ ದೊರೆಯುತ್ತಿದೆ. ಪ್ರತಿಷ್ಠಾನವು ನೀಡಿರುವ ಪುಸ್ತಕ ಬಹುಮಾನ ಪ್ರಶಸ್ತಿಯು ಒಬ್ಬ ಒಳ್ಳೆಯ ವ್ಯಕ್ತಿಗೆ ಮತ್ತು ಲೇಖಕರಿಗೆ ದೊರೆತಿರುವುದು ಸಂತಸ ತಂದಿದೆ. ಆರ್.ದೊಡ್ಡೇಗೌಡರು ಕೆಲಸದ ಜತೆಗೆ ಪುಸ್ತಕಗಳನ್ನು ಬರೆದಿರುವುದು ಶ್ಲಾಘನೀಯ ಕಾರ್ಯವಾಗಿದೆ' ಎಂದರು.

`ಪ್ರಶಸ್ತಿ ಪಡೆದ `ಭಾರತರತ್ನ ಬಿ.ಆರ್.ಅಂಬೇಡ್ಕರ್' ಕೃತಿಯಲ್ಲಿ ಕೆಲವು ಅಪರೂಪದ ಘಟನೆಗಳನ್ನು ವಿವರಿಸಿದ್ದಾರೆ. ಭಾರತ ದೇಶದಲ್ಲಿ ಬುದ್ಧ, ಬಸವಣ್ಣ, ಗಾಂಧೀಜಿ ನಂತರ ಕ್ರಾಂತಿ ಮಾಡಿದವರು ಅಂಬೇಡ್ಕರ್ ಅವರಾಗಿದ್ದಾರೆ. ಸಮಾಜದಲ್ಲಿ ನಾಲಿಗೆ ಕಳೆದುಕೊಂಡವರಿಗೆ ನಾಲಿಗೆಯಾದವರು. ಒಟ್ಟು ಕೃತಿಯಲ್ಲಿ ಅಪರೂಪದ ಛಾಯಾಚಿತ್ರಗಳು ಮತ್ತು ಅಪರೂಪದ ವಿಷಯಗಳ ಉಲ್ಲೇಖವಿದೆ' ಎಂದರು.

ಪ್ರಶಸ್ತಿಯು 5,000 ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.