ADVERTISEMENT

ಬಾಳು ಬೆಳಗಿಸಿದ ಬದಲಿ ಹೃದಯ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2012, 19:30 IST
Last Updated 18 ನವೆಂಬರ್ 2012, 19:30 IST

ಬೆಂಗಳೂರು: ನಗರದ ರೀನಾ ರಾಜು ಪಾಲಿಗೆ ಭಾನುವಾರ ಅತ್ಯಂತ ಸ್ಮರಣೀಯ ದಿನ. ಶಸ್ತ್ರ ಚಿಕಿತ್ಸೆ ಮೂಲಕ ಬದಲಿ ಹೃದಯ ಪಡೆದ ರಾಜ್ಯದ ಮೊದಲ ಮಹಿಳೆ ಎನಿಸಿರುವ ಅವರು, ಈ ದಿನ ಅದರ ಮೂರನೇ ವಾರ್ಷಿಕೋತ್ಸವ ಆಚರಿಸಿಕೊಂಡರು.

ತಮಗೆ ಹೃದಯ ದಾನ ಮಾಡಿದ ವ್ಯಕ್ತಿಯ ನೆನಪಿನಲ್ಲಿ `ಬಾಳು ಬೆಳಗಿಸಿ~ ಎಂಬ ಹೆಸರಿನಲ್ಲಿ ಕನ್ನಡ ಗೀತೆಯನ್ನು `ಯು ಟೂಬ್~ನಲ್ಲಿ ಅಳವಡಿಸಲಿರುವ ಅವರು, ಸಾಮಾಜಿಕ ಜಾಲತಾಣವನ್ನು ಸಹ ಆರಂಭಿಸಲು ಸಿದ್ಧತೆ ನಡೆಸಿದ್ದಾರೆ. ರಾಘವೇಂದ್ರ ಕಾಮತ್ ಬರೆದ ಗೀತೆಗೆ ರಾಜ್ ನಾರಾಯಣ್ ಸಂಗೀತ ಸಂಯೋಜನೆ ಮಾಡಿದ್ದು, ಸ್ವತಃ ರೀನಾ ಹಾಡಿದ್ದಾರೆ.
 
ರಾಜ್ಯದ ಪ್ರತಿಯೊಬ್ಬ ನಾಗರಿಕನನ್ನೂ ಈ ಗೀತೆ ಮುಟ್ಟಬೇಕು. ಅಂಗಾಂಗ ದಾನ ನೀಡಲು ಇದರಿಂದ ಅವರೆಲ್ಲ ಪ್ರೇರಣೆ ಪಡೆಯುವಂತೆ ಆಗಬೇಕು ಎಂಬ ಅಭಿಲಾಷೆಯನ್ನು ಅವರು ವ್ಯಕ್ತಪಡಿಸುತ್ತಾರೆ. `ಅಂಗಾಂಗ ದಾನಕ್ಕಾಗಿ ಕಾದಿರುವ ವ್ಯಕ್ತಿಗಳ ಪಟ್ಟಿ ಬೆಳೆಯುತ್ತಲೇ ಇದ್ದು, ಜಾಗೃತಿ ಕೊರತೆಯಿಂದ ದಾನವೇ ಸಿಗುತ್ತಿಲ್ಲ~ ಎಂದು ಅವರು ವಿಷಾದಿಸುತ್ತಾರೆ.

`ಅಂಗಾಂಗ ದಾನಕ್ಕಾಗಿ ಹೆಸರು ನೋಂದಣಿ ಮಾಡಿಸಿದ ಮಾತ್ರದಿಂದ ಏನೂ ಪ್ರಯೋಜನ ಇಲ್ಲ. ತಮ್ಮ ಸಂಬಂಧಿಗಳಿಗೆ ಈ ವಿಷಯವಾಗಿ ಮನದಟ್ಟು ಮಾಡಿಕೊಡಬೇಕು. ಏಕೆಂದರೆ, ದಾನಕ್ಕೆ ಹೆಸರು ನೋಂದಣಿ ಮಾಡಿಕೊಡ ವ್ಯಕ್ತಿಯ ಸಂಬಂಧಿಗಳು ಆತ ತೀರಿದಾಗ ಅಂಗಾಂಗ ತೆಗೆದುಕೊಳ್ಳಲು ಸಮ್ಮತಿಸದ ಉದಾಹರಣೆಗಳು ಬೇಕಾದಷ್ಟಿವೆ~ ಎಂದು ಹೇಳುತ್ತಾರೆ.

ರಾಜ್ಯದಲ್ಲಿ 2007ರಿಂದ ಈಚೆಗೆ 850ಕ್ಕೂ ಅಧಿಕ ಜನ ಹೃದಯ ದಾನಕ್ಕಾಗಿ ಕಾಯುತ್ತಿದ್ದು, ಇದುವರೆಗೆ 44 ಜನ ಮಾತ್ರ ಅದನ್ನು ಪಡೆಯಲು ಸಾಧ್ಯವಾಗಿದೆ. `ಬದಲಿ ಶಸ್ತ್ರ ಚಿಕಿತ್ಸೆಗೆ ಒಳಗಾದ ಬಳಿಕ ನಾನು ಸಹಜವಾದ ಜೀವನ ನಡೆಸುತ್ತಿದ್ದೇನೆ~ ಎಂದು ಖುಷಿ ವ್ಯಕ್ತಪಡಿಸುತ್ತಾರೆ.

2006ರಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದ ರೀನಾ ಅವರನ್ನು ತಪಾಸಣೆ ನಡೆಸಿದ ವೈದ್ಯರು, ಅವರ ಹೃದಯ ವೈಫಲ್ಯ ಆಗಿದ್ದನ್ನು ಪತ್ತೆ ಮಾಡಿದ್ದರು. ದಾನಿಯೊಬ್ಬರು ಸಿಕ್ಕಿದ್ದರಿಂದ 2009ರಲ್ಲಿ ಆಕೆ ಚೆನ್ನೈನ ಫ್ರಾಂಟಿಯರ್ ಲೈಫ್‌ಲೈನ್ ಆಸ್ಪತ್ರೆ ಮತ್ತು ಡಾ.ಕೆ.ಎಂ. ಚೆರಿಯನ್ ಹೃದಯ ಪ್ರತಿಷ್ಠಾನದ ಸಹಯೋಗದಲ್ಲಿ ಬದಲಿ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು.

ಅಂಗಾಂಗ ಕಸಿ ಬಳಿಕ ಶಸ್ತ್ರ ಚಿಕಿತ್ಸೆಗೆ ಒಳಗಾದ ವ್ಯಕ್ತಿ ಎದುರಿಸುವ ಬಹುದೊಡ್ಡ ಸಮಸ್ಯೆ ಎಂದರೆ ಔಷಧಿಯದ್ದು. ತಿಂಗಳಿಗೆ ರೂ 8ರಿಂದ 15 ಸಾವಿರ ಔಷಧಿ ಅಗತ್ಯವಾಗಿದ್ದು, ಬಡವರಿಗೆ ಅದನ್ನು ಹೊಂದಿಸಲು ಆಗುವುದಿಲ್ಲ ಎಂದು ರೀನಾ ಹೇಳುತ್ತಾರೆ. ಅಂಗಾಂಗ ದಾನದ ವಿಷಯವಾಗಿ ಜಾಗೃತಿ ಮೂಡಿಸಲು `ಲೈಟ್ ಎ ಲೈಫ್- ರೀನಾ ರಾಜು ಫೌಂಡೇಶನ್~ ಎಂಬ ಸಂಸ್ಥೆಯನ್ನು ಕಳೆದ ವರ್ಷ ಆರಂಭಿಸಿದ್ದಾರೆ.

`ಬೇರೊಬ್ಬರ ಹೃದಯವನ್ನು ಹೊಂದಿದ್ದರಿಂದ ನಿಮ್ಮ ವ್ಯಕ್ತಿತ್ವದಲ್ಲಿ ಏನಾದರೂ ಬದಲಾವಣೆ ಕಂಡು ಬಂದಿದೆಯೇ~ ಎಂದು ಕೇಳಿದಾಗ, `ನನ್ನ ದೇಹದಲ್ಲಿ ಬೇರೊಬ್ಬರ ಹೃದಯ ಮಿಡಿಯುತ್ತಿರುವುದು ರೋಮಾಂಚಕಾರಿ ಅನುಭವ. ಉಳಿದಂತೆ ನಾನು ಮೊದಲು ಹೇಗಿದ್ದೆನೋ ಈಗಲೂ ಹಾಗೇ ಇದ್ದೇನೆ~ ಎಂದು ಪ್ರತಿಕ್ರಿಯಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.