ADVERTISEMENT

ಬಿಎಂಟಿಎಫ್‌ ಎಸ್‌ಪಿ ವಿರುದ್ಧ ವಿಚಾರಣೆಗೆ ‘ಸುಪ್ರೀಂ’ ತಡೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 19:26 IST
Last Updated 9 ಏಪ್ರಿಲ್ 2018, 19:26 IST

ನವದೆಹಲಿ: ಬೆಂಗಳೂರು ಮಹಾನಗರ ಕಾರ್ಯಪಡೆಯ (ಬಿಎಂಟಿಎಫ್‌) ಎಸ್‌ಪಿ ಡಿ. ದೇವರಾಜ ವಿರುದ್ಧದ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸೋಮವಾರ ತಡೆ ನೀಡಿದೆ. ತನಿಖೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪವನ್ನು ಅವರು ಎದುರಿಸುತ್ತಿದ್ದಾರೆ.

ದೇವರಾಜ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒವೈಸ್‌ ಸಬೀರ್‌ ಹುಸೇನ್‌ ಎಂಬವರು ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದರ ಆಧಾರದಲ್ಲಿ ದೇವರಾಜ ಮತ್ತು ಇತರ ಸಿಬ್ಬಂದಿ ವಿರುದ್ಧ ವಿಚಾರಣೆ ಆರಂಭವಾಗಿತ್ತು. ಈಗ ಒವೈಸ್‌ ಅವರಿಗೂ ಸುಪ್ರೀಂ ಕೋರ್ಟ್‌ ನೋಟಿಸ್‌ ನೀಡಿದೆ. ಸರ್ಕಾರಿ ನೌಕರರು ತಮ್ಮ ಕರ್ತವ್ಯ ನಿರ್ವಹಣೆಯ ಸಂದರ್ಭದಲ್ಲಿ ಅಪರಾಧ ಎಸಗಿದ್ದಾರೆ ಎಂಬ ಆರೋಪ ಬಂದರೆ ಕಾನೂನು ಕ್ರಮ ಕೈಗೊಳ್ಳುವ ಮೊದಲು ಸೂಕ್ತ ಪ್ರಾಧಿಕಾರದ ಅನುಮತಿ ಪಡೆದುಕೊಳ್ಳಬೇಕು. ಆದರೆ ದೂರು ದಾಖಲಿಸುವ ಮುನ್ನ ಇಂತಹ ಅನುಮತಿ ಪಡೆದುಕೊಂಡಿಲ್ಲ ಎಂಬ ಅಂಶವನ್ನು ವಿಚಾರಣಾ ನ್ಯಾಯಾಲಯ ಮತ್ತು ಕರ್ನಾಟಕ ಹೈಕೋರ್ಟ್‌ ನಿರ್ಲಕ್ಷಿಸಿದೆ ಎಂದು ದೇವರಾಜ ಪರ ವಕೀಲರು ವಾದಿಸಿದರು.

ದೇವರಾಜ ವಿರುದ್ಧದ ದೂರನ್ನು ಬೆಂಗಳೂರು ಹೆಚ್ಚುವರಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ 2016ರ ಡಿಸೆಂಬರ್‌ 27ರಂದು ವಿಚಾರಣೆಗೆ ಎತ್ತಿ
ಕೊಂಡಿದ್ದರು. ದೂರನ್ನು ವಜಾ ಮಾಡುವಂತೆ ಕೋರಿ ದೇವರಾಜ ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್‌ ಮಾನ್ಯ ಮಾಡಿರಲಿಲ್ಲ. ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಅದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.