ADVERTISEMENT

ಬಿಎಂಟಿಸಿ ಚಾಲಕನ ಮೇಲೆ ಹಲ್ಲೆ; ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2012, 19:30 IST
Last Updated 23 ಜನವರಿ 2012, 19:30 IST
ಬಿಎಂಟಿಸಿ ಚಾಲಕನ ಮೇಲೆ ಹಲ್ಲೆ; ಪ್ರತಿಭಟನೆ
ಬಿಎಂಟಿಸಿ ಚಾಲಕನ ಮೇಲೆ ಹಲ್ಲೆ; ಪ್ರತಿಭಟನೆ   

ಯಲಹಂಕ: ಬಿಎಂಟಿಸಿ ಬಸ್ ಚಾಲಕನ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಇಲ್ಲಿನ ಪುಟ್ಟೇನಹಳ್ಳಿ ಡಿಪೋ-11 ಮತ್ತು 30ನೇ ಘಟಕದ ಚಾಲಕರು ಹಾಗೂ ನಿರ್ವಾಹಕರು ಸೋಮವಾರ ಕೆಲಸ ಬಹಿಷ್ಕರಿಸಿ ಬಸ್‌ಗಳು ಡಿಪೋದಿಂದ ಹೊರ ಹೋಗದಂತೆ ತಡೆದು ದಿಢೀರ್ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಹಿನ್ನೆಲೆಯಲ್ಲಿ ಈ ಭಾಗದ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದರು.

ದೊಡ್ಡಬಳ್ಳಾಪುರ-ಯಲಹಂಕ ಮಾರ್ಗದ ಬಿಎಂಟಿಸಿ ಬಸ್ ಚಾಲಕ ಮುನಿರಾಜು, ಭಾನುವಾರ ರಾತ್ರಿ ಸುಮಾರು 8 ಗಂಟೆ ಹೊತ್ತಿನಲ್ಲಿ ದೊಡ್ಡಬಳ್ಳಾಪುರದಿಂದ ಯಲಹಂಕದ ಕಡೆಗೆ ಚಾಲನೆ ಮಾಡಿಕೊಂಡು ಬರುತ್ತಿದ್ದರು. 

ಮಾರ್ಗಮಧ್ಯೆ ರಾಜಾನುಕುಂಟೆ ಬಳಿ ಬಸ್ಸನ್ನು ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಂಡ ನಂತರ ಮುಂದೆ ಚಲಿಸದೆ ಹಾಗೆಯೇ ನಿಲ್ಲಿಸಿಕೊಂಡಿದ್ದರು ಎನ್ನಲಾಗಿದೆ.

ಇದರಿಂದ ಆಕ್ರೋಶಗೊಂಡ ಪ್ರಯಾಣಿಕರು ಬಸ್ ಓಡಿಸುವಂತೆ ಒತ್ತಾಯಿಸಿದ್ದಾರೆ. ಇನ್ನೂ ನಾಲ್ಕೈದು ಮಂದಿ ಪ್ರಯಾಣಿಕರು ಬಂದ ನಂತರ ಹೊರಡುವುದಾಗಿ ಚಾಲಕ ತಿಳಿಸಿದ್ದಾನೆ. ಈ ಸಂದರ್ಭದಲ್ಲಿ ಪ್ರಯಾಣಿಕರು ಹಾಗೂ ಚಾಲಕನೊಂದಿಗೆ ಮಾತುಕತೆ ನಡೆದು ಒಂದು ಹಂತದಲ್ಲಿ ಪ್ರಯಾಣಿಕರು ಚಾಲಕನನ್ನು ಬಸ್‌ನಿಂದ ಹೊರಗೆಳೆದು ಹಲ್ಲೆ ನಡೆಸಿದರು. ಈ ಸಂದರ್ಭದಲ್ಲಿ  ಚಾಲಕನ ಬಲಗೈ ಮೂಳೆ ಮುರಿದಿದ್ದು, ತಲೆ, ಬಾಯಿ ಹಾಗೂ ಕಣ್ಣಿನ ಭಾಗಕ್ಕೆ ಸಣ್ಣಪುಟ್ಟ ಗಾಯಗಳಾದವು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಎಂದಿನಂತೆ ಬೆಳಗ್ಗೆ 6 ಗಂಟೆಗೆ ಕರ್ತವ್ಯಕ್ಕೆ ಹಾಜರಾದ ಚಾಲಕ ಮತ್ತು ನಿರ್ವಾಹಕರು, ಮುನಿರಾಜು ಮೇಲೆ ಹಲ್ಲೆ ನಡೆದ ವಿಷಯ ತಿಳಿದು ದಿಢೀರ್ ಪ್ರತಿಭಟನೆ ನಡೆಸಿದರು. ಬಸ್‌ಗಳು ಡಿಪೋದಿಂದ ಹೊರಗೆ ಹೋಗದಂತೆ ತಡೆದು ಎರಡು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು.
 
ಹಲ್ಲೆ ನಡೆಸಿದ ವ್ಯಕ್ತಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು. ನಂತರ ಸ್ಥಳಕ್ಕೆ ಆಗಮಿಸಿದ ಬಿಎಂಟಿಸಿ ಹಿರಿಯ ಅಧಿಕಾರಿಗಳು ಹಾಗೂ ಪೊಲೀಸರು, ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.

ಅಧಿಕಾರಿಗಳ ಭರವಸೆ ಒಪ್ಪಿಗೆಯಿಂದ ಕೆಲವು ಚಾಲಕರು ಕರ್ತವ್ಯಕ್ಕೆ ಹಾಜರಾಗಲು ಮುಂದಾದಾಗ, ಎರಡು ಕಾರ್ಮಿಕ ಗುಂಪುಗಳ ನಡುವೆ ಘರ್ಷಣೆ ನಡೆದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಘಟನೆ ಹಿನ್ನೆಲೆಯಲ್ಲಿ ದೂರು ದಾಖಲಿಸಿಕೊಂಡಿರುವ ರಾಜಾನುಕುಂಟೆ ಪೊಲೀಸರು, ಓಂಕಾರಮೂರ್ತಿ ಎಂಬುವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.