ADVERTISEMENT

ಬಿಎಂಟಿಸಿ: ನೌಕರರಿಗೂ ನಾನಾ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2013, 19:49 IST
Last Updated 6 ಜುಲೈ 2013, 19:49 IST

ಬೆಂಗಳೂರು: `ನನಗೀಗ 53 ವರ್ಷ. 31 ವರ್ಷದಿಂದ ಬಸ್ ಕಂಡಕ್ಟರ್ ಆಗಿಯೇ ಕಾರ್ಯನಿರ್ವಹಿಸುತ್ತಿದ್ದೇನೆ. 15 ವರ್ಷ ಸೇವೆ ಸಲ್ಲಿಸಿದ ಬಳಿಕ ಸಹಜವಾಗಿ ಬಡ್ತಿ ಸಿಗಬೇಕಿತ್ತು. ನಿಗಮದ ಹಿರಿಯ ಅಧಿಕಾರಿಗಳ ಧೋರಣೆಯಿಂದ ಬಡ್ತಿ ಮರೀಚಿಕೆಯಾಗಿದೆ. ಕಂಡಕ್ಟರ್ ಆಗಿಯೇ ನಿವೃತ್ತಿ ಹೊಂದಲಿದ್ದೇನೆ ಎಂಬ ಹತಾಶ ಭಾವನೆ ಕಾಡಲಾರಂಭಿಸಿದೆ'.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಕಂಡಕ್ಟರ್ ಒಬ್ಬರ ನೋವಿನ ನುಡಿ ಇದು. ಬಸ್ ಚಾಲಕರು ಹಾಗೂ ಕಂಡಕ್ಟರ್‌ಗಳು ಎದುರಿಸುತ್ತಿರುವ ಹತ್ತಾರು ಸಮಸ್ಯೆಗಳ ಬಗ್ಗೆ ಅವರು ಅಳಲು ತೋಡಿಕೊಂಡರು. ಉಳಿದ ಸಿಬ್ಬಂದಿ ಸಹ ದನಿಗೂಡಿಸಿದರು. `ಚಾಲಕರು ಹಾಗೂ ಕಂಡಕ್ಟರ್‌ಗಳಿಗೆ ಬಡ್ತಿ ಸಿಗುವಾಗ 25 ವರ್ಷ ಕಳೆದಿರುತ್ತದೆ. ಇದು ಅನ್ಯಾಯದ ಪರಮಾವಧಿ' ಎಂದು ಅವರು ದೂರಿದರು.

`ಕಂಡಕ್ಟರ್ ಉದ್ಯೋಗ ಒತ್ತಡದ ಕೆಲಸ. ಎಷ್ಟೇ ಸಮಾಧಾನದಿಂದ ಕೆಲಸ ಮಾಡಬೇಕು ಎಂದು ಬಯಸಿದರೂ ಒತ್ತಡ ಇದ್ದೇ ಇರುತ್ತದೆ. ಕೆಲವು ಪ್ರಯಾಣಿಕರು ಸಹ ಅನಗತ್ಯವಾಗಿ ಬಸ್‌ನಲ್ಲಿ ರಗಳೆ ಮಾಡುತ್ತಾರೆ.

ಕೆಲವು ವರ್ಷಗಳ ಕಾಲ ಸಹನೆಯಿಂದ ಕೆಲಸ ಮಾಡಬಹುದು. ಮಧ್ಯವಯಸ್ಸಿನಲ್ಲಿ ಅನಾರೋಗ್ಯವೂ ಬೆನ್ನ ಹಿಂದೆಯೇ ಇರುತ್ತದೆ' ಎಂದು ಅವರು ವಾಸ್ತವ ಚಿತ್ರವನ್ನು ಬಿಚ್ಚಿಟ್ಟರು.

`ಚಾಲಕರು ಹಾಗೂ ಕಂಡಕ್ಟರ್‌ಗಳು ಸಂಸ್ಥೆಯ ಎರಡು ಕಣ್ಣುಗಳಿದ್ದಂತೆ ಎಂದು ಸಚಿವರು ಹಾಗೂ ಅಧಿಕಾರಿಗಳು ಪದೇ ಪದೇ ಹೇಳುತ್ತಾರೆ. ಸೌಲಭ್ಯ ನೀಡುವಾಗ ಮಾತ್ರ ಈ ಕಣ್ಣುಗಳಿಗೆ ಸುಣ್ಣ ಹಾಕಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಂಸ್ಥೆ ಭಾರಿ ನಷ್ಟ ಹೊಂದಲು ಸಿಬ್ಬಂದಿಗೆ ಅಧಿಕ ಪ್ರಮಾಣದಲ್ಲಿ ನೀಡುತ್ತಿರುವ ವೇತನವೇ ಕಾರಣ ಎಂದು ಬಿಂಬಿಸಲಾಗುತ್ತಿದೆ. ಡಿಎ ಹಾಗೂ ಮನೆ ಬಾಡಿಗೆ ಭತ್ಯೆಯನ್ನು ಒಟ್ಟು ಸೇರಿಸಿ ವೇತನ ಹೆಚ್ಚಳ ಮಾಡಲಾಗಿದೆ ಎಂದು ಸಾರಿಗೆ ಸಚಿವರು ಹೇಳಿದ್ದರು.

ಈವರೆಗೂ ಡಿಎ ಹಾಗೂ ಮನೆ ಬಾಡಿಗೆ ಭತ್ಯೆಯನ್ನು ಒಗ್ಗೂಡಿಸಿಲ್ಲ' ಎಂದು ಮತ್ತೊಬ್ಬ ಚಾಲಕ ಬೇಸರ ವ್ಯಕ್ತಪಡಿಸಿದರು.

`ರಜೆ ನೀಡುವಾಗಲೂ ಹಿರಿಯ ಅಧಿಕಾರಿಗಳು ಕಿರುಕುಳ ನೀಡುತ್ತಾರೆ. ವಾರಕ್ಕೆ ಮೊದಲೇ ರಜಾ ಅರ್ಜಿ ಕೊಡಬೇಕು ಎಂಬುದು ಅಧಿಕಾರಿಗಳ ವಾದ. ಅನಾರೋಗ್ಯಪೀಡಿತರಾಗಿ ರಜೆ ಹಾಕಿದಾಗಲೂ ಕಿರುಕುಳ ನೀಡುತ್ತಾರೆ. ಇಂತಹ ಸಂದರ್ಭದಲ್ಲಿ ಗೈರು ಹಾಜರಿ ಎಂದು ಪರಿಗಣಿಸಿ ವೇತನ ಕಡಿತ ಮಾಡಲಾಗುತ್ತದೆ. ಮಕ್ಕಳು ಅನಾರೋಗ್ಯಪೀಡಿತರಾದಾಗ ತಾಯಿಯೇ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ತುರ್ತು ರಜೆ ಹಾಕಬೇಕಾಗುತ್ತದೆ. ಕೆಲವು ಬಾರಿ ರಜಾ ಅರ್ಜಿ ನೀಡದ್ದಕ್ಕೆ 100 ಹಾಗೂ 200 ರೂಪಾಯಿ ದಂಡ ಹಾಕಲಾಗುತ್ತದೆ. ವಾರ ಮೊದಲೇ ಸೂಚನೆ ನೀಡಿ ಅನಾರೋಗ್ಯ ಬರುತ್ತದಾ' ಎಂದು ಮಹಿಳಾ ಕಂಡಕ್ಟರ್ ಒಬ್ಬರು ಪ್ರಶ್ನಿಸಿದರು.

`ಅನಾರೋಗ್ಯ ಪೀಡಿತ ಬಿಎಂಟಿಸಿ ಸಿಬ್ಬಂದಿಗೆ ಚಿಕಿತ್ಸೆ ಪಡೆಯಲು 25 ಆಸ್ಪತ್ರೆಗಳನ್ನು ಗುರುತಿಸಲಾಗಿತ್ತು. ಆದರೀಗ ಜಯದೇವ ಆಸ್ಪತ್ರೆ, ನಾರಾಯಣ ಹೃದಯಾಲಯ ಸೇರಿದಂತೆ ಐದು ಆಸ್ಪತ್ರೆಗಳಲ್ಲಿ ಮಾತ್ರ ಚಿಕಿತ್ಸೆ ದೊರಕುತ್ತಿದೆ.

ದೊಡ್ಡ ಆಸ್ಪತ್ರೆಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತದೆ. ಉಳಿದ ಕಾಯಿಲೆಗೆ ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಬೆಲೆ ಪಾವತಿಸಬೇಕಿದೆ' ಎಂದು ಚಾಲಕರೊಬ್ಬರು ಮಾಹಿತಿ ನೀಡಿದರು. `ಬಸ್ ಪಾಸ್ ಪಡೆದ ಕೂಡಲೇ ಪ್ರಯಾಣಿಕರು ಸಹಿ ಹಾಕಿ ಇಟ್ಟುಕೊಳ್ಳಬೇಕು. ಸಹಿ ಹಾಕದೆ ಇದ್ದಾಗ ನಿರ್ವಾಹಕರಿಗೆ ದಂಡ ವಿಧಿಸಲಾಗುತ್ತದೆ. ಪ್ರಯಾಣಿಕರು ಮಾಡಿದ ತಪ್ಪಿಗೆ ನಾವು ಶಿಕ್ಷೆ ಅನುಭವಿಸಬೇಕಿದೆ. ಸಾಮಾನ್ಯ ಬಸ್‌ಗಳಲ್ಲಿ ಶೇ 70 ಮಂದಿ ಬಸ್ ಪಾಸ್ ಪಡೆದೇ ಪ್ರಯಾಣ ಮಾಡುತ್ತಾರೆ. ಕೆಲವು ಮಾರ್ಗಗಳಲ್ಲಿ ಲಾಭ ಕಡಿಮೆಯಾದಾಗ ಚಾಲಕರು ಹಾಗೂ ನಿರ್ವಾಹಕರನ್ನು ದೂರಲಾಗುತ್ತದೆ. ಬಹುತೇಕ ಮಂದಿ ಪಾಸ್ ಮೂಲಕ ಪ್ರಯಾಣಿಸಿದರೆ ನಾವು ಹೇಗೆ ಕಲೆಕ್ಷನ್ ಜಾಸ್ತಿ ಮಾಡುವುದು' ಎಂದು ಅವರು ಪ್ರಶ್ನಿಸಿದರು.

`ಚಿಲ್ಲರೆ ಸಮಸ್ಯೆಯಿಂದ ಕಂಡಕ್ಟರ್‌ಗಳು ಹೆಚ್ಚು ತೊಂದರೆಗೆ ಒಳಗಾಗುತ್ತಿದ್ದಾರೆ. ಪ್ರತಿದಿನ ನೂರಾರು ಮಂದಿಯೊಂದಿಗೆ ಚಿಲ್ಲರೆಗಾಗಿ ಜಗಳ ಮಾಡಬೇಕಾದ ಸ್ಥಿತಿ ಇದೆ. ಇದರಿಂದಾಗಿ ನೆಮ್ಮದಿ ನಾಶವಾಗುತ್ತಿದೆ.

ಪ್ರಯಾಣ ದರ ಏರಿಸಿದ ಮೇಲೆ ಈ ಸಮಸ್ಯೆ ಮತ್ತಷ್ಟು ಹೆಚ್ಚಿದೆ. ಪ್ರಮುಖ ಬಸ್ ನಿಲ್ದಾಣಗಳಲ್ಲಿ ಚಿಲ್ಲರೆ ಕೌಂಟರ್‌ಗಳನ್ನು ತೆರೆಯಬೇಕು' ಎಂಬುದು ಸಂಸ್ಥೆಯ ಸಿಬ್ಬಂದಿಯೊಬ್ಬರ ಒತ್ತಾಯ.

`ಸಂಸ್ಥೆಯ ಸಿಬ್ಬಂದಿ ನಿವೃತ್ತರಾದಾಗ ಉಚಿತ ಪಾಸ್ ವ್ಯವಸ್ಥೆಯೂ ಇಲ್ಲ. ಶೇ 50 ಹಣ ಪಾವತಿಸಿ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣ ಮಾಡಬೇಕಿದೆ. ಅದು ಸಹ ನಗರದೊಳಗೆ ಮಾತ್ರ. 35-40 ವರ್ಷ ಸೇವೆ ಸಲ್ಲಿಸಿದ ಸಿಬ್ಬಂದಿ ಟಿಕೆಟ್ ಕೊಟ್ಟೇ ಪ್ರಯಾಣ ಮಾಡಬೇಕು ಎಂಬುದು ಯಾವ ನ್ಯಾಯ' ಎಂದು ಅವರು ಪ್ರಶ್ನಿಸಿದರು.

`ಮುಷ್ಕರ ನಂತರ ಸಮಸ್ಯೆ ದುಪ್ಪಟ್ಟು'
`ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ವರ್ಷ ಮುಷ್ಕರ ನಡೆಸಿದ ಬಳಿಕ ಸಮಸ್ಯೆ ಕಡಿಮೆಯಾಗುವ ಬದಲು ದುಪ್ಪಟ್ಟಾಗಿದೆ' ಎಂದು ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸುತ್ತಾರೆ.
`ಮುಷ್ಕರದ ಬಳಿಕ ಸಮಸ್ಯೆಗಳೆಲ್ಲ ಬಗೆಹರಿಯಲಿವೆ ಎಂದು ಆಸೆಪಟ್ಟಿದ್ದೆವು. ಸಾರಿಗೆ ಸಚಿವರು, ಹಿರಿಯ ಅಧಿಕಾರಿಗಳು ಹಾಗೂ ಕಾರ್ಮಿಕ ಮುಖಂಡರ ನಡುವಿನ ಒಪ್ಪಂದ ಭರವಸೆ ಹುಟ್ಟಿಸಿತ್ತು. ಆದರೆ, ನಡೆದದ್ದೇ ಬೇರೆ. ರಜೆ ಮತ್ತಿತರ ಸೌಲಭ್ಯಕ್ಕಾಗಿ ಅಧಿಕಾರಿಗಳು ಲಂಚ ಕೇಳುವುದನ್ನು ಕಡಿಮೆ ಮಾಡಿದರು. ಬೇರೆ ರೀತಿಯಲ್ಲಿ ಕಿರುಕುಳ ನೀಡಲು ಆರಂಭಿಸಿದರು. ಅಧಿಕಾರಿಗಳು ಹಾಗೂ ಕಾರ್ಮಿಕರ ಮುಖಂಡರ ನಡುವೆ ಸಿಬ್ಬಂದಿಯ ಸ್ಥಿತಿ ಅಡಕತ್ತರಿಯಲ್ಲಿ ಸಿಲುಕಿದಂತೆ ಆಗಿದೆ' ಎಂದು ಚಾಲಕರು ಹಾಗೂ ನಿರ್ವಾಹಕರು ಅಳಲು ತೋಡಿಕೊಂಡರು.

ರಜಾ ಸಮಸ್ಯೆ ಪರಿಹಾರಕ್ಕೆ ಕಂಪ್ಯೂಟರೀಕರಣ: ಎಂಡಿ
ಸಂಸ್ಥೆಯಲ್ಲಿ ರಜಾ ನೀಡುವಾಗ ಆಗುತ್ತಿರುವ ಸಮಸ್ಯೆಗಳ ಬಗ್ಗೆ ತುಂಬಾ ದೂರುಗಳು ಬಂದಿವೆ. ಈ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಮುಂದಾಗಿದ್ದೇವೆ. ಹಂತ ಹಂತವಾಗಿ ಡಿಪೊಗಳನ್ನು ಕಂಪ್ಯೂಟರೀಕರಣ ಮಾಡಲಾಗುವುದು. ಈ ಮೂಲಕ ರಜಾ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಈಗಾಗಲೇ ಟೆಂಡರ್ ಕರೆಯಲಾಗಿದೆ. ಬಡ್ತಿ ಸಂಬಂಧಿ ದೂರಿಗೂ ಶೀಘ್ರ ಪರಿಹಾರ ದೊರಕಲಿದೆ. ಬಡ್ತಿ ನೀಡಲು ಜೇಷ್ಠತೆಯ ಆಧಾರದಲ್ಲಿ ಪಟ್ಟಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. 15 ದಿನಗಳಲ್ಲಿ ಬಡ್ತಿ ನೀಡಲಾಗುವುದು. ಚುನಾವಣಾ ಕಾರಣದಿಂದ ಕಳೆದ ತಿಂಗಳು ಮಾತ್ರ ವೇತನ ಪಾವತಿಯಲ್ಲಿ ವಿಳಂಬವಾಗಿದೆ. ಉಳಿದಂತೆ ಸಮಸ್ಯೆ ಇಲ್ಲ.
  -ಅಂಜುಮ್ ಪರ್ವೇಜ್, ವ್ಯವಸ್ಥಾಪಕ ನಿರ್ದೇಶಕ, ಬಿಎಂಟಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT