ADVERTISEMENT

ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿರುಹೊತ್ತಿಗೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2013, 20:13 IST
Last Updated 14 ಏಪ್ರಿಲ್ 2013, 20:13 IST

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಹವಣಿಕೆಯಲ್ಲಿರುವ ಕಾಂಗ್ರೆಸ್, ಪಾಲಿಕೆಯಲ್ಲಿ ಬಿಜೆಪಿಯ ಆಡಳಿತಾವಧಿಯಲ್ಲಿ ನಡೆದಿರುವ ವೈಫಲ್ಯಗಳ ಕುರಿತ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದೆ. ಪಾಲಿಕೆ ವ್ಯಾಪ್ತಿಯ ಬಿಜೆಪಿ ಸಚಿವರು, ಶಾಸಕರ ವಿರುದ್ಧದ ಆರೋಪಗಳನ್ನೂ ಸೇರಿಸಿದೆ.

ಪಕ್ಷದ ಕಚೇರಿಯಲ್ಲಿ ಭಾನುವಾರ ನಡೆದ ಡಾ.ಅಂಬೇಡ್ಕರ್ ಜನ್ಮದಿನಾಚರಣೆ ಸಮಾರಂಭದಲ್ಲೇ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ `ಬಿಬಿಎಂಪಿ ದುರಾಡಳಿತ-ಬಿಜೆಪಿ ಕರ್ಮಕಾಂಡ' ಎಂಬ ಹೆಸರಿನ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಿದರು.

`ಕಾಂಗ್ರೆಸ್ ಪಕ್ಷದ ಆಡಳಿತಾವಧಿಯಲ್ಲಿ ಉದ್ಯಾನ ನಗರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬೆಂಗಳೂರು ಈಗ ತ್ಯಾಜ್ಯ ನಗರಿಯಾಗಿ ಪರಿವರ್ತನೆಯಾಗಿದೆ. ಕಸ ವಿಲೇವಾರಿಯನ್ನು ಸಮರ್ಪಕವಾಗಿ ನಿರ್ವಹಿಸದೆ ಜಾಗತಿಕ ಮಟ್ಟದಲ್ಲಿ ಬೆಂಗಳೂರಿಗೆ ಕಪ್ಪು ಮಸಿ ಬಳಿಯಲಾಗಿದೆ' ಎಂಬ ಆರೋಪ ಈ ಹೊತ್ತಿಗೆಯಲ್ಲಿದೆ.

ಬಿಜೆಪಿಯ ಬಿಬಿಎಂಪಿ ಸದಸ್ಯರು ಹಾಗೂ ಅಧಿಕಾರಿಗಳು ಕಾಮಗಾರಿಗಳನ್ನು ನಡೆಸದೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸುಮಾರು ರೂ 1,539 ಕೋಟಿಗೂ ಅಧಿಕ ಮೊತ್ತದ ಅಕ್ರಮ ಎಸಗಿದ್ದಾರೆ. ಈ ಬಗ್ಗೆ ಬಿಎಂಟಿಎಫ್ ತನಿಖೆಗೆ ಮುಂದಾದಾಗ ದಾಖಲೆಗಳನ್ನು ಸುಟ್ಟು ಹಾಕಿ ಹಗರಣದಿಂದ ಬಚಾವಾಗಲು ಅಧಿಕಾರಿಗಳು ಯತ್ನಿಸಿದ್ದಾರೆ ಎಂದು ದೂರಲಾಗಿದೆ.

ರಸ್ತೆ ಗುಂಡಿ ಮುಚ್ಚುವುದು, ಬಗರ್ ಹುಕುಂ ಜಮೀನಿನ ಸಕ್ರಮೀಕರಣ, ಸ್ವಾತಂತ್ರ್ಯ ಉದ್ಯಾನ ಕಾಮಗಾರಿ, ಮೇವರಿಕ್, ಡಿಎಲ್‌ಎಫ್ ಮತ್ತಿತರ ಖಾಸಗಿ ಕಂಪೆನಿಗಳಿಗೆ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿರುವುದು ಸೇರಿದಂತೆ ಹಲವು ಹಗರಣಗಳು ಬಿಜೆಪಿ ಆಡಳಿತ ಅವಧಿಯಲ್ಲಿ ನಡೆದಿವೆ. 2006-10ರ ಅವಧಿಯಲ್ಲಿ ಮೂವರು ಬಿಬಿಎಂಪಿ ಆಯುಕ್ತರು ನಡೆಸಿದ್ದಾರೆ ಎನ್ನಲಾದ, ಹಣ ದುರ್ಬಳಕೆ, ಶಿಕ್ಷಣ ಸ್ಥಾಯಿ ಸಮಿತಿ ಕಡತಗಳ ನಾಪತ್ತೆ ಪ್ರಕರಣಗಳನ್ನು ಕಿರು ಹೊತ್ತಿಗೆಯಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಲಾಗಿದೆ.

ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಉಪ ಮುಖ್ಯಮಂತ್ರಿ ಆರ್.ಆಶೋಕ, ಸಚಿವರಾದ ಎಸ್.ಸುರೇಶ್‌ಕುಮಾರ್, ವಿ.ಸೋಮಣ್ಣ, ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತಿತರರ ವಿರುದ್ಧ ದಾಖಲಾಗಿರುವ ಪ್ರಮುಖ ಮೊಕದ್ದಮೆಗಳ ವಿವರಗಳನ್ನು ಉಲ್ಲೇಖಿಸಲಾಗಿದೆ.

ಮೆಟ್ರೋ ಕಾಮಗಾರಿ ಆಮೆ ಗತಿಯಲ್ಲಿ ನಡೆಯುತ್ತಿದ್ದು, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಬಿಬಿಎಂಪಿ ಸಂಪೂರ್ಣ ವಿಫಲವಾಗಿದೆ ಎಂದು ಈ ಕಿರು ಹೊತ್ತಿಗೆಯಲ್ಲಿ ಪ್ರಸ್ತಾಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.