ಬೆಂಗಳೂರು: ನಗರದಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟಿರುವ ಅಧಿಕಾರಿಗಳ ವಿರುದ್ಧ ತೆಗೆದುಕೊಂಡಿರುವ ಕ್ರಮದ ಕುರಿತಾಗಿ ಮಾಹಿತಿ ನೀಡುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಹೈಕೋರ್ಟ್ ಮಂಗಳವಾರ ನಿರ್ದೇಶಿಸಿದೆ.
ಈ ಮಾಹಿತಿ ನೀಡಲು ಒಂದು ವಾರದ ಕಾಲಾವಕಾಶ ನೀಡಿ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ನೇತೃತ್ವದ ವಿಭಾಗೀಯ ಪೀಠ ಆದೇಶಿಸಿದೆ.
ಹಲವು ವರ್ಷ ಕಳೆದರೂ ಚಂದ್ರಾ ಲೇಔಟ್‌ನಿಂದ ನಾಗರಬಾವಿಗೆ 80 ಅಡಿ ರಸ್ತೆ ನಿರ್ಮಾಣ ಕಾಮಗಾರಿ ಇದುವರೆಗೆ ಮುಗಿಯದಿರುವುದನ್ನು ಪ್ರಶ್ನಿಸಿ `ಚಂದ್ರಾ ಲೇಔಟ್ ಮೊದಲ ಹಂತದ ನಿವಾಸಿಗಳ ಸಂಘ~ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ನೇತೃತ್ವದ ವಿಭಾಗೀಯ ಪೀಠ ನಡೆಸುತ್ತಿದೆ.
ಈ ರಸ್ತೆಯ ನಡುವೆ ಅನಧಿಕೃತ ಕಟ್ಟಡಗಳ ನಿರ್ಮಾಣ ನಡೆಯುತ್ತಿರುವ ಕುರಿತು ವಿಚಾರಣೆ ವೇಳೆ ನ್ಯಾಯಮೂರ್ತಿಗಳ ಗಮನಕ್ಕೆ ಬಂತು. ಇದರಿಂದ ಅವರು ಬಿಡಿಎಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
`ಅನಧಿಕೃತ ಕಟ್ಟಡಗಳ ಬಗ್ಗೆ ಸಮೀಕ್ಷೆ ನಡೆಸುವ ಸಲುವಾಗಿಯೇ ಬಿಡಿಎನಲ್ಲಿ ಪ್ರತ್ಯೇಕ ವಿಭಾಗ ಇದೆ. ಆದರೆ ವಿಭಾಗದಲ್ಲಿನ ಸಿಬ್ಬಂದಿ ಮೌನ ತಾಳಿರುವ ಕಾರಣ ಇಂತಹ ಕಟ್ಟಡಗಳು ರಾಜಾರೋಷವಾಗಿ ತಲೆಎತ್ತಿವೆ. ತಮ್ಮ ಕೆಲಸವನ್ನು ಸರಿಯಾಗಿ ನಿರ್ವಹಿಸದವರ ವಿರುದ್ಧ ಆರೋಪಪಟ್ಟಿ ತಯಾರು ಮಾಡಿ ಮುಂದಿನ ಕ್ರಮಕ್ಕಾಗಿ ಸರ್ಕಾರಕ್ಕೆ ಕಳುಹಿಸಿಕೊಡುವ ಅಗತ್ಯ ಇದೆ. ಇಂಥ ಅಧಿಕಾರಿಗಳನ್ನು ಅಮಾನತಿನಲ್ಲಿ ಇಡಬೇಕು~ ಎಂದು ಪೀಠ ಕಿಡಿಕಾರಿತು.
`ಜೆಸಿಬಿ ತೆಗೆದುಕೊಂಡು ಹೋಗಿ ಅನಧಿಕೃತ ಕಟ್ಟಡ ನೆಲಸಮ ಮಾಡಿ, ಇದನ್ನು ಮಾಡಲು ಸಾಧ್ಯವಾಗುತ್ತಿಲ್ಲ ಏಕೆ~ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು. ಅಂತೆಯೇ, ಈ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ತೆಗೆದುಕೊಂಡಿರುವ ಕ್ರಮದ ಕುರಿತು ಮಾಹಿತಿ ನೀಡಲು ಆದೇಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.