ADVERTISEMENT

ಬಿಬಿಎಂಪಿಗೆ ವಂಚಿಸಿದ ಏಜೆನ್ಸಿಗಳು: 16 ಕೋಟಿ ಜಾಹೀರಾತು ತೆರಿಗೆ ಬಾಕಿ

ಎಂ.ಕೀರ್ತಿಪ್ರಸಾದ್
Published 23 ಜನವರಿ 2012, 19:30 IST
Last Updated 23 ಜನವರಿ 2012, 19:30 IST

ಬೆಂಗಳೂರು: ರಾಜಧಾನಿಯ ಹಲವು ರಸ್ತೆಗಳ ಪಾದಚಾರಿ ಮಾರ್ಗದಲ್ಲಿ ಬಸ್ ತಂಗುದಾಣಗಳನ್ನು ನಿರ್ಮಿಸಿ, ಜಾಹೀರಾತು ಫಲಕಗಳನ್ನು ಅಳವಡಿಸಿರುವ ಖಾಸಗಿ ಜಾಹೀರಾತು ಏಜೆನ್ಸಿಗಳು ಈವರೆಗೆ 16 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪಾಲಿಕೆ ಫಲಕಗಳನ್ನು ತೆರವುಗೊಳಿಸಿ, ಏಜೆನ್ಸಿಗಳನ್ನು ಕಪ್ಪು ಪಟ್ಟಿಗೆ ಸೇರಿಸಲು ಚಿಂತಿಸಿದೆ.

ವಿವಿಧ ಖಾಸಗಿ ಏಜೆನ್ಸಿಗಳು ನಗರದ ವಿವಿಧ ರಸ್ತೆಗಳಲ್ಲಿ ಸುಮಾರು 653 ತಂಗುದಾಣಗಳನ್ನು ನಿರ್ಮಿಸಿವೆ. ಈ ತಂಗುದಾಣಗಳಲ್ಲಿ ಸಾಕಷ್ಟು ಜಾಹೀರಾತುಗಳನ್ನು ಅಳವಡಿಸಿವೆ. ಆದರೆ ಪಾಲಿಕೆಗೆ ಮಾತ್ರ ನೆಲಬಾಡಿಗೆ, ಸೇವಾ ಶುಲ್ಕ ಹಾಗೂ ಜಾಹೀರಾತು ತೆರಿಗೆಯನ್ನು ಪಾವತಿಸುತ್ತಿಲ್ಲ. ಇದರಿಂದ ಪಾಲಿಕೆಗೆ ಬರಬೇಕಿದ್ದ 16.74 ಕೋಟಿ ರೂಪಾಯಿ ಕೈತಪ್ಪಿದೆ. ಐದಾರು ಬಾರಿ ನೋಟಿಸ್ ನೀಡಿದರೂ ಸಂಸ್ಥೆಗಳು `ಕ್ಯಾರೆ~ ಎನ್ನುತ್ತಿಲ್ಲ!

ಪ್ರಯಾಣಿಕರ ಅನುಕೂಲಕ್ಕಾಗಿ ಖಾಸಗಿ ಸಹಭಾಗಿತ್ವದಲ್ಲಿ ನಗರದ ಹಲವೆಡೆ ನೂರಾರು ಬಸ್ ತಂಗುದಾಣಗಳನ್ನು ನಿರ್ಮಿಸಲು ಪಾಲಿಕೆ ನಿರ್ಧರಿಸಿತು. ನಗರದ ಆಯ್ದ ರಸ್ತೆಗಳಲ್ಲಿ ಕಿಯಾಸ್ಕ್ ಮಾದರಿಯಲ್ಲಿ (ತಂಗುದಾಣದ ಎರಡೂ ಬದಿ, ಹಿಂಭಾಗ ಹಾಗೂ ಮೇಲ್ಭಾಗದಲ್ಲಿ ಜಾಹೀರಾತು ಫಲಕವಿರುವ) ತಂಗುದಾಣ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಟೆಂಡರ್ ಆಹ್ವಾನಿಸಿತು.

ಟೆಂಡರ್ ನಿಯಮದಂತೆ ಸಂಸ್ಥೆಯೇ ಪಾದಚಾರಿ ಮಾರ್ಗಗಳಲ್ಲಿ ತಂಗುದಾಣ ನಿರ್ಮಿಸಬೇಕು. ಇದಕ್ಕಾಗಿ ಪಾಲಿಕೆಗೆ ನೆಲ ಬಾಡಿಗೆ ನೀಡಬೇಕು. ಇದಕ್ಕೆ ಸೇವಾ ಶುಲ್ಕವನ್ನು ಪಾವತಿಸಬೇಕು. ಹಾಗೆಯೇ ತಂಗುದಾಣದಲ್ಲಿ ಅಳವಡಿಸುವ ಜಾಹೀರಾತು ಫಲಕಗಳಿಗೆ ತೆರಿಗೆ ಪಾವತಿಸಬೇಕು.
 
ಐದು ವರ್ಷ ಅವಧಿ ಪೂರ್ಣಗೊಂಡ ನಂತರ ತಂಗುದಾಣವನ್ನು ಸುಸ್ಥಿತಿಯಲ್ಲೇ ಪಾಲಿಕೆಗೆ ಹಸ್ತಾಂತರಿಸಬೇಕು ಎಂಬ ನಿಯಮ ವಿಧಿಸಿತ್ತು. ಅದರಂತೆ 2009-10ನೇ ಸಾಲಿನಲ್ಲಿ ನಗರದ ಸುಮಾರು 263 ಕಡೆಗಳಲ್ಲಿ ಏಜೆನ್ಸಿಗಳು ತಂಗುದಾಣಗಳನ್ನು ನಿರ್ಮಿಸಿವೆ.

ತಂಗುದಾಣದ ಮೇಲ್ಭಾಗ ಹಾಗೂ ಹಿಂಭಾಗದಲ್ಲಿ ಜಾಹೀರಾತು ಫಲಕ ಅಳವಡಿಸುವ `ಡಿ~ ಮಾದರಿಯ 390 ತಂಗುದಾಣಗಳು 2008-09ನೇ ಸಾಲಿನಲ್ಲಿ ನಿರ್ಮಾಣಗೊಂಡಿವೆ. ಆದರೆ ಈ ಏಜೆನ್ಸಿಗಳು ಸಹ ಪಾಲಿಕೆಗೆ ನೀಡಬೇಕಾದ ತೆರಿಗೆಯನ್ನು ಸಮರ್ಪಕವಾಗಿ ಪಾವತಿಸುತ್ತಿಲ್ಲ.

`ನಗರದ ಆಯ್ದ ರಸ್ತೆಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಸುಮಾರು 653 ತಂಗುದಾಣಗಳು ನಿರ್ಮಾಣಗೊಂಡಿವೆ. ಎಂಟಕ್ಕೂ ಹೆಚ್ಚು ಜಾಹೀರಾತು ಏಜೆನ್ಸಿಗಳು 15 ಪ್ಯಾಕೇಜ್‌ಗಳನ್ನು ಪಡೆದಿವೆ. ಈ ಏಜೆನ್ಸಿಗಳು ವಾರ್ಷಿಕ ನೆಲ ಬಾಡಿಗೆ, ಸೇವಾ ಶುಲ್ಕ (ನೆಲ ಬಾಡಿಗೆ ಮೊತ್ತದ ಶೇ 10.3ರಷ್ಟು ಸೇವಾ ಶುಲ್ಕ) ಹಾಗೂ ಜಾಹೀರಾತು ತೆರಿಗೆಯನ್ನು ಪಾವತಿಸಬೇಕು. ಆದರೆ ಇದನ್ನು ಸರಿಯಾಗಿ ನೀಡುತ್ತಿಲ್ಲ~ ಎಂದು ಪಾಲಿಕೆಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದರು.

`ಈ ಏಜೆನ್ಸಿಗಳು ಒಟ್ಟು 39 ಕೋಟಿ ರೂಪಾಯಿ ತೆರಿಗೆ ಪಾವತಿಸಬೇಕಿದ್ದು, ಈವರೆಗೆ 22.75 ಕೋಟಿ ರೂಪಾಯಿ ಮಾತ್ರ ಪಾವತಿಸಿವೆ. ಸಂಸ್ಥೆಗಳು ಇನ್ನೂ 16.74 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿವೆ. ಬಾಕಿ ತೆರಿಗೆ ಪಾವತಿಸುವಂತೆ ಏಜೆನ್ಸಿಗಳಿಗೆ ಐದಾರು ಬಾರಿ ನೋಟಿಸ್ ನೀಡಿದ್ದರೂ ಸ್ಪಂದಿಸಿಲ್ಲ. ಆ ಹಿನ್ನೆಲೆಯಲ್ಲಿ ಜಾಹೀರಾತು ಫಲಕ ತೆರವುಗೊಳಿಸುವ ಬಗ್ಗೆ ಚಿಂತಿಸಲಾಗಿದೆ. ಶೀಘ್ರವಾಗಿ ಈ ಬಗ್ಗೆ ನಿರ್ಧರಿಸಲಾಗುವುದು~ ಎಂದು ಹೇಳಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.