ಬೆಂಗಳೂರು: `ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗ ಬಹುತೇಕ ನಿಷ್ಕ್ರಿಯವಾಗಿದ್ದು ಕೂಡಲೇ ಆಯೋಗಕ್ಕೆ ಅಧ್ಯಕ್ಷರನ್ನು ನೇಮಿಸಲು ರಾಜ್ಯಪಾಲರು ಕ್ರಮ ಕೈಗೊಳ್ಳಬೇಕು~ ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯ ಮನವಿ ಮಾಡಿದರು.
ವಿಜಯಿ ಭವಾನಿ ಕ್ಷೇಮಾಭಿವೃದ್ಧಿ ಸಂಘ ತನ್ನ ಬೆಳ್ಳಿಹಬ್ಬ ಮತ್ತು ಛತ್ರಪತಿ ಶಿವಾಜಿ ಮಹಾರಾಜರ 394ನೇ ಜಯಂತಿ ಅಂಗವಾಗಿ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿದರು.
`ರಾಜ್ಯದಲ್ಲಿ ಕ್ಷತ್ರೀಯ ಸಮುದಾಯದ ಜನಸಂಖ್ಯೆ 25- 30 ಲಕ್ಷದಷ್ಟಿದೆ.
ಜಾತಿ ಗಣತಿ ಪೂರ್ಣಗೊಂಡ ನಂತರ ಸಮುದಾಯದ ಸಂಖ್ಯೆ ಎಷ್ಟಿದೆ ಎಂಬ ಸ್ಪಷ್ಟ ಚಿತ್ರಣ ದೊರೆಯಲಿದೆ. ಆರ್ಥಿಕವಾಗಿ ಶೈಕ್ಷಣಿಕವಾಗಿ ಕ್ಷತ್ರೀಯ ಸಮಾಜ ಹಿಂದುಳಿದಿದೆ~ ಎಂದರು.
`ಈ ಸಮುದಾಯವನ್ನು 2 ಎ ವರ್ಗಕ್ಕೆ ಸೇರಿಸಲು ಮುಂದಾಗಬೇಕಿದೆ. ಆಂಧ್ರಪ್ರದೇಶ, ತಮಿಳುನಾಡು ಮತ್ತಿತರ ರಾಜ್ಯಗಳಲ್ಲಿ ಕ್ಷತ್ರೀಯರು ಹಿಂದುಳಿದ ವರ್ಗಗಳಿಗೆ ಸೇರಿದ್ದಾರೆ. ಆದರೆ ರಾಜ್ಯದಲ್ಲಿ ಇನ್ನೂ ಈ ಕಾರ್ಯ ನಡೆದಿಲ್ಲ. ಆಯೋಗಕ್ಕೆ ಅಧ್ಯಕ್ಷರನ್ನು ನೇಮಿಸುವುದರಿಂದ ಹಿಂದುಳಿದ ವರ್ಗಗಳಿಗೆ ನ್ಯಾಯ ದೊರೆಯುತ್ತದೆ~ ಎಂದು ಅವರು ಅಭಿಪ್ರಾಯಪಟ್ಟರು.
`ಶಿವಾಜಿ ಕಾಲದಿಂದಲೂ ಮರಾಠರು ಯೋಧರಾಗಿ ಮೆರೆದವರು. ಪಾಣಿಪತ್ ಕದನದಲ್ಲಿ, ಪ್ರಥಮ ಮತ್ತು ದ್ವಿತೀಯ ಮಹಾಯುದ್ಧದಲ್ಲಿ ಬಲಿದಾನ ಮಾಡಿದರು. ದೇಶಕ್ಕಾಗಿ ಟೊಂಕಕಟ್ಟಿ ನಿಂತ ಸಮುದಾಯ ಇದು~ ಎಂದರು. ರಾಜ್ಯಪಾಲ ಎಚ್.ಆರ್.ಭಾರದ್ವಾಜ್, `ಶಿವಾಜಿ ಬಗ್ಗೆ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡಬೇಕು. ಅವರ ಸಾಧನೆಯನ್ನು ಮುಂದಿನ ಪೀಳಿಗೆ ಕೂಡ ಸ್ಮರಿಸುವಂತಿದೆ ~ ಎಂದು ಸ್ಮರಿಸಿದರು.
`ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೇಶಭಕ್ತಿ ಮೆರೆದ ಮರಾಠರು ಪ್ರಸ್ತುತ ದೇಶದ ಈಶಾನ್ಯ ರಾಜ್ಯಗಳಲ್ಲಿ ಯೋಧರಾಗಿ ಸಲ್ಲಿಸುತ್ತಿರುವ ಸೇವೆ ಮಹತ್ತರವಾದುದು. ನನ್ನ ಅಧಿಕಾರ ವ್ಯಾಪ್ತಿಯಲ್ಲಿ ಸಮಾಜಕ್ಕೆ ಅಗತ್ಯವಾದ ನೆರವು ನೀಡಲು ಸಿದ್ಧ~ ಎಂದರು.
ಗೋಸಾಯಿ ಮಠದ ಸುರೇಶ್ವರಾನಂದ ಭಾರತಿ ಸ್ವಾಮೀಜಿ, ಸಮಾಜದ ಮುಖಂಡರಾದ ವಿ.ಎ.ರಾಣೋಜಿರಾವ್ ಸಾಠೆ, ಬಿ.ಆರ್.ಶ್ರೀನಿವಾಸ ಕಾಳೆ, ಆರ್.ಟಿ.ನಗರ ವೆಂಕಟೇಶ್ವರ ದೇವಸ್ಥಾನದ ಕಾರ್ಯದರ್ಶಿ ವಿಠ್ಠಲರಾವ್ ನಿಕ್ಕಂ ಪಾಟೀಲ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.