ADVERTISEMENT

ಬೇಸಿಗೆ ಶಿಬಿರ: ಈಜುಕೊಳದಲ್ಲಿ ಮುಳುಗಿ ಬಾಲಕ ಸಾವು

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2011, 19:30 IST
Last Updated 14 ಏಪ್ರಿಲ್ 2011, 19:30 IST

ಬೆಂಗಳೂರು: ಬೇಸಿಗೆ ಶಿಬಿರದ ಅಂಗವಾಗಿ ಈಜು ಕಲಿಯಲು ತೆರಳಿದ್ದ ವಿದ್ಯಾರ್ಥಿಯೊಬ್ಬ ಈಜು ಕೊಳದಲ್ಲೇ ಮುಳುಗಿ ಮೃತಪಟ್ಟಿರುವ ಘಟನೆ ದೇವನಹಳ್ಳಿ ತಾಲ್ಲೂಕಿನ ವಿಶ್ವನಾಥಪುರ ಪೊಲೀಸ್ ಠಾಣೆ ವ್ಯಾಪ್ತಿಯ ವುಡ್‌ರೀಚ್ ರೆಸಾರ್ಟ್‌ನಲ್ಲಿ ಗುರುವಾರ ನಡೆದಿದೆ.

ದೇವನಹಳ್ಳಿಯ ದಾಸರಬೀದಿಯ ನಿವಾಸಿ, ಖಾಸಗಿ ಸಂಸ್ಥೆಯಲ್ಲಿ ಭದ್ರತಾ ಸಿಬ್ಬಂದಿಯಾಗಿರುವ ರಮೇಶ್ ಎಂಬುವರ ಪುತ್ರ ಅರ್ಜುನ್ (14) ಮೃತ ವಿದ್ಯಾರ್ಥಿ. ಈತ ದೇವನಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ದೇವನಹಳ್ಳಿಯ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆ ಆಯೋಜಿಸಿದ್ದ ಬೇಸಿಗೆ ಶಿಬಿರದಲ್ಲಿ ಗುರುವಾರವಷ್ಟೇ ಸೇರಿಕೊಂಡಿದ್ದ ಈತ, 50 ವಿದ್ಯಾರ್ಥಿಗಳು ಮತ್ತು ಹತ್ತು ತರಬೇತುದಾರರ ಜೊತೆ ರೆಸಾರ್ಟ್‌ಗೆ ಈಜು ತರಬೇತಿಗೆ ತೆರಳಿದ್ದ.

ಅರ್ಜುನ್ ಮೊದಲ ಬಾರಿ ಈಜು ಕಲಿಯಲು ಕೊಳಕ್ಕೆ ಇಳಿದಿದ್ದ. ಮಧ್ಯಾಹ್ನ 12.30ರ ವೇಳೆಗೆ ಈಜು ಕಲಿಯುತ್ತಿರುವಾಗಲೇ ಮುಳುಗಿ ಮೃತಪಟ್ಟಿದ್ದಾನೆ. ಘಟನೆ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಎಲ್ಲ ತರಬೇತುದಾರರೂ ನಾಪತ್ತೆಯಾಗಿದ್ದು, ಮೊಬೈಲ್ ಫೋನ್‌ಗಳನ್ನು ಸ್ಥಗಿತಗೊಳಿಸಿದ್ದಾರೆ. ಹೀಗಾಗಿ ಘಟನೆಯ ಪೂರ್ಣ ವಿವರ ಇನ್ನೂ ಬಹಿರಂಗವಾಗಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ವಿಶ್ವನಾಥಪುರ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ADVERTISEMENT

ಹತ್ತು ಗಂಟೆಗೆ ಮಾತನಾಡಿದ್ದ: ಬೆಳಿಗ್ಗೆಯಷ್ಟೇ ಶಿಬಿರ ಸೇರಿಕೊಂಡಿದ್ದ ಅರ್ಜುನ್, ಈ ಬಗ್ಗೆ ದೂರವಾಣಿ ಕರೆಮಾಡಿ ತಂದೆಗೆ ತಿಳಿಸಿದ್ದ. ತಾನು ಇತರೆ ವಿದ್ಯಾರ್ಥಿಗಳ ಜೊತೆ ಈಜು ಕಲಿಯಲು ರೆಸಾರ್ಟ್‌ಗೆ ಹೋಗುತ್ತಿರುವ ವಿಷಯ ತಿಳಿಸಿದ್ದ. ಮೂರು ಗಂಟೆಗಳ ಬಳಿಕ ಅವರಿಗೆ ರೆಸಾರ್ಟ್‌ನಿಂದ ಬಂದ ದೂರವಾಣಿ ಕರೆ, ಅವರ ಪುತ್ರ ಇನ್ನಿಲ್ಲ ಎಂಬ ಸುದ್ದಿ ಹೊತ್ತು ತಂದಿತ್ತು.

ಘಟನಾ ಸ್ಥಳಕ್ಕೆ ಭೇಟಿನೀಡಿದ ‘ಪ್ರಜಾವಾಣಿ’ ಜೊತೆ ಮಾತನಾಡಿದ ರಮೇಶ್, ‘ಬೆಳಿಗ್ಗೆ 10 ಗಂಟೆಗೆ ನನಗೆ ಕರೆಮಾಡಿದ್ದ ನನ್ನ ಮಗ ವುಡ್‌ರೀಚ್ ರೆಸಾರ್ಟ್‌ಗೆ ಇತರೆ ವಿದ್ಯಾರ್ಥಿಗಳ ಜೊತೆ ತನ್ನನ್ನು ಈಜು ಕಲಿಸಲು ಕರೆದೊಯ್ಯುತ್ತಿದ್ದಾರೆ ಎಂದು ತಿಳಿಸಿದ್ದ. ಅದು ನಾನು ಅವನೊಂದಿಗೆ ಮಾತನಾಡಿದ ಕೊನೆ ಕ್ಷಣ. ಮಧ್ಯಾಹ್ನ 1.30ಕ್ಕೆ ನನ್ನ ಮಗ ಇನ್ನಿಲ್ಲ ಎಂಬ ದೂರವಾಣಿ ಕರೆಬಂತು. ಅದನ್ನು ನಂಬಲು ನನ್ನಿಂದ ಸಾಧ್ಯವೇ ಆಗಲಿಲ್ಲ’ ಎಂದು ಕಣ್ಣೀರಾದರು.

ಮೃತ ಬಾಲಕನ ತಾಯಿ ತನ್ನ ಮಗನ ಸಾವನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲೇ ಇರಲಿಲ್ಲ. ಸಾವಿನ ಸುದ್ದಿ ಬಂದಾಗಿನಿಂದ ತನ್ನ ಮಗ ತಮ್ಮನ್ನು ಅಗಲಿ ಹೋಗಿದ್ದಾನೆ ಎಂಬುದು ಸುಳ್ಳು ಎಂದು ರೋದಿಸುತ್ತಿದ್ದ ಅವರನ್ನು ಸಾಂತ್ವನಗೊಳಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ. ಅರ್ಜುನ್ ತಂಗಿ 11 ವರ್ಷ ವಯಸ್ಸಿನ ಪ್ರೀತಿ, ಅಣ್ಣನ ಶವವನ್ನು ಕಂಡು ಕಣ್ಣೀರಿಡುತ್ತಿದ್ದಳು.

ಈ ಮಧ್ಯೆಯೇ ಮಾತನಾಡಿದ ಪ್ರೀತಿ, ‘ನನ್ನ ಅಣ್ಣ ತುಂಬಾ ಒಳ್ಳೆಯವನಾಗಿದ್ದ. ಮೂರು ದಿನಗಳ ಹಿಂದೆ ಆತನ ಪರೀಕ್ಷಾ ಫಲಿತಾಂಶ ಬಂದಿತ್ತು. ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗಿದ್ದ. ಆ ಸಂತಸಕ್ಕೆ ಎಲ್ಲರಿಗೂ ಸಿಹಿ ಹಂಚಿದ್ದೆವು. ನನ್ನ ತಂದೆ, ತಾಯಿ ಆತನನ್ನು ಅತಿಹೆಚ್ಚು ಪ್ರೀತಿಸುತ್ತಿದ್ದರು. ಈಗ ಅವನಿಲ್ಲ ಎಂಬುದನ್ನು ನಂಬಲು ಸಾಧ್ಯವೇ ಆಗುತ್ತಿಲ್ಲ’ ಎಂದಳು.

ವ್ಯತಿರಿಕ್ತ ಹೇಳಿಕೆ: ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡಿದ್ದ ಇತರೆ ವಿದ್ಯಾರ್ಥಿಗಳ ಪೋಷಕರು, ಅರ್ಜುನ್ ಮೊದಲು ಈಜು ಕಲಿತಿದ್ದ. ಹಾಗಾಗಿ ಹೆಚ್ಚು ಹೊತ್ತು ಈಜು ಕೊಳದಲ್ಲೇ ಇದ್ದ. ಕೊನೆಯಲ್ಲಿ ಎದೆನೋವು ಕಾಣಿಸಿಕೊಂಡು ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ. ಆದರೆ ಅವರ ಹೇಳಿಕೆಯನ್ನು ತಳ್ಳಿಹಾಕಿರುವ ಬಾಲಕನ ತಂದೆ ರಮೇಶ್, ‘ನನ್ನ ಮಗನಿಗೆ ಆರೋಗ್ಯದಲ್ಲಿ ಯಾವುದೇ ರೀತಿಯ ಸಮಸ್ಯೆ ಇರಲಿಲ್ಲ. ಆತ ಎದೆ ನೋವಿನಿಂದ ಮೃತಪಟ್ಟಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.