ADVERTISEMENT

ಭರವಸೆ: ಪ್ರತಿಭಟನೆ ಕೈಬಿಟ್ಟ ಎಂಜಿನಿಯರಿಂಗ್ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 21 ಜನವರಿ 2012, 19:30 IST
Last Updated 21 ಜನವರಿ 2012, 19:30 IST

ಬೆಂಗಳೂರು:  ಅಮೃತ ತಂತ್ರಜ್ಞಾನ ಹಾಗೂ ವಿಜ್ಞಾನ ಕಾಲೇಜು ಆಡಳಿತವು ವಿದ್ಯಾರ್ಥಿಗಳ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಎರಡು ವಾರಗಳ ಗಡುವು ಕೇಳಿದ್ದು, ಪ್ರತಿಭಟನೆ ಕೈಬಿಟ್ಟಿರುವುದಾಗಿ ಕಾಲೇಜಿನ ವಿದ್ಯಾರ್ಥಿಯೊಬ್ಬರು ತಿಳಿಸಿದ್ದಾರೆ.

ಶುಕ್ರವಾರ ಎಂಜಿನಿಯರಿಂಗ್ ವಿದ್ಯಾರ್ಥಿ ಜಿತೇಂದ್ರ ಸಾಯಿ ಕಾಲೇಜಿನ ವಸತಿ ನಿಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಕ್ಕೆ ಶೈಕ್ಷಣಿಕ ಒತ್ತಡ ಹಾಗೂ ಕಾಲೇಜಿನಲ್ಲಿದ್ದ ಕಠಿಣ ನಿಯಮಗಳೇ ಕಾರಣ ಎಂದು ಆರೋಪಿಸಿ ವಿದ್ಯಾರ್ಥಿಗಳು ಮಧ್ಯ ರಾತ್ರಿವರೆಗೂ ಧರಣಿ ನಡೆಸಿದ್ದರು.

ಸ್ನೇಹಿತನನ್ನು ರಕ್ಷಿಸಲು ಮುಂದಾದಾಗ ತಮ್ಮನ್ನು ಅಡ್ಡಗಟ್ಟಿದ ವಸತಿನಿಲಯದ ವಾರ್ಡನ್‌ಗಳಾದ ಲಕ್ಷ್ಮಣ್ ಕಾರೆ, ಕರುಣಾಕರ್ ಬಾಬು ಹಾಗೂ ವಿದ್ಯಾರ್ಥಿಗಳ ಮೇಲೆ ಕಠಿಣ ನಿಯಮಗಳನ್ನು  ಹೇರುತ್ತಿರುವ ಸಹಾಯಕ ಡೀನ್ ಡಾ. ರಾಕೇಶ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದರು.

  ಈ ಎಲ್ಲಾ ಬೇಡಿಕೆಗಳಿಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿರುವ ಆಡಳಿತ ಎರಡು ವಾರಗಳ ನಂತರ ಕಾಲೇಜನ್ನು ಪ್ರಾರಂಭಿಸುವುದಾಗಿ ಹಾಗೂ ಅಷ್ಟರೊಳಗೆ ವಿದ್ಯಾರ್ಥಿಗಳ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವುದಾಗಿ ಸೂಚನಾ ಫಲಕದಲ್ಲಿ ತಿಳಿಸಿದ್ದು,  ವಿದ್ಯಾರ್ಥಿಗಳು ತಮ್ಮ ಊರುಗಳಿಗೆ ತೆರಳುತ್ತಿದ್ದ ದೃಶ್ಯಗಳು ಕಂಡು ಬಂದವು.

ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ಅಂತ್ಯ ಸಂಸ್ಕಾರಕ್ಕೆ ಮೃತದೇಹವನ್ನು ಅವರ ಜನ್ಮಸ್ಥಳವಾದ ಆಂದ್ರ ಪ್ರದೇಶದ ನೆಲ್ಲೂರಿಗೆ ಕೊಂಡೊಯ್ಯಲಾಗಿದ್ದು, ಪೊಲೀಸರ ಆಕಸ್ಮಿಕ ಸಾವು ಎಂದು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.