ADVERTISEMENT

ಭರವಸೆ ಮೂಡಿಸುತ್ತಿರುವ ಕವಿಗಳು

ಕವನ ಸಂಕಲನಗಳ ಬಿಡುಗಡೆ ಮಾಡಿ ಎಚ್‌್ಎಸ್‌ವಿ ಅಭಿಮತ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2016, 19:30 IST
Last Updated 13 ಮಾರ್ಚ್ 2016, 19:30 IST
‘ವಸ್ತಾರೆ ಇನ್ನೂ 75’ ಪುಸ್ತಕ ಬಿಡುಗಡೆ ಮಾಡಿದ ಎಚ್‌್.ಎಸ್‌.ವೆಂಕಟೇಶಮೂರ್ತಿ ಅವರು ಪ್ರತಿಯೊಂದನ್ನು ನಾಗರಾಜ ವಸ್ತಾರೆ ಅವರಿಗೆ ನೀಡಿದರು. (ಎಡದಿಂದ) ಲೇಖಕಿ ಸಿಂಧುರಾವ್‌, ಎಚ್‌.ಎಸ್‌.ರಾಘವೇಂದ್ರರಾವ್‌, ವಿಕ್ರಮ್‌ ಹತ್ವಾರ್‌ ಮತ್ತು ಎಂ.ಎಸ್.ರುದ್ರೇಶ್ವರಸ್ವಾಮಿ ಚಿತ್ರದಲ್ಲಿದ್ದಾರೆ. –ಪ್ರಜಾವಾಣಿ ಚಿತ್ರ
‘ವಸ್ತಾರೆ ಇನ್ನೂ 75’ ಪುಸ್ತಕ ಬಿಡುಗಡೆ ಮಾಡಿದ ಎಚ್‌್.ಎಸ್‌.ವೆಂಕಟೇಶಮೂರ್ತಿ ಅವರು ಪ್ರತಿಯೊಂದನ್ನು ನಾಗರಾಜ ವಸ್ತಾರೆ ಅವರಿಗೆ ನೀಡಿದರು. (ಎಡದಿಂದ) ಲೇಖಕಿ ಸಿಂಧುರಾವ್‌, ಎಚ್‌.ಎಸ್‌.ರಾಘವೇಂದ್ರರಾವ್‌, ವಿಕ್ರಮ್‌ ಹತ್ವಾರ್‌ ಮತ್ತು ಎಂ.ಎಸ್.ರುದ್ರೇಶ್ವರಸ್ವಾಮಿ ಚಿತ್ರದಲ್ಲಿದ್ದಾರೆ. –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಇವತ್ತಿನ ಕಾವ್ಯದ ವಾತಾವರಣದಲ್ಲಿ ಭರವಸೆ ಮೂಡಿಸುವಂತಹ ಅನೇಕ ಹೊಸ ಕವಿಗಳು ಹೊರಗೆ ಬರುತ್ತಿದ್ದಾರೆ. ಇದು ಬಹಳ ಸಂತಸ ಕೊಡುವ ಸಂಗತಿ’ ಎಂದು ಕವಿ ಎಚ್‌.ಎಸ್‌.ವೆಂಕಟೇಶಮೂರ್ತಿ ಅಭಿಪ್ರಾಯಪಟ್ಟರು.

‘ಅನೇಕ’ ಪ್ರಕಾಶನ ಮತ್ತು ‘ಡುಅಬಲ್‌’ ಪ್ರಕಾಶನದ ಜಂಟಿ ಆಶ್ರಯದಲ್ಲಿ ಭಾನುವಾರ ನಗರದಲ್ಲಿ ಆಯೋಜಿಸಿದ್ದ ಲೇಖಕರಾದ ಎಂ.ಎಸ್.ರುದ್ರೇಶ್ವರಸ್ವಾಮಿ ಅವರ ‘ಅವಳ ಕವಿತೆ’ ಹಾಗೂ ನಾಗರಾಜ ವಸ್ತಾರೆ ಅವರ ‘ವಸ್ತಾರೆ ಇನ್ನೂ 75’ ಎಂಬ ಕವನ ಸಂಕಲನಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಹಿಂದೆಲ್ಲ ಕನ್ನಡದಲ್ಲಿ ಕಾವ್ಯ ತುಂಬಾ ಚೆನ್ನಾಗಿತ್ತು. ಇವತ್ತು ತುಂಬಾ ಜನ ಬರೆಯುತ್ತಾರೆ. ಆದರೆ ಅದು ಅಷ್ಟೇನೂ  ಸ್ವಾರಸ್ಯವಿಲ್ಲ ಎಂಬ ಮಾತುಗಳು ಸಾಮಾನ್ಯವಾಗಿ ಕೇಳಿಬರುತ್ತವೆ. ಆದರೆ ಅದು ಸುಳ್ಳು ಎಂದು ಸಾಬೀತು ಮಾಡುವ ಹಾಗೇ ನಮ್ಮ ತರುಣ ಜನಾಂಗದ ಕವಿಗಳು ಇವತ್ತು ಬರೆಯುತ್ತಿದ್ದಾರೆ’ ಎಂದು ಹೇಳಿದರು.

‘ಕವಿ ಕಾವ್ಯವನ್ನು ಮಾತ್ರ ನಿರ್ಮಾಣ ಮಾಡುವುದಿಲ್ಲ. ಒಂದು ಕಾವ್ಯ ಮೀಮಾಂಸೆಯನ್ನೂ ಆತ ಕಟ್ಟುತ್ತಾನೆ. ಜತೆಗೆ ತನ್ನನ್ನು ಓದಲು ಬೇಕಾದ ಒಂದು ಓದುಗ ಸಮುದಾಯವನ್ನು ನಿರ್ಮಿಸುವ ಹೊಣೆ ಅವನದಾಗಿರುತ್ತದೆ’ ಎಂದು ಪ್ರತಿಪಾದಿಸಿದರು.

‘ತನ್ನ ಮಾತಿನ ಶಕ್ತಿಯನ್ನು ನಂಬಿಕೊಂಡು ಯಾವ ಕವಿ ಕಾವ್ಯವನ್ನು ಕಟ್ಟುತ್ತಾನೆ ಆತ ನುಡಿನಚ್ಚುಗನಾಗುತ್ತಾನೆ. ಮಾತಿನಲ್ಲಿ ನಂಬಿಕೆಯುಳ್ಳ ಕವಿಗಳಲ್ಲಿ ನಮಗೆ ಮುಖ್ಯವಾಗಿ ಕಾಣುವವರು ದ.ರಾ.ಬೇಂದ್ರೆ. ಅವರ ದಾರಿಯನ್ನು ವಸ್ತಾರೆ ತಮ್ಮ ಇತಿಮಿತಿಯಲ್ಲಿ ಅನುಸರಿಸುತ್ತಿದ್ದಾರೆ’ ಎಂದು ಶ್ಲಾಘಿಸಿದರು.

ವಿಮರ್ಶಕ ಎಚ್‌.ಎಸ್‌.ರಾಘವೇಂದ್ರರಾವ್‌ ಮಾತನಾಡಿ, ‘ಓದು, ವಿಮರ್ಶೆಗಳು ತೊಟ್ಟಿಲು ತೂಗುವ ಮತ್ತು ಮಗುವನ್ನು ಚಿವುಟುವ ಕೆಲಸವನ್ನು ಮಾಡುತ್ತವೆ. ಬರೀ ತೊಟ್ಟಿಲು ತೂಗಿದರೆ ಮಗುವಿಗೆ ಬರುವ ಸಂತಸದ ನಿದ್ದೆ ಮುಂದಿನ ಕವಿತೆಗೆ ಅಡ್ಡಿಮಾಡಬಹುದು. ಸ್ವಲ್ಪ ಜಾಸ್ತಿ ಚಿವುಟಿದರೆ ಮಗುವಿಗಾಗುವ ನೋವು ಮುಂದಿನ ಕವಿತೆಯನ್ನು ನಿಲ್ಲಿಸಿ ಬಿಡಬಹುದು. ಇದರ ನಡುವಿನ ಹಗ್ಗದ ಮೇಲಿನ ನಡಗೆಯ ಕೆಲಸ ಎಲ್ಲಾ ಕಾಲದಲ್ಲೂ ಅವಶ್ಯಕ’ ಎಂದು ಅನಿಸಿಕೆ ವ್ಯಕ್ತಪಡಿಸಿದರು.

‘ಎಲ್ಲಿಯವರೆಗೆ ಕವಿತೆ, ಕಥೆ, ಕಾದಂಬರಿಗಳು ವಕೀಲಿಗಳ ರಾಜ್ಯಭಾರವಾಗುತ್ತವೆಯೋ ಅಲ್ಲಿಯವರೆಗೆ ಬೆರಗು, ಬೆಡಗುಗಳು ನಾಶವಾಗುತ್ತಾ ಹೋಗುತ್ತವೆ. ಅದಾಗಬಾರದು. ರುದ್ರೇಶ್ವರಸ್ವಾಮಿ ಅವರ ಕವಿತೆಗಳಲ್ಲಿ ಹೆಣ್ಣಿನ ವಿಷಾದ, ಸಂಕಟ ಒಂಟಿತನಗಳನ್ನು ಆಧುನಿಕ ನೆಲೆಗಟ್ಟುಗಳಲ್ಲಿ ಹುಡುಕುವ ಪ್ರಯತ್ನ ಕಾಣುತ್ತದೆ’ ಎಂದು ಹೇಳಿದರು.

ಲೇಖಕ ವಿಕ್ರಮ್‌ ಹತ್ವಾರ್‌ ಮಾತನಾಡಿ, ‘ಹರಿಯುವುದನ್ನೇ ಮರೆತಂತೆ ಒಂದು ಕಡೆ ನಿಂತು ಎಲ್ಲವನ್ನೂ ಬಹಳ ಸೂಕ್ಷ್ಮವಾಗಿ ಗ್ರಹಿಸುತ್ತಿದ್ದಾರೆನೋ ಎನ್ನುವ ಭಾವಗಳು ರುದ್ರೇಶ್ವರಸ್ವಾಮಿ ಅವರ ಪದ್ಯಗಳಲ್ಲಿದ್ದರೆ, ನಿಂತರೆ ಎಲ್ಲಿ ಜಡವಾಗಿ ಬೀಡುತ್ತೇನೋ ಎನ್ನುವ ಸಂವೇದನೆ ವಸ್ತಾರೆ  ಅವರ ಕವಿತೆಗಳಲ್ಲಿ ಕಾಣಬಹುದು’ ಎಂದು ವಿಶ್ಲೇಷಿಸಿದರು.

* * *
ನಮ್ಮಲ್ಲಿ ಒಳ್ಳೆಯ ಕವಿಗಳ ಹಾಗೇ ಉತ್ತಮ ಓದುಗರು ಬರುತ್ತಿದ್ದಾರೆ. ಇದು ಹೆಮ್ಮೆ ಪಡಬೇಕಾದ ಸಂಗತಿ. ಕಾವ್ಯದ ಬೆಳವಣಿಗೆಯಲ್ಲಿ ಕವಿಯಷ್ಟೇ ಓದುಗನೂ ಅಗತ್ಯ.
-ಎಚ್‌.ಎಸ್‌.ವೆಂಕಟೇಶಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.