ADVERTISEMENT

ಭ್ರಮರಾಂಬಿಕಾ ವಿಷ ಸೇವನೆ ದೃಢಪಟ್ಟಿಲ್ಲ

​ಪ್ರಜಾವಾಣಿ ವಾರ್ತೆ
Published 3 ಜುಲೈ 2012, 19:30 IST
Last Updated 3 ಜುಲೈ 2012, 19:30 IST

ಬೆಂಗಳೂರು: ಶೇಷಾದ್ರಿಪುರ ಕಾನೂನು ಕಾಲೇಜಿನ ವಿದ್ಯಾರ್ಥಿನಿ ಬಿ.ಎನ್.ಭ್ರಮರಾಂಬಿಕಾ ಅವರ ಸಾವು ವಿಷ ಸೇವನೆಯಿಂದ ಆಗಿದೆ ಎಂದು ಅವರ ಪೋಷಕರು ಹೇಳುತ್ತಿದ್ದರೆ, ವಿಧಿವಿಜ್ಞಾನ ಪ್ರಯೋಗಾಲಯದಿಂದ ಇದು ದೃಢಪಟ್ಟಿಲ್ಲ ಎಂದು ಸರ್ಕಾರ ಹೈಕೋರ್ಟ್‌ಗೆ ಮಂಗಳವಾರ ತಿಳಿಸಿದೆ.

`ಈಕೆಯ ಸಾವು ಸಂಶಯಾಸ್ಪದವಾಗಿದೆ. ಇದು ಮರ್ಯಾದಾ ಹತ್ಯೆ. ತನಿಖೆಯನ್ನು ಸಿಐಡಿಗೆ ವಹಿಸಲು ಆದೇಶಿಸಿ~ ಎಂದು ಕೋರಿ ಕಾಲೇಜಿನ ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರ ಈ ಮಾಹಿತಿ ನೀಡಿದೆ.

`ಶವವನ್ನು ಹೈಕೋರ್ಟ್ ಆದೇಶದಂತೆ ಹೊರಕ್ಕೆ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕುತ್ತಿಗೆಯ ಬಳಿ ರಕ್ತ ಹೆಪ್ಪುಗಟ್ಟಿದ ಕಲೆ ಇತ್ತು. ಅಲ್ಲಿಂದ ಮೂಳೆಯೊಂದನ್ನು ತೆಗೆದು ಪರೀಕ್ಷೆಗೆ ಒಳಪಡಿಸಲಾಗಿದೆ. ಅದರಲ್ಲಿ ವಿಷವಾಗಲೀ, ಕ್ರಿಮಿನಾಶಕ ಅಂಶವಾಗಲೀ, ನಿದ್ರೆಯ ಮಾತ್ರೆಯ ಅಂಶವಾಗಲೀ ಕಂಡುಬಂದಿಲ್ಲ. ಹೆಚ್ಚಿನ ಪರೀಕ್ಷೆಗೆ ಮೂಳೆಯನ್ನು ಬೆಂಗಳೂರು ವೈದ್ಯಕೀಯ ಕಾಲೇಜಿನ ರೋಗಶಾಸ್ತ್ರ ವಿಭಾಗಕ್ಕೆ ಕಳುಹಿಸಲಾಗಿದೆ. ಅಲ್ಲಿಂದ ವರದಿಯ ನಿರೀಕ್ಷೆಯಲ್ಲಿದ್ದೇವೆ~ ಎಂದು ಚಿಕ್ಕಬಳ್ಳಾಪುರ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಲಿಖಿತ ಮಾಹಿತಿ ನೀಡಿದ್ದಾರೆ.

`ಭ್ರಮರಾಂಬಿಕಾ ನಾಲ್ಕನೆಯ ಸೆಮಿಸ್ಟರ್ ವಿದ್ಯಾರ್ಥಿನಿ. ಪರೀಕ್ಷೆಗೆ ತಯಾರಿ ನಡೆಸಿದ್ದರು. ಆದರೆ, ಮೇ 21ರಂದು ಆಕೆ ಸತ್ತಿರುವ ವಿಷಯ ನಮಗೆ ತಿಳಿಯಿತು. ಈ ಬಗ್ಗೆ ಆಕೆಯ ಸಂಬಂಧಿಗಳಲ್ಲಿ ವಿಚಾರಿಸಿದೆವು. ಒಬ್ಬೊಬ್ಬರು ಒಂದೊಂದು ಬಗೆಯ ಹೇಳಿಕೆ ನೀಡಿದರು.

ಅವರ ಹೇಳಿಕೆಗಳು ಅನುಮಾನ ಮೂಡಿಸಿದವು. ಇದು `ಮರ್ಯಾದಾ ಹತ್ಯೆ~ ಎಂಬ ಸಂಶಯ ನಮಗೆ ಇದೆ. ಪೊಲೀಸರು ಈ ಬಗ್ಗೆ ಸರಿಯಾದ ತನಿಖೆ ನಡೆಸುತ್ತಾರೆ ಎಂಬ ಭರವಸೆ ಇಲ್ಲ. ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲು ಆದೇಶಿಸಬೇಕು~ ಎನ್ನುವುದು ವಿದ್ಯಾರ್ಥಿಗಳ ಮನವಿ.

ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ವಿಚಾರಣೆಯನ್ನು ಮುಂದೂಡಿದೆ.

ನಿತ್ಯಾನಂದ ಸ್ವಾಮೀಜಿ ವಿರುದ್ಧ ಅರ್ಜಿ

ಬಿಡದಿ ಧ್ಯಾನಪೀಠದಲ್ಲಿ ತಮ್ಮ ಮಗನನ್ನು ಅಕ್ರಮವಾಗಿ ಬಂಧನದಲ್ಲಿ ಇಡಲಾಗಿದೆ ಎಂದು ಆರೋಪಿಸಿ ನಿತ್ಯಾನಂದ ಸ್ವಾಮೀಜಿ ವಿರುದ್ಧ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಲಾಗಿದೆ.

ಎಂ.ವಿ.ಕೃಷ್ಣಮೂರ್ತಿ ಎನ್ನುವವರು ಈ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಮಗ ಸಂತೋಷನನ್ನು ಆಶ್ರಮದಲ್ಲಿ ಅಕ್ರಮ ಬಂಧನದಲ್ಲಿ ಇರಿಸಲಾಗಿದೆ. ಈ ಬಗ್ಗೆ ಪೊಲೀಸರಲ್ಲಿ ದೂರು ದಾಖಲು ಮಾಡಿದರೂ ಪ್ರಯೋಜನ ಆಗಿಲ್ಲ ಎನ್ನುವುದು ಅರ್ಜಿದಾರರ ದೂರು.

`2009ರಲ್ಲಿ ಸಂತೋಷ್ ಆಶ್ರಮ ಸೇರಿದ್ದ. ಈ ಸಂದರ್ಭದಲ್ಲಿ ಸ್ವಾಮೀಜಿಯವರು ವಿಚಿತ್ರ ಒಪ್ಪಂದಗಳಿಗೆ ಸಂತೋಷ್‌ನಿಂದ ಸಹಿ ಹಾಕಿಸಿಕೊಂಡಿದ್ದಾರೆ. ಆತನ ಶಾಲೆ, ಕಾಲೇಜಿನ ಅಂಕಪಟ್ಟಿ, ಪ್ರಮಾಣ ಪತ್ರಗಳು, ಇತರ ದಾಖಲೆಗಳನ್ನು ಸ್ವಾಮೀಜಿ ಪಡೆದುಕೊಂಡಿದ್ದಾರೆ.

ಪಾಸ್‌ಪೋರ್ಟ್ ಕೂಡ ಪಡೆದುಕೊಳ್ಳಲಾಗಿದೆ. ನಮ್ಮ ಮಗನನ್ನು ನೋಡಲು ಸ್ವಾಮೀಜಿಯಲ್ಲಿ ಹಲವು ಬಾರಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನ ಆಗಿಲ್ಲ. ದೂರವಾಣಿ ಕರೆ ಮಾಡಲು ಕೂಡ ಮಗನಿಗೆ ಬಿಡುತ್ತಿಲ್ಲ. ಇದರಿಂದ ನಮಗೆ ತೀವ್ರ ಆತಂಕವಾಗಿದೆ~ ಎಂದು ಅರ್ಜಿಯಲ್ಲಿ ಪೋಷಕರು ತಿಳಿಸಿದ್ದಾರೆ.

ಈ ಕುರಿತು ಪೊಲೀಸರಲ್ಲಿ ದೂರು ದಾಖಲಿಸಿದರೂ ಪ್ರಯೋಜನ ಆಗಿಲ್ಲ ಎಂದಿರುವ ಅವರು, ಮಗನನ್ನು ಹಾಜರು ಪಡಿಸಲು ಪೊಲೀಸರಿಗೆ ಆದೇಶಿಸುವಂತೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಖೇಣಿ ವಿರುದ್ಧ ಅರ್ಜಿ: ನೋಟಿಸ್

ಭೂಸ್ವಾಧೀನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ `ನೈಸ್~ ಸಂಸ್ಥೆ ಮುಖ್ಯಸ್ಥ ಅಶೋಕ್ ಖೇಣಿ ವಿರುದ್ಧ ಇರುವ ಆರೋಪಗಳಲ್ಲಿ ಹುರುಳಿಲ್ಲ ಎಂದು ತಿಳಿಸಿ ಪೊಲೀಸರು ದಾಖಲು ಮಾಡಿರುವ `ಬಿ-ವರದಿ~ ಪ್ರಶ್ನಿಸಿ ಭೂಮಾಲೀಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.ಎಸ್.ಆರ್.ಗಂಗಾಧರ ಅವರು ಅರ್ಜಿ ಸಲ್ಲಿಸಿದ್ದು, ಬಿ ವರದಿಯ ರದ್ದತಿಗೆ ಕೋರಿದ್ದಾರೆ.

`ಸೋಮಪುರ ಗ್ರಾಮದಲ್ಲಿ ನನಗೆ ಸೇರಿರುವ ಜಮೀನನ್ನು ನೈಸ್ ಸಂಸ್ಥೆಯು `ಫಿಲ್ಮ್ ಸಿಟಿ~ ನಿರ್ಮಾಣಕ್ಕೆ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿತ್ತು. ಇದನ್ನು ಬಿಟ್ಟುಕೊಡಲು ನಾನು ಒಪ್ಪಿರಲಿಲ್ಲ. ಖೇಣಿ ಅವರು ತಮ್ಮ ಬೆಂಬಲಿಗರ ಜೊತೆಗೆ ಬಂದು ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಈ ಜಮೀನು ನಾನೇ ಬಿಟ್ಟುಕೊಟ್ಟಿದ್ದೇನೆ ಎಂದು ಪೊಲಿಸರು ನಕಲಿ ದಾಖಲೆ ಸೃಷ್ಟಿ ಮಾಡಿದ್ದಾರೆ. ನಂತರ ಬಿ ವರದಿ ನೀಡಿದ್ದಾರೆ~ ಎನ್ನುವುದು ಅವರ ದೂರು.

ಈ ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ನೋಟಿಸ್ ಜಾರಿಗೆ ಆದೇಶಿಸಿರುವ ನ್ಯಾಯಮೂರ್ತಿಗಳು, ವಿಚಾರಣೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT