ADVERTISEMENT

ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2012, 19:30 IST
Last Updated 11 ನವೆಂಬರ್ 2012, 19:30 IST

ಬೆಂಗಳೂರು: ರಾಜ್ಯದಾದ್ಯಂತ ಈಚಿನ ದಿನಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹಾಗೂ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ರಾಜ್ಯ ಮಟ್ಟದ ಮಕ್ಕಳ ಸಂಸತ್‌ನಲ್ಲಿ ವಿದ್ಯಾರ್ಥಿಗಳು ತೀವ್ರ ಕಳವಳ ವ್ಯಕ್ತಪಡಿಸಿದರು.

ರಾಜ್ಯ ಮಕ್ಕಳ ಹಕ್ಕುಗಳಿಗಾಗಿ ಶಾಸಕರ ವೇದಿಕೆ ಹಾಗೂ ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ವೇದಿಕೆಯ ಆಶ್ರಯದಲ್ಲಿ ನಗರದಲ್ಲಿ ಭಾನುವಾರ ಆರಂಭಗೊಂಡ ಮಕ್ಕಳ ಸಂಸತ್‌ನಲ್ಲಿ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿಚಾರ ವಿನಿಮಯ ನಡೆಸಲಾಯಿತು.

ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ ಸೇರಿದಂತೆ ಅನಿಷ್ಟ ಪದ್ಧತಿಗಳು ಜೀವಂತ ಇರುವ ಬಗ್ಗೆ ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದರು. ಶಾಲೆಗಳಲ್ಲಿ ಮೂಲಸೌಕರ್ಯದ ಕೊರತೆಯ ಬಗ್ಗೆಯೂ ವಿದ್ಯಾರ್ಥಿಗಳು ಬೆಳಕು ಚೆಲ್ಲಿದರು.

ಮಕ್ಕಳ ಹಕ್ಕುಗಳ ನಿಗಾ ಕೇಂದ್ರದ ಸಂಚಾಲಕ ವಾಸುದೇವ ಶರ್ಮಾ ಮಾತನಾಡಿ, `ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ 40ರಷ್ಟು ಇರುವ ಮಕ್ಕಳ ಅನಿಸಿಕೆ, ವಿಚಾರ ಹಾಗೂ ಶಿಫಾರಸುಗಳನ್ನು ಸರ್ಕಾರದ ಮುಂದಿಡುವ ಅವಕಾಶ ಕಲ್ಪಿಸುವುದು. ವಿವಿಧ ಜಿಲ್ಲೆಗಳ ಮಕ್ಕಳು ಜತೆಗೂಡಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ವೇದಿಕೆಯನ್ನು ಕಲ್ಪಿಸುವುದು.

ಮಕ್ಕಳ ನಾಯಕತ್ವ ಗುಣ ಹಾಗೂ ಸಂವಹನ ಕಲೆಗೆ ಅವಕಾಶಗಳನ್ನು ಸೃಷ್ಟಿಸುವುದು. ಮಕ್ಕಳನ್ನು ಕಾಡುತ್ತಿರುವ ಸಮಸ್ಯೆಗಳನ್ನು ಮಕ್ಕಳೇ ಪಟ್ಟಿ ಮಾಡಿ ಸರ್ಕಾರದ ಎದುರು ಮಂಡಿಸಲು ವೇದಿಕೆ ಸಿದ್ಧಪಡಿಸುವುದು ಮಕ್ಕಳ ಸಂಸತ್‌ನ ಗುರಿ~ ಎಂದರು.

ಶಾಸಕ ನೆ.ಲ.ನರೇಂದ್ರಬಾಬು, ವಿಧಾನ ಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿ, ಮಕ್ಕಳ ಹಕ್ಕುಗಳ ನಿಗಾ ಕೇಂದ್ರದ ಪದಾಧಿಕಾರಿಗಳಾದ ನಾಗಸಿಂಹ ರಾವ್, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು. ಕೊಡಗು ಹಾಗೂ ಹಾವೇರಿ ಜಿಲ್ಲೆ ಹೊರತುಪಡಿಸಿ ಉಳಿದ ಜಿಲ್ಲೆಗಳ ಒಟ್ಟು 76 ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾ ಮಟ್ಟದ ಮಕ್ಕಳ ಸಂಸತ್‌ನಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳನ್ನು ರಾಜ್ಯ ಮಟ್ಟದ ಮಕ್ಕಳ ಸಂಸತ್‌ಗೆ ಆಯ್ಕೆ ಮಾಡಲಾಗುತ್ತಿದೆ. ಪ್ರತಿ ಜಿಲ್ಲೆಯ ಇಬ್ಬರು ಪ್ರತಿನಿಧಿಗಳು ಭಾಗವಹಿಸಿದ್ದಾರೆ.

ಸಿ.ಎಂ ಜತೆ ಸಂವಾದ:  ಮಕ್ಕಳ ಸಂಸತ್‌ನಲ್ಲಿ ವಿದ್ಯಾರ್ಥಿಗಳು ಕ್ರೋಡೀಕರಿಸಿದ ಆದ್ಯತಾ ವಿಚಾರಗಳೊಂದಿಗೆ ವಿಧಾನಸೌಧದಲ್ಲಿ ಸೋಮವಾರ ಬೆಳಿಗ್ಗೆ 10.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಸಿ.ಎಂ ಅವರೊಂದಿಗೆ ಚರ್ಚೆ ನಡೆಸುವರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.