ADVERTISEMENT

ಮನೆಗೆ ನುಗ್ಗಿ ಚಿನ್ನಾಭರಣ ದರೋಡೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 20:00 IST
Last Updated 23 ಸೆಪ್ಟೆಂಬರ್ 2013, 20:00 IST

ಬೆಂಗಳೂರು: ಅಮೃತಹಳ್ಳಿಯ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ಮನೆಯೊಡತಿಯ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಚಿನ್ನಾಭರಣ ದೋಚಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.

ಈ ಸಂಬಂಧ ಅಮೃತಹಳ್ಳಿ ನಾಲ್ಕನೇ ‘ಬಿ’ ಅಡ್ಡರಸ್ತೆ ನಿವಾಸಿ ಪದ್ಮಪ್ರಿಯಾ ಎಂಬುವರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ.
ಕಾರ್ಮಿಕ ಗುತ್ತಿಗೆದಾರರಾಗಿರುವ ಪದ್ಮಪ್ರಿಯಾ ಅವರ ಪತಿ ಜಯಕುಮಾರ್‌ ಅವರು ಕೆಲಸದ ನಿಮಿತ್ತ ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ಹೊರಗೆ ಹೋಗಿದ್ದರು. ಈ ಸಂದರ್ಭದಲ್ಲಿ ಪದ್ಮಪ್ರಿಯಾ ಮತ್ತು ಅವರ ಎಂಟು ವರ್ಷದ ಮಗಳು ಅನಘಾ ಮಾತ್ರ ಮನೆಯಲ್ಲಿದ್ದರು. ಆಗ ಮನೆಯ ಬಳಿ ಬಂದಿರುವ ಮೂವರು ಅಪರಿಚಿತ ವ್ಯಕ್ತಿಗಳು ಬಾಗಿಲು ಬಡಿದಿದ್ದಾರೆ. ಪದ್ಮಪ್ರಿಯಾ ಅವರು ಬಾಗಿಲು ತೆರೆಯುತ್ತಿದ್ದಂತೆ ಒಳಗೆ ನುಗ್ಗಿದ ದುಷ್ಕರ್ಮಿಗಳು, ಅವರಿಗೆ ಚಾಕುವಿನಿಂದ ಇರಿದಿದ್ದಾರೆ. ನಂತರ ಬಾಲಕಿ ಅನಘಾಳನ್ನು ಕೊಲೆ ಮಾಡುವುದಾಗಿ ಬೆದರಿಸಿ ಚಿನ್ನದ ಎರಡು ಸರ ಮತ್ತು ಎರಡು ಜತೆ ಓಲೆ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪದ್ಮಪ್ರಿಯಾ ಅವರ ಎಡಗೈ ಮತ್ತು ಕಾಲಿಗೆ ಪೆಟ್ಟಾಗಿದೆ. ಈ ಕೃತ್ಯ ಎಸಗಿರುವ ವ್ಯಕ್ತಿಗಳು ಸ್ಥಳೀಯರು ಎಂದು ತನಿಖೆಯಿಂದ ಗೊತ್ತಾಗಿದೆ. ಆರೋಪಿಗಳನ್ನು ಸದ್ಯದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಅಮೃತಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಪಘಾತ; ಸಾವು: ಕಸ್ತೂರಬಾ ರಸ್ತೆಯ ಹಡ್ಸನ್‌ ವೃತ್ತದ ಬಳಿ ಭಾನುವಾರ ರಾತ್ರಿ ಕ್ಯಾಂಟರ್‌ ಮತ್ತು ಬೈಕ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಮೋಹನ್‌ (60) ಎಂಬುವರು ಸಾವನ್ನಪ್ಪಿದ್ದಾರೆ.

ಸಂಪಂಗಿರಾಮನಗರ ನಿವಾಸಿಯಾದ ಮೋಹನ್‌ ಅವರು ಕಬ್ಬನ್‌ಪೇಟೆಯಲ್ಲಿನ ಸಂಬಂಧಿಕರ ಮನೆಯಿಂದ ಬೈಕ್‌ನಲ್ಲಿ ತಮ್ಮ ಮನೆಗೆ ಹೋಗುವಾಗ ಈ ದುರ್ಘಟನೆ ನಡೆದಿದೆ.

ಕ್ಯಾಂಟರ್‌ ಅವರ ಬೈಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಆಗ ಬೈಕ್‌ನಿಂದ ಕೆಳಗೆ ಬಿದ್ದ ಅವರ ಮೇಲೆ ಕ್ಯಾಂಟರ್‌ ಚಕ್ರ ಹರಿದಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ನಂತರ ಕ್ಯಾಂಟರ್‌ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಹಲಸೂರುಗೇಟ್‌ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹೆಣ್ಣು ಮಗು ಪತ್ತೆ: ಕುಮಾರಸ್ವಾಮಿಲೇಔಟ್‌ ಸಮೀಪದ ಟೀಚರ್ಸ್‌ ಕಾಲೊನಿಯಲ್ಲಿ ಸೋಮವಾರ ಅಪರಿಚಿತ ವ್ಯಕ್ತಿಗಳು ಆರು ತಿಂಗಳ ಹೆಣ್ಣು ಮಗುವೊಂದನ್ನು ಬಿಟ್ಟು ಹೋಗಿದ್ದು, ಪೊಲೀಸರು ಆ ಮಗುವನ್ನು ಸರ್ಕಾರಿ ಬಾಲಕಿಯರ ಪರಿವೀಕ್ಷಣಾ ಮಂದಿರಕ್ಕೆ ಒಪ್ಪಿಸಿದ್ದಾರೆ.

ಅಪರಿಚಿತ ವ್ಯಕ್ತಿಗಳು ಮಗುವನ್ನು ಬೆಡ್‌ಶೀಟ್‌ನಿಂದ ಸುತ್ತಿ ಟೀಚರ್ಸ್‌ ಕಾಲೊನಿಯ ಜಿಮ್‌ ಸೆಂಟರ್‌ ಒಂದರ ಮುಂಭಾಗದಲ್ಲಿ ಮಲಗಿಸಿ ಹೋಗಿದ್ದರು. ಜಿಮ್‌ ಸೆಂಟರ್‌ನ ಮಾಲೀಕರಾದ ಗಗನ್‌ ಅವರು ಬೆಳಗಿನ ಜಾವ 5.30ರ ಸುಮಾರಿಗೆ ಸೆಂಟರ್‌ನ ಬಳಿ ಬಂದಾಗ ಮಗುವನ್ನು ನೋಡಿ ಠಾಣೆಗೆ ಮಾಹಿತಿ ನೀಡಿದರು ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ಮಗುವನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ವೈದ್ಯರಿಂದ ತಪಾಸಣೆ ಮಾಡಿಸಿ ಸರ್ಕಾರಿ ಬಾಲಕಿಯರ ಪರಿವೀಕ್ಷಣಾ ಮಂದಿರದ ವಶಕ್ಕೆ ಒಪ್ಪಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಗು ಆರೋಗ್ಯವಾಗಿದೆ. ಮಗುವನ್ನು ಬಿಟ್ಟು ಹೋಗಿರುವ ವ್ಯಕ್ತಿಗಳ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಕುಮಾರಸ್ವಾಮಿಲೇಔಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.