ADVERTISEMENT

ಮನೆಬಿಟ್ಟಾಗ ಅವನು, ಮರಳಿದಾಗ ಅನು!

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 5:10 IST
Last Updated 7 ಫೆಬ್ರುವರಿ 2012, 5:10 IST
ಮನೆಬಿಟ್ಟಾಗ ಅವನು, ಮರಳಿದಾಗ ಅನು!
ಮನೆಬಿಟ್ಟಾಗ ಅವನು, ಮರಳಿದಾಗ ಅನು!   

ಬೆಂಗಳೂರು: ಮನೆಯವರು ನೀಡುತ್ತಿದ್ದ ಹಿಂಸೆ, ಶಾಲೆಯಲ್ಲಿನ ಕಿರಿಕಿರಿ, ನೆರೆಹೊರೆಯವರ ಚುಚ್ಚುಮಾತು ಎಲ್ಲದಕ್ಕೂ ಬೇಸತ್ತು ಬೆಂಗಳೂರನ್ನೇ ಬಿಟ್ಟು ಓಡಿಹೋದಾಗ `ಅವನಾಗಿ~ದ್ದ ಸುರೇಶ್, ಎಂಟು ವರ್ಷಗಳ ನಂತರ ತವರಿಗೆ ವಾಪಸಾದಾಗ `ಅನು~ ಆಗಿದ್ದಳು!

ತುತ್ತು ಅನ್ನಕ್ಕಾಗಿ ಮುಂಬೈನಲ್ಲಿ ಭಿಕ್ಷಾಟನೆ ಮಾಡಿ, ನಂತರ ಅದೇ ಹಣದಲ್ಲಿ ಅಲ್ಲಿಯೇ ಲಿಂಗ ಪರಿವರ್ತನೆ ಮಾಡಿಕೊಂಡು ಹೆಣ್ಣಾಗಿ ಬೆಂಗಳೂರಿಗೆ ತೆರಳಿದ್ದಳು ಆಕೆ.

ಇದು ಸೋಮವಾರವಷ್ಟೇ ಹೈಕೋರ್ಟ್‌ನಲ್ಲಿ ಸಹಾಯಕಿಯಾಗಿ ಕೆಲಸಕ್ಕೆ ಸೇರಿಕೊಂಡ ಲೈಂಗಿಕ ಅಲ್ಪಸಂಖ್ಯಾತರಾದ `ಅನು~ವಿನ ಕಥೆ.  ಎರಡೂವರೆ ದಶಕಗಳ ಕಾಲ ನೋವಿನಲ್ಲಿಯೇ ಜೀವನ ಸವೆಸಿರುವ, ಅಪ್ಪ- ಅಮ್ಮ, ಅಣ್ಣ ಎಲ್ಲರಿಂದಲೂ ತಿರಸ್ಕಾರಕ್ಕೆ ಒಳಗಾಗಿದ್ದ 27 ವರ್ಷದ ಅನು ಈಗ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ.

ಈ ಮೂಲಕ ರಾಜ್ಯ ಮಾತ್ರವಲ್ಲದೇ ದೇಶದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಯೊಬ್ಬರು ಸರ್ಕಾರಿ ನೌಕರಿ ಗಿಟ್ಟಿಸಿಕೊಂಡಿರುವ ಖ್ಯಾತಿಗೆ ಪಾತ್ರರಾಗಿದ್ದಾರೆ.

`ಅನು~ ಹಿನ್ನೆಲೆ: ತಂದೆ-ತಾಯಿಗೆ ಇಬ್ಬರು ಮಕ್ಕಳು. ಚಿಕ್ಕ ಮಗನೇ `ಸುರೇಶ್~. ಶಾಲೆಗೆ ಸೇರಿಸಿದಾಗಲೂ ಮನೆಯವರಿಗಾಗಲೀ, ಸುರೇಶ್‌ಗಾಗಲೀ ಆತ ಲೈಂಗಿಕ ಅಲ್ಪಸಂಖ್ಯಾತ ಎಂಬ ಬಗ್ಗೆ ತಿಳಿದೇ ಇರಲಿಲ್ಲ. 8-9 ವರ್ಷವಾಗುತ್ತಲೇ ಹೆಣ್ಣುಮಕ್ಕಳ ಹಾವಭಾವ ಆರಂಭಗೊಂಡಾಗ ಪೋಷಕರು ಆತಂಕಗೊಂಡರು. ನಿಧಾನವಾಗಿ ಸುದ್ದಿ ಹರಡಿತು. ಶಾಲೆಯಲ್ಲಿಯೂ ಮಕ್ಕಳಿಂದ ತಿರಸ್ಕಾರ ಭಾವ.

ಅದು ಅಲ್ಲಿಗೇ ನಿಲ್ಲಲಿಲ್ಲ. ನೆರೆಹೊರೆಯವರು ಟೀಕೆ ಮಾಡುತ್ತಿದ್ದ ಕಾರಣ, ಅದನ್ನು ಸಹಿಸಲಾರದೆ ಅಣ್ಣನಿಂದ ಪ್ರತಿದಿನವೂ ಹೊಡೆತ ತಿನ್ನಬೇಕಾಯಿತು ಸುರೇಶ್. ಅಪ್ಪ-ಅಮ್ಮಂದಿರಿಗೂ ಈ `ಮಗ~ ಎಂದರೆ ಅಷ್ಟಕ್ಕಷ್ಟೆ ಎಂಬ ಭಾವನೆ.

6ನೇ ಕ್ಲಾಸಿನವರೆಗೆ ಹಾಗೂ ಹೀಗೂ ದಿನ ನೂಕಿದ ಸುರೇಶ್,  ಶಾಲೆ ಬಿಟ್ಟು ಸೀರೆ ವ್ಯಾಪಾರದಲ್ಲಿ ತೊಡಗಿದರು. ಲೈಂಗಿಕ ಅಲ್ಪಸಂಖ್ಯಾತರೊಬ್ಬರ ಪರಿಚಯವಾಗಿ ಬೆಂಗಳೂರು ಬಿಟ್ಟು ಮುಂಬೈಗೆ ಹೋದರು. ಆಗ ಅವರಿಗೆ ಸುಮಾರು 16 ವರ್ಷ.

ಭಿಕ್ಷಾಟನೆ: ಮುಂಬೈನಲ್ಲಿ ಭಿಕ್ಷಾಟನೆ ವೃತ್ತಿಯಲ್ಲಿ ತೊಡಗಿ, ಅದರಿಂದ ಬಂದ ಹಣದಿಂದ ಸ್ತ್ರೀಯಾಗಿ ಲಿಂಗ ಪರಿವರ್ತನೆ ಮಾಡಿಕೊಂಡು ಬೆಂಗಳೂರಿಗೆ ವಾಪಸಾದರು. ಅಷ್ಟರಲ್ಲಿಯೇ ಅಪ್ಪ ಸಾವನ್ನಪ್ಪಿದ್ದರು. ಅಣ್ಣ ವಿವಾಹವಾಗಿ ಬೇರೆ ಮನೆಯಲ್ಲಿ ಇದ್ದರು.

ಆದರೆ ಮಗನಾಗಿದ್ದವ, ಮಗಳಾಗಿ ಪರಿವರ್ತನೆಗೊಂಡಿರುವುದನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ತಾಯಿ ಇರಲಿಲ್ಲ. ಇದರಿಂದ ಬೇರೆ ಮನೆ ಮಾಡಿ ಇರಬೇಕಾದ ಪರಿಸ್ಥಿತಿ. ನಂತರ ತಾಯಿಯ ಮನವೊಲಿಸಿ ಮನೆ ಸೇರುವಲ್ಲಿ ಅನು ಯಶಸ್ವಿಯಾದರು.

ಏಳಿಗೆಗಾಗಿ ದುಡಿಮೆ: `ಸಮರ~ ಎಂಬ ಸರ್ಕಾರೇತರ ಸಂಸ್ಥೆಯಲ್ಲಿ ಸೇರಿಕೊಂಡು ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಏಳಿಗೆಗಾಗಿ ದುಡಿಯಲು ಶ್ರಮಿಸಿದರು. ಅಲ್ಲಿಯೇ ಬ್ಯೂಟಿಷಿಯನ್ ತರಬೇತಿಯನ್ನೂ ಪಡೆದರು.

ಹೈಕೋರ್ಟ್ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಲೈಂಗಿಕ ಅಲ್ಪಸಂಖ್ಯಾತರಿಗಾಗಿ ನಡೆಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ತಮ್ಮ ಸಮುದಾಯದ ಕಷ್ಟಗಳನ್ನು ಧೈರ್ಯವಾಗಿ ಹೇಳಿಕೊಂಡು  ನ್ಯಾಯಮೂರ್ತಿಗಳ ಪ್ರಶಂಸೆಗೆ ಪಾತ್ರರಾದ ಅವರು ಕೆಲಸ ದಕ್ಕಿಸಿಕೊಂಡರು.

ಮೊದಲ ದಿನ ಖುಷಿ: ಅನು ಅವರಿಗೆ  ಹೈಕೋರ್ಟ್‌ನ `ಅಕೌಂಟ್ಸ್~ ವಿಭಾಗದಲ್ಲಿ ಸಹಾಯಕಿಯಾಗಿ ನೌಕರಿ ನೀಡಲಾಗಿದೆ. ಮೊದಲ ದಿನ ಯಾರು ಏನು ಎನ್ನಬಹುದು, ತಮ್ಮನ್ನು ಹೇಗೆ ಕಾಣಬಹುದು ಎಂಬ ಅಳುಕಿನಿಂದಲೇ ಬಂದಿದ್ದ ಅನು, ನಂತರ ಎಲ್ಲ ಸಿಬ್ಬಂದಿ ಜೊತೆ ಹೊಂದಿಕೊಂಡು ಕೆಲಸದಲ್ಲಿ ತೊಡಗಿದ್ದು ಕಂಡುಬಂತು.

ಸರ್ಕಾರಿ ಉದ್ಯೋಗವಾಗಿರುವ ಹಿನ್ನೆಲೆಯಲ್ಲಿ ಮಾಧ್ಯಮದವರ ಜೊತೆ ಮಾತುಕತೆ ನಿಷೇಧಿಸಲಾಗಿದೆ. ಆದುದರಿಂದ ಅವರು ಸಿಬ್ಬಂದಿ ಬಿಟ್ಟು ಹೊರಗಿನವರ ಜೊತೆ ಮಾತನಾಡಲು ನಿರಾಕರಿಸಿದರು.

ಹೈಕೋರ್ಟ್‌ನಲ್ಲಿ ಸಹಾಯಕರ ಸಭೆ

ಅನು ಅವರಿಗೆ ಹೈಕೋರ್ಟ್‌ನಲ್ಲಿ ಯಾವುದೇ ರೀತಿಯಲ್ಲಿ ಮುಜುಗರದ ವಾತಾವರಣ ನಿರ್ಮಿಸಬಾರದು ಎಂಬ ಸೂಚನೆ ನೀಡುವ ಸಂಬಂಧ ಹೈಕೋರ್ಟ್ ರಿಜಿಸ್ಟ್ರಾರ್ ಪಿ.ಕೃಷ್ಣ ಭಟ್ ಅವರ ನೇತೃತ್ವದಲ್ಲಿ ಸೋಮವಾರ ಎಲ್ಲ ಸಹಾಯಕರ ಸಭೆ ಕರೆಯಲಾಗಿತ್ತು.

ಈ ಕುರಿತು `ಪ್ರಜಾವಾಣಿ~ಗೆ ಮಾಹಿತಿ ನೀಡಿದ ಭಟ್ `ಲೈಂಗಿಕ ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ತರುವ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿಗಳು ಈ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಅನು ಅವರನ್ನು ಹೈಕೋರ್ಟ್‌ನಲ್ಲಿ ಯಾವ ರೀತಿಯಲ್ಲಿ ಸಹೋದ್ಯೋಗಿಗಳು ಸ್ವೀಕರಿಸುತ್ತಾರೆ ಎನ್ನುವ ಭಯ ನಮ್ಮಲ್ಲಿ ಇತ್ತು. ಅದಕ್ಕಾಗಿ ಸಭೆ ಕರೆಯಲಾಗಿತ್ತು. ಮಹಿಳಾ ಉದ್ಯೋಗಿಗಳಂತೂ ಇವರಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಒಕ್ಕೊರಲಿನಿಂದ ತಿಳಿಸಿದರು.

ಎಲ್ಲರೂ ಒಂದೇ ಬಾರಿ ಹೀಗೆ ಹೇಳಿದ್ದು ಕೇಳಿ ನಿಜಕ್ಕೂ ಅಚ್ಚರಿ ಹಾಗೂ ಸಂತಸ ಉಂಟಾಯಿತು~ ಎಂದರು.
`ಲೈಂಗಿಕ ಅಲ್ಪಸಂಖ್ಯಾತರ ನೇಮಕಾತಿಗೆ ಎಲ್ಲ ಇಲಾಖೆಗಳು ಮುಂದೆ ಬಂದರೆ ಅವರು ಇತರ ದಂಧೆಗಳಿಗೆ ಇಳಿಯುವುದು ನಿಲ್ಲುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಯೋಚಿಸಬೇಕಾದ ಅಗತ್ಯ ಇದೆ~ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.