ADVERTISEMENT

ಮರಗಳ ಮಾರಣ ಹೋಮ ವಿರೋಧಿಸಿ ಇಂದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಮೇ 2018, 18:50 IST
Last Updated 18 ಮೇ 2018, 18:50 IST
ಮರಗಳ ಮಾರಣ ಹೋಮ..! ಗೊಟ್ಟಿಗೆರೆಯಿಂದ ಬನ್ನೇರುಘಟ್ಟಕ್ಕೆ ಹೋಗುವ ಮುಖ್ಯ ರಸ್ತೆಯ ಬದಿಗಿದ್ದ ಹಲವಾರು ಬೃಹತ್‌ ಗಾತ್ರದ ಮರಗಳನ್ನು ರಸ್ತೆ ವಿಸ್ತರಣೆಗಾಗಿ ಹನನವಾಗಿದೆ.
ಮರಗಳ ಮಾರಣ ಹೋಮ..! ಗೊಟ್ಟಿಗೆರೆಯಿಂದ ಬನ್ನೇರುಘಟ್ಟಕ್ಕೆ ಹೋಗುವ ಮುಖ್ಯ ರಸ್ತೆಯ ಬದಿಗಿದ್ದ ಹಲವಾರು ಬೃಹತ್‌ ಗಾತ್ರದ ಮರಗಳನ್ನು ರಸ್ತೆ ವಿಸ್ತರಣೆಗಾಗಿ ಹನನವಾಗಿದೆ.   

ಬೆಂಗಳೂರು: ನಗರದ ಹೊರವರ್ತುಲ ರಸ್ತೆಯಲ್ಲಿ ಮರಗಳನ್ನು ಕಡಿಯಲಾಗುತ್ತಿದ್ದು ಇದನ್ನು ತಡೆಯಬೇಕು ಎಂದು ಆಗ್ರಹಿಸಿ  ಪರಿಸರವಾದಿಗಳು ಶನಿವಾರ (ಮೇ 19) ಪ್ರತಿಭಟನೆ ನಡೆಸಲಿದ್ದಾರೆ.

ಬೆಳ್ಳಂದೂರು ಪ್ರದೇಶದ ಇಬ್ಬಲೂರಿನ ಸರ್ವೀಸ್ ರಸ್ತೆಯಲ್ಲಿ ಬೆಳಿಗ್ಗೆ 9 ರಿಂದ 11 ಗಂಟೆಯವರೆಗೆ ಸ್ಥಳೀಯ ನಿವಾಸಿಗಳು ಹಾಗೂ ಪರಿಸರವಾದಿಗಳು ವಿವಿಧ ಸಂಘಟನೆಗಳ ಜೊತೆಗೂಡಿ ಶಾಂತಿಯುತ ಮಾನವ ಸರಪಳಿ ನಿರ್ಮಿಸಲಿದ್ದಾರೆ.

‘ಮರಗಳು ಹಾಗೂ ಅವುಗಳ ಕೊಂಬೆಗಳನ್ನು ಕತ್ತರಿಸುವುದಕ್ಕೆ ನಾವು ವಿರೋಧ ವ್ಯಕ್ತ ಮಾಡುತ್ತಲೇ ಇದ್ದೇವೆ. ಈ ಕುರಿತು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ದೂರನ್ನೂ ನೀಡಿದ್ದೇವೆ. ಆದರೆ, ಪಾಲಿಕೆ ಇದಕ್ಕೆ ಕಿವಿಗೊಟ್ಟಿಲ್ಲ. ಈ ಪ್ರದೇಶದಲ್ಲಿ ಪದೇ ಪದೇ ಮರಗಳನ್ನು ಕತ್ತರಿಸಲಾಗುತ್ತಿದೆ’ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ADVERTISEMENT

ಫಲಕಗಳಿಗೆ ಅಡ್ಡ: ‘ಜಾಹೀರಾತು ಫಲಕಗಳು ಸ್ಪಷ್ಟವಾಗಿ ಕಾಣಿಸಲಿ ಎಂಬ ಉದ್ದೇಶದಿಂದ ಫಲಕಗಳಿಗೆ ಅಡ್ಡ ಬಂದ ದೊಡ್ಡ ದೊಡ್ಡ ಕೊಂಬೆಗಳನ್ನು ಹಾಗೂ ಅವುಗಳಿಗೆ ಸಮೀಪದ ಮರಗಳನ್ನು ಕತ್ತರಿಸಲಾಗುತ್ತಿದೆ. ಕಳೆದ 10ರಂದು ಕೂಡಾ 25 ಮರಗಳನ್ನು ಕತ್ತರಿಸಲಾಗಿದೆ’ ಎಂದು ನಗರದ ಪರಿಸರವಾದಿ ವಿಜಯ್ ನಿಶಾಂತ್ ಹೇಳಿದರು.

‘ಪಾಲಿಕೆ ವ್ಯಾಪ್ತಿಯಲ್ಲಿ ಮರಗಳನ್ನು ಎಗ್ಗಿಲ್ಲದೆ ಕತ್ತರಿಸಲಾಗುತ್ತಿದೆ. ಅರಣ್ಯ ಇಲಾಖೆ ಮತ್ತು ಪಾಲಿಕೆಗೆ ಇದರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲವಾಗಿದೆ. ಹೊರ ವರ್ತುಲ ರಸ್ತೆ ಪ್ರದೇಶದಲ್ಲಿ ಕಳೆದ 10 ತಿಂಗಳಲ್ಲಿ 4 ಬಾರಿ ಮರಗಳನ್ನು ಕತ್ತರಿಸಲಾಗಿದೆ. ಪ್ರತಿಬಾರಿ ಏನಿಲ್ಲವೆಂದರೂ ಕನಿಷ್ಠ 25 ರಿಂದ 30 ಮರಗಳನ್ನು ಕತ್ತರಿಸಲಾಗುತ್ತಿದೆ’ ಎಂದು ನಿಶಾಂತ್‌ ದೂರಿದರು.

ಜಾಗೃತಿ ಉದ್ದೇಶ: ‘ಮರ ಹಾಗೂ ಅವುಗಳ ಕೊಂಬೆ ಕತ್ತರಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ನಾವು ಈ ಮಾನವ ಸರಪಳಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಸುಮಾರು 200ರಷ್ಟು ಸಂಖ್ಯೆಯಲ್ಲಿ ಸ್ಥಳೀಯ ನಿವಾಸಿಗಳು ಹಾಗೂ ಪರಿಸರವಾದಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸಾರ್ವಜನಿಕರಲ್ಲಿ ಜಾಗೃತ ಮೂಡಿಸುವುದೇ ನಮ್ಮ ಉದ್ದೇಶ’ ಎನ್ನುತ್ತಾರೆ ಐ.ಟಿ ತಂತ್ರಜ್ಞ ಮತ್ತು ಪರಿಸರವಾದಿ ಸುನೀಲ್‌ ರೆಡ್ಡಿ.

ಕಾರ್ಯಕ್ರಮದ ಸಂಘಟಕರೂ ಆದ ಅವರು, ‘ಹಲವಾರು ಜಾಹೀರಾತು ಸಂಸ್ಥೆಗಳು ಹಾಗೂ ಜಾಹೀರಾತುಗಳ ಮಾಲೀಕರು ಮರ ಕತ್ತರಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಇದರಿಂದ ಪರಿಸರದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.