ADVERTISEMENT

ಮಳೆ: ಪ್ರಶಸ್ತಿ ಪ್ರದಾನ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2011, 20:05 IST
Last Updated 11 ಸೆಪ್ಟೆಂಬರ್ 2011, 20:05 IST

ಬೆಂಗಳೂರು: ಮಳೆಯಿಂದಾಗಿ ಉದಯ ಟಿವಿ ನಗರದ ಅರಮನೆ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ `ವಿವೆಲ್ ಆಕ್ಟೀವ್ ಫೇರ್ ಉದಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಅಸ್ತವ್ಯಸ್ತಗೊಂಡಿತು.

 ನಟ ಶ್ರೀನಾಥ್ ಮತ್ತು ನಟಿ ಭಾರತಿ ಅವರಿಗೆ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದ ಸಂದರ್ಭದಲ್ಲಿ ವರುಣನ ಆರ್ಭಟ ಹೆಚ್ಚಿತು. ಸುಮಾರು ಮುಕ್ಕಾಲು ತಾಸು ಸುರಿದ ಮಳೆ ಕಡಿಮೆಯಾಗದ ಕಾರಣ ಕಾರ್ಯಕ್ರಮವನ್ನು ಮುಂದೂಡಲಾಯಿತು.

ಇದಕ್ಕೂ ಮುನ್ನ ಮಾತನಾಡಿದ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, `ಕನ್ನಡ ಚಲನಚಿತ್ರ ರಂಗಕ್ಕೆ ಸರ್ಕಾರ ಪ್ರೋತ್ಸಾಹ ನೀಡುತ್ತಾ ಬಂದಿದೆ. ಚಿತ್ರರಂಗದ ಅಮೃತ ಮಹೋತ್ಸವ ಭವನಕ್ಕಾಗಿ 5 ಕೋಟಿ, ಹಿರಿಯ ನಟರಾದ ಡಾ.ರಾಜ್‌ಕುಮಾರ್ ಮತ್ತು ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕಾಗಿ 10 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ಚಲನಚಿತ್ರ ಕಾರ್ಮಿಕರ ಕಲ್ಯಾಣ ನಿಧಿಗೆ 50 ಲಕ್ಷ ರೂಪಾಯಿ ನೀಡಲಾಗಿದೆ~ ಎಂದರು. 

`ಚಲನಚಿತ್ರ ನೀತಿಯನ್ನು ರೂಪಿಸಲಾಗುತ್ತಿದೆ. ಚಿತ್ರೀಕರಣಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಏಕಗವಾಕ್ಷಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ರಾಜ್ಯ ಸರ್ಕಾರ ಸ್ವತಂತ್ರವಾಗಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ನಡೆಸಲಿದ್ದು ಇದಕ್ಕಾಗಿ ಬಜೆಟ್‌ನಲ್ಲಿ 5 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಚಿತ್ರರಂಗದ ಸಬಲೀಕರಣ ಹಾಗೂ ವಿಕಾಸಕ್ಕೆ ಸರ್ಕಾರ ಸದಾ ಬದ್ಧವಾಗಿರುತ್ತದೆ~ ಎಂದು ಹೇಳಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಟ ಶ್ರೀನಾಥ್, `ಕಲಾವಿದನಿಗೆ ಕಲಾಭಿಮಾನಿಗಳು ಬೆನ್ನುತಟ್ಟಿ ಪ್ರಶಸ್ತಿ ನೀಡಿ ಪ್ರೋತ್ಸಾಹಿಸುತ್ತಾರೆ. ಈ ಪ್ರಶಸ್ತಿ ನಾನು ಇನ್ನೂ ಚಿತ್ರರಂಗದಲ್ಲಿ ದುಡಿಯುವಂತೆ ನನಗೆ ಸ್ಫೂರ್ತಿ ನೀಡಿದೆ. ಉದಯ ಟಿವಿಯೊಂದಿಗಿನ ನನ್ನ ಸಂಬಂಧ ಗಟ್ಟಿಯಾಗಿದೆ~ ಎಂದು ಸಂತಸ ವ್ಯಕ್ತಪಡಿಸಿದರು.

ನಟಿ ಭಾರತಿ ಅವರನ್ನು ಮುಖ್ಯಮಂತ್ರಿ ಅವರು ಸನ್ಮಾನಿಸುವ ವೇಳೆಗೆ ಮಳೆ ತೀವ್ರಗೊಂಡಿತು. ಕೆಲವು ಪ್ರೇಕ್ಷಕರು ವೇದಿಕೆಯತ್ತ ಧಾವಿಸಿದರು. ಇನ್ನೂ ಕೆಲವರು ಪ್ಲಾಸ್ಟಿಕ್ ಕುರ್ಚಿಗಳನ್ನು ತಲೆ ಮೇಲೆ ಎತ್ತಿ ಹಿಡಿದು ಆಶ್ರಯ ಪಡೆದರು. ಸುಮಾರು ಮುಕ್ಕಾಲು ತಾಸು ಕಳೆದರೂ ಮಳೆ ನಿಲ್ಲದ ಹಿನ್ನೆಲೆಯಲ್ಲಿ ಸಂಘಟಕರು, `ಕಾರ್ಯಕ್ರಮವನ್ನು ಮುಂದೂಡಲಾಗಿದ್ದು ದಿನಾಂಕವನ್ನು ಶೀಘ್ರದಲ್ಲಿಯೇ ತಿಳಿಸಲಾಗುವುದು~ ಎಂದು  ಘೋಷಿಸಿದರು.

ನಟರಾದ ಶಿವರಾಜ್ ಕುಮಾರ್, ರಮೇಶ್, ದೇವರಾಜ್, ನಟಿಯರಾದ ಸುಧಾರಾಣಿ, ತಾರಾ ಅವರಿಗೆ ಬೆಳ್ಳಿ ಹಬ್ಬದ ವಿಶೇಷ ಪ್ರಶಸ್ತಿಯನ್ನು ಪ್ರಕಟಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಗೃಹ ಸಚಿವ ಆರ್.ಅಶೋಕ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತ್‌ಕುಮಾರ್ ಪಾಟೀಲ್, ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎಂ.ಎಸ್.ರಮೇಶ್, ಉದಯ ಟಿವಿ ಅಧ್ಯಕ್ಷ ಸೆಲ್ವಂ, ಸನ್‌ಟಿವಿ ನೆಟ್‌ವರ್ಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.