ADVERTISEMENT

ಮಾನ್ಯತೆ ನವೀಕರಣ ಪ್ರಕ್ರಿಯೆಗೆ ವಿಟಿಯು ಚಾಲನೆ

ಎಂಜಿನಿಯರಿಂಗ್‌ ಕಾಲೇಜು ಹೊಸ ಕೋರ್ಸ್‌ಗೆ ಮಂಜೂರಾತಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2014, 19:34 IST
Last Updated 13 ಮಾರ್ಚ್ 2014, 19:34 IST

ಬೆಂಗಳೂರು: ಎಂಜಿನಿಯರಿಂಗ್‌ ಕಾಲೇಜುಗಳ ಮಾನ್ಯತೆ ನವೀಕರಣ, ಸೀಟು ಹೆಚ್ಚಳ, ಹೊಸ ಕೋರ್ಸ್‌ಗಳಿಗೆ ಮಂಜೂರಾತಿ ನೀಡುವ ಸಂಬಂಧ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪ್ರಕ್ರಿಯೆ ಆರಂಭಿಸಿದೆ.

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಗೆ (ಎಐಸಿಟಿಇ) ಇದ್ದ ಎಲ್ಲ ಅಧಿಕಾರವನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ನೀಡಿರುವ ಕಾರಣ ಈ ವರ್ಷ ಮಾನ್ಯತೆ ನವೀಕರಣ, ಸೀಟು ಹೆಚ್ಚಳಕ್ಕೆ ಎಐಸಿಟಿಇಗೆ ಪ್ರಸ್ತಾವನೆ ಕಳುಹಿಸುವ ಅಗತ್ಯವಿಲ್ಲ.
ಆಯಾ ಕಾಲೇಜುಗಳಲ್ಲಿ ಇರುವ ಮೂಲಸೌಕರ್ಯಗಳನ್ನು ಪರಿಶೀಲಿಸಿ ಮಾನ್ಯತೆ ನವೀಕರಣ ಸಂಬಂಧ ವಿಶ್ವವಿದ್ಯಾಲಯದ ಸೆನೆಟ್‌ ಮತ್ತು ಸಿಂಡಿಕೇಟ್‌ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಕುಲಪತಿ ಡಾ.ಎಚ್‌.ವಿ. ಮಹೇಶಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಗ್ರಂಥಾಲಯ, ಪ್ರಯೋಗಾಲಯ, ಸಿಬ್ಬಂದಿ, ಕಟ್ಟಡ ಇತ್ಯಾದಿ ಸೌಲಭ್ಯಗಳು ಇವೆಯೇ ಎಂಬ ಬಗ್ಗೆ ಸ್ಥಳೀಯ ವಿಚಾರಣಾ ಸಮಿತಿ ಸದಸ್ಯರು ಖುದ್ದಾಗಿ ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಆನ್‌ಲೈನ್‌ ಮೂಲಕ ಕಾಲೇಜು­ಗಳು ಮಾಹಿತಿ ಕಳುಹಿಸಿವೆ. ಅದನ್ನೇ ಆಧಾರವಾಗಿಟ್ಟು ಮಾನ್ಯತೆ ನವೀಕರಣ, ಸೀಟು ಹೆಚ್ಚಳ ಮಾಡುವುದಿಲ್ಲ. ವಾಸ್ತವ ಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಲಾಗುತ್ತದೆ ಎಂದರು.

ಈಗಾಗಲೇ ಸಮಿತಿಗಳನ್ನು ರಚಿಸಲಾಗಿದೆ. ಈ ತಿಂಗಳ ಅಂತ್ಯ ಇಲ್ಲವೆ ಏಪ್ರಿಲ್‌ ಮೊದಲ ವಾರದ ವೇಳೆಗೆ ಈ ಪ್ರಕ್ರಿಯೆ  ಪೂರ್ಣಗೊಳ್ಳಲಿದೆ. ಇದಾದ ನಂತರ ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದು ಅವರು ತಿಳಿಸಿದರು. ಹೊಸ ಕಾಲೇಜುಗಳನ್ನು ಪ್ರಾರಂಭಿಸಲು ಅನುಮತಿ ನೀಡುವಂತೆ ಕೋರಿ 5–6 ಅರ್ಜಿಗಳು ಬಂದಿವೆ ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.