ADVERTISEMENT

ಮುನಿರತ್ನ ಅರ್ಜಿ ವಿಚಾರಣೆ: ಜೂನ್‌ 6ಕ್ಕೆ ಮುಂದೂಡಿಕೆ

ಮತದಾರರ ಅಕ್ರಮ ಗುರುತಿನ ಚೀಟಿ ಪತ್ತೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 29 ಮೇ 2018, 19:30 IST
Last Updated 29 ಮೇ 2018, 19:30 IST
ಮುನಿರತ್ನ ಅರ್ಜಿ ವಿಚಾರಣೆ: ಜೂನ್‌ 6ಕ್ಕೆ ಮುಂದೂಡಿಕೆ
ಮುನಿರತ್ನ ಅರ್ಜಿ ವಿಚಾರಣೆ: ಜೂನ್‌ 6ಕ್ಕೆ ಮುಂದೂಡಿಕೆ   

ಬೆಂಗಳೂರು: ‘ರಾಜರಾಜೇಶ್ವರಿ ನಗರದಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಮತದಾರರ ಗುರುತಿನ ಚೀಟಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸಬೇಕು’ ಎಂದು ಕೋರಿ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜೂನ್‌ 6ಕ್ಕೆ ಮುಂದೂಡಿದೆ.

ಈ ಕುರಿತ ಅರ್ಜಿಯು ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು.

ವಿಚಾರಣೆ ವೇಳೆ ಮುನಿರತ್ನ ಪರ ವಕೀಲರು, ‘ಅರ್ಜಿದಾರರ ವಿರುದ್ಧ ಜಾಲಹಳ್ಳಿ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ಎಫ್‌ಐಆರ್ ಹಾಕಿದ್ದಾರೆ. ಮತ್ತೊಂದೆಡೆ, ನಗರದ 7ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿಯೂ ಇನ್ನೊಂದು ಪ್ರಕರಣ ದಾಖಲಿಸಲಾಗಿದೆ’ ಎಂದರು.

ADVERTISEMENT

‘ಒಂದೇ ಆರೋಪಕ್ಕೆ ಸಂಬಂಧಿಸಿದಂತೆ ಎರಡು ದೂರುಗಳನ್ನು ದಾಖಲಿಸಿ ತನಿಖೆ ನಡೆಸಲು ಅವಕಾಶವಿಲ್ಲ. ಅಧೀನ ನ್ಯಾಯಾಲಯ ಈಗಾಗಲೇ ಪ್ರಕರಣದ ತನಿಖೆಗೆ ಆದೇಶಿಸಿದೆ. ಹೀಗಾಗಿ ಎರಡೂ ಪ್ರಕರಣಗಳನ್ನು ರದ್ದುಪಡಿಸಬೇಕು’ ಎಂದು ಕೋರಿದರು.

ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ಕಚೇರಿ ಎತ್ತಿದ್ದ ಆಕ್ಷೇಪಗಳನ್ನು ಪರಿಶೀಲಿಸಿದ ನ್ಯಾಯಪೀಠ, ಅರ್ಜಿಯನ್ನು ವಿಚಾರಣೆಗೆ ಮಾನ್ಯ ಮಾಡುವ ಕುರಿತಂತೆ ಜೂನ್‌ 6ರಂದು ನಿರ್ಧರಿಸುವುದಾಗಿ ತಿಳಿಸಿತು.

ಜಾಲಹಳ್ಳಿ ಠಾಣೆ ಪೊಲೀಸರು ಹಾಗೂ ಪ್ರತ್ಯೇಕ ದೂರು ದಾಖಲಿಸಿರುವ ಚುನಾವಣಾಧಿಕಾರಿ ಜೆ.ಆರ್.ಭಾಸ್ಕರ್, ಎನ್.ರಾಕೇಶ್ ಅವರನ್ನು ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.