ADVERTISEMENT

ಮೂರು ತಿಂಗಳ ಬಾಕಿ ವೇತನ ಪಾವತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2018, 19:38 IST
Last Updated 20 ಏಪ್ರಿಲ್ 2018, 19:38 IST
ಬಿಬಿಎಂಪಿ ಗುತ್ತಿಗೆ ಪೌರಕಾರ್ಮಿಕರು ಪಾಲಿಕೆ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ
ಬಿಬಿಎಂಪಿ ಗುತ್ತಿಗೆ ಪೌರಕಾರ್ಮಿಕರು ಪಾಲಿಕೆ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಮೂರು ತಿಂಗಳ ವೇತನ ಪಾವತಿಸುವಂತೆ ಒತ್ತಾಯಿಸಿ ಬಿಬಿಎಂಪಿ ಗುತ್ತಿಗೆ ಪೌರಕಾರ್ಮಿಕರ ಸಂಘದ ಸದಸ್ಯರು ಪಾಲಿಕೆ ಕೇಂದ್ರ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಜನವರಿಯಿಂದ ವೇತನ ನೇರ ಪಾವತಿ ಮಾಡುವುದಾಗಿ ಪಾಲಿಕೆ ಭರವಸೆ ನೀಡಿತ್ತು. ಬಳಿಕ, ಫೆಬ್ರುವರಿಯಿಂದ ಪಾವತಿಸುವುದಾಗಿ ಹೇಳಿತ್ತು. ಆದರೆ, ಈವರೆಗೂ ಸಂಬಳವನ್ನು ನೀಡಿಲ್ಲ ಎಂದು ದೂರಿದರು.

10 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಪೌರಕಾರ್ಮಿಕರನ್ನು ಕೈಬಿಟ್ಟು, ಒಂದೆರಡು ತಿಂಗಳಿಂದ ಕೆಲಸ ಮಾಡುತ್ತಿರುವವರನ್ನು ಸೇರಿಸಿಕೊಳ್ಳಲಾಗಿದೆ. ಇದರಿಂದ ಹಳಬರಿಗೆ ಅನ್ಯಾಯವಾಗಿದೆ. ಅವರ ಹೆಸರುಗಳನ್ನು ಕೂಡಲೇ ಸೇರಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಬಯೋಮೆಟ್ರಿಕ್‌ ಹಾಜರಾತಿಗೆ ಬೆರಳಚ್ಚು ನೀಡಬೇಕು. ಆದರೆ, ಅನೇಕರ ಬೆರಳುಗಳು ಸವೆದು ಹೋಗಿವೆ. ಅಂತಹವರ ಬೆರಳಚ್ಚನ್ನು ಬಯೋಮೆಟ್ರಿಕ್‌ ಯಂತ್ರವು ಪರಿಗಣಿಸುತ್ತಿಲ್ಲ. ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.

‘ನಮಗೆ ಕೊಡುತ್ತಿರುವ ಸಂಬಳದ ಅರ್ಧ ಭಾಗವನ್ನು ಅಧಿಕಾರಿಗಳೇ ಕಿತ್ತುಕೊಳ್ಳುತ್ತಾರೆ. ಈ ಬಗ್ಗೆ ಪ್ರಶ್ನಿಸಿದರೆ, ಕೆಲಸದಿಂದ ತೆಗೆಯುವುದಾಗಿ ಬೆದರಿಕೆ ಹಾಕುತ್ತಾರೆ’ ಎಂದು ಬಾಣಸವಾಡಿಯ ಕೃಷ್ಣಕುಮಾರಿ ಆರೋಪಿಸಿದರು.

‘ಮೂರು ತಿಂಗಳಿಂದ ಸಂಬಳ ಇಲ್ಲದೆ, ಕುಟುಂಬದ ನಿರ್ವಹಣೆ ಕಷ್ಟವಾಗಿದೆ. ಶಾಲೆಗೆ ಹೋಗುವ ಮಕ್ಕಳಿದ್ದು, ಅವರಿಗೆ ಬೇಕಾದ ವಸ್ತುಗಳನ್ನು ಕೊಡಿಸಲು ಆಗುತ್ತಿಲ್ಲ’ ಎಂದು ರಾಮಮೂರ್ತಿನಗರದ ವೆಂಕಟಮ್ಮ ಅಳಲು ತೋಡಿಕೊಂಡರು.

ಪಾಲಿಕೆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರನ್ನು ನಿಖರವಾಗಿ ಗುರುತಿಸುವ ಉದ್ದೇಶದಿಂದ ಬಯೋಮೆಟ್ರಿಕ್‌ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಆದರೆ, ನಿಜವಾದ ಕಾರ್ಮಿಕರ ಬದಲಿಗೆ ಬೇರೆಯವರ ಹೆಸರುಗಳನ್ನು ಪಟ್ಟಿಗೆ ಸೇರಿಸಲಾಗಿದೆ. ಇದನ್ನು ಪರಿಶೀಲಿಸಲಾಗುತ್ತಿದೆ. ಇದರಿಂದಾಗಿ ವೇತನ ಪಾವತಿಸುವುದು ವಿಳಂಬವಾಗಿದೆ ಎಂದು ಪಾಲಿಕೆ ಜಂಟಿ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ಸರ್ಫರಾಜ್‌ ಖಾನ್‌ ತಿಳಿಸಿದರು.

ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿರುವವರನ್ನು ತೆಗೆದು, ಹೊಸಬರನ್ನು ಸೇರಿಸಲಾಗಿದೆ. ಈ ಬಗ್ಗೆ ದೂರುಗಳು ಕೇಳಿಬಂದಿದ್ದವು. ಈ ಕುರಿತು ತನಿಖೆ ನಡೆಸುವಂತೆ ಬೆಂಗಳೂರು ಮಹಾನಗರ ಕಾರ್ಯಪಡೆಗೆ (ಬಿಎಂಟಿಎಫ್‌) ದೂರು ನೀಡಲಾಗಿದೆ ಎಂದರು.

‘ಒಂದೂವರೆ ತಿಂಗಳಲ್ಲಿ ವೇತನ ಪಾವತಿ’
ಪಾಲಿಕೆ ವ್ಯಾಪ್ತಿಯಲ್ಲಿ ಈ ಹಿಂದೆ 32 ಸಾವಿರ ಪೌರಕಾರ್ಮಿಕರು ಇರುವುದಾಗಿ ಗುತ್ತಿಗೆದಾರರು ಹೇಳುತ್ತಿದ್ದರು. ಆದರೆ, 18 ಸಾವಿರ ಜನ ಮಾತ್ರ ಇದ್ದಾರೆ. ಇವರಲ್ಲಿ 15,287 ಕಾರ್ಮಿಕರ ಕುರಿತ ಬಯೋಮೆಟ್ರಿಕ್‌ ಹಾಜರಾತಿ, ಬ್ಯಾಂಕ್‌ ಖಾತೆಗಳನ್ನು ಪರಿಶೀಲಿಸಲಾಗಿದೆ.

ಉಳಿದವರ ಪರಿಶೀಲನೆ ನಡೆಯುತ್ತಿದೆ ಎಂದು ಸರ್ಫರಾಜ್‌ ಖಾನ್‌ ತಿಳಿಸಿದರು.

ಕೆಲವರು ಬ್ಯಾಂಕ್‌ ಖಾತೆಗಳ ವಿವರಗಳನ್ನು ಕೊಟ್ಟಿಲ್ಲ. ಮತ್ತೆ ಕೆಲವರ ಹೆಸರುಗಳು ಬದಲಾಗಿವೆ. ಎಂಟು ವಲಯಗಳಲ್ಲೂ ಈ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ. ಬ್ಯಾಂಕ್‌ ಖಾತೆ, ಬಯೋಮೆಟ್ರಿಕ್‌ ಎಲ್ಲವೂ ಸರಿ ಇರುವವರಿಗೆ ಶನಿವಾರದಿಂದಲೇ ವೇತನ ನೇರ ಪಾವತಿ ಮಾಡಲಾಗುತ್ತದೆ. ಉಳಿದವರಿಗೆ ಒಂದೂವರೆ ತಿಂಗಳಲ್ಲಿ ನೀಡಲಾಗುತ್ತದೆ ಎಂದರು ಅವರು ತಿಳಿಸಿದರು.

‘ಪೌರಕಾರ್ಮಿಕರ ಬೇಡಿಕೆಗಳನ್ನು ಈಡೇರಿಸದಿದ್ದರೆ, ಚುನಾವಣೆ ದಿನ ಕಸ ಗುಡಿಸುವುದನ್ನು ನಿಲ್ಲಿಸಿ ಪ್ರತಿಭಟಿಸಲಾಗುತ್ತದೆ.’
– ವಿನಯ್‌ ಶ್ರೀನಿವಾಸ್‌, ಬಿಬಿಎಂಪಿ ಗುತ್ತಿಗೆ ಪೌರಕಾರ್ಮಿಕರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.