ADVERTISEMENT

ಮೆಟ್ರೊ ಗೆ ರೂ 1,500 ಕೋಟಿ

​ಪ್ರಜಾವಾಣಿ ವಾರ್ತೆ
Published 8 ಜೂನ್ 2012, 19:30 IST
Last Updated 8 ಜೂನ್ 2012, 19:30 IST

ಬೆಂಗಳೂರು:  `ನಮ್ಮ ಮೆಟ್ರೊ~ಗೆ ರೂ 1,500 ಕೋಟಿ ಸೇರಿದಂತೆ ವಿವಿಧ ನಗರಾಭಿವೃದ್ಧಿ ಯೋಜನೆಗಳಿಗಾಗಿ ವಸತಿ ಮತ್ತು ನಗರಾಭಿವೃದ್ಧಿ ನಿಗಮವು (ಹುಡ್ಕೊ) ರಾಜ್ಯ ಸರ್ಕಾರಕ್ಕೆ ಹೊಸದಾಗಿ ಒಟ್ಟು ರೂ 2,500 ಕೋಟಿ ಸಾಲವನ್ನು ಮಂಜೂರು ಮಾಡಿದೆ.

ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ವಸತಿ ಮತ್ತು ನಗರಾಭಿವೃದ್ಧಿ ಕುರಿತ ವಿಚಾರ ಸಂಕಿರಣದಲ್ಲಿ ಶುಕ್ರವಾರ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ.ಪಿ.ಬಳಿಗಾರ್ ತಿಳಿಸಿದರು.

 ಮೆಟ್ರೊ ಯೋಜನೆಗೆ ಈಗಾಗಲೇ ರೂ 700 ಕೋಟಿ ಸಾಲ ನೀಡಲಾಗಿದೆ. ಯೋಜನೆಯ ಮೊದಲ ಹಂತಕ್ಕೆ ಸದ್ಯ ರೂ 500 ಕೋಟಿ ನೀಡಲಾಗುವುದು. ಉಳಿದ ಸಾಲವನ್ನು ಎರಡನೇ ಹಂತಕ್ಕೆ ನೀಡಲಾಗುವುದು. ಎರಡನೇ ಹಂತದ ಯೋಜನೆಯು ಕೇಂದ್ರದ ಅನುಮೋದನೆಗಾಗಿ ಕಾಯುತ್ತಿದೆ ಎಂದು ಅವರು ಹೇಳಿದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ರಾಜೀವ್ ಗಾಂಧಿ ವಸತಿ ನಿಗಮಗಳಿಗೆ ತಲಾ ರೂ 500 ಕೋಟಿ ಸಾಲವನ್ನು ಕೊಡಲಾಗುವುದು ಎಂದು ಅವರು ವಿವರಿಸಿದರು.

 `ದೇಶದಲ್ಲಿ ನಗರೀಕರಣದ ವೇಗ ಹೆಚ್ಚಾಗಿದೆ. ಸದ್ಯ ನಗರ ಪ್ರದೇಶಗಳಲ್ಲಿ 38 ಕೋಟಿ ಜನಸಂಖ್ಯೆ ಇದೆ. 2039ರ ವೇಳೆಗೆ 60 ಕೋಟಿಯಷ್ಟು ಜನರು ನಗರಗಳಲ್ಲಿ ವಾಸಿಸಲಿದ್ದಾರೆ. ಅಷ್ಟು ಜನರಿಗೆ ವಸತಿ ಸೌಕರ್ಯ ಒದಗಿಸುವುದು ನಮ್ಮ ಮುಂದಿರುವ ಸವಾಲು~ ಎಂದು ಅವರು ತಿಳಿಸಿದರು.

 ರಾಜ್ಯ ಸರ್ಕಾರವು ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ 100ರಿಂದ 500 ಎಕರೆಯಷ್ಟು ಜಮೀನಿನಲ್ಲಿ ವಸತಿ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಸಾವಿರ ಶೌಚಾಲಯಗಳು
ಬೆಂಗಳೂರು: ಮಹಾನಗರದ ವ್ಯಾಪ್ತಿಯಲ್ಲಿ 200 ಸ್ಕೈವಾಕ್‌ಗಳು, 1000 ಸಾರ್ವಜನಿಕ ಶೌಚಾಲಯಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಿದ್ಧವಿದೆ ಎಂದು ಪಾಲಿಕೆಯ ಆಯುಕ್ತ ಎಂ.ಕೆ.ಶಂಕರಲಿಂಗೇಗೌಡ ತಿಳಿಸಿದರು. ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ವಸತಿ ಮತ್ತು ನಗರಾಭಿವೃದ್ಧಿ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

 `ನಗರದಲ್ಲಿ ಪ್ರತಿದಿನ 5,000 ಟನ್ ಘನತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಕಸದಿಂದ ವಿದ್ಯುತ್ ಉತ್ಪಾದನೆ ಸೇರಿದಂತೆ ಘನತ್ಯಾಜ್ಯ ನಿರ್ವಹಣೆ ಕಾರ್ಯದಲ್ಲಿ ನೀವು (ಖಾಸಗಿ ಕಂಪೆನಿಗಳು) ಕೈ ಜೋಡಿಸಿ~ ಎಂದು ಅವರು ಆಹ್ವಾನ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.