ಬೆಂಗಳೂರು: `ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆ ಭರದಿಂದ ಸಾಗಿದ್ದು, ಮೇ 6ಕ್ಕೆ ಫಲಿತಾಂಶ ಪ್ರಕಟಿಸುವ ವಿಶ್ವಾಸವಿದೆ~ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಬುಧವಾರ ವಿಧಾನಸೌಧದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, `ರಾಜ್ಯದ ಎಲ್ಲ ಮೌಲ್ಯಮಾಪನ ಕೇಂದ್ರಗಳಲ್ಲೂ ಪೂರ್ಣ ಪ್ರಮಾಣದಲ್ಲಿ ಮೌಲ್ಯಮಾಪನ ಪ್ರಕ್ರಿಯೆ ನಡೆಯುತ್ತಿದೆ. ಇದರಿಂದಾಗಿ ಮೇ 6ರೊಳಗೆ ಮೌಲ್ಯಮಾಪನ ಪೂರ್ಣಗೊಳಿಸಿ, ಫಲಿತಾಂಶ ಪ್ರಕಟಿಸುವ ಸಾಧ್ಯತೆ ಕಾಣಿಸುತ್ತಿದೆ~ ಎಂದರು.
`ತ್ವರಿತವಾಗಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಲು ಸಾಧ್ಯವಾದಲ್ಲಿ ವೃತ್ತಿ ಶಿಕ್ಷಣ ಕೋರ್ಸ್‌ಗಳ ಸಾಮಾನ್ಯ ಪ್ರವೇಶ ಪರೀಕ್ಷೆಯ ದಿನಾಂಕವನ್ನು ಮರುನಿಗದಿ ಮಾಡುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಮನವಿ ಮಾಡುವ ಬಗ್ಗೆ ಯೋಚಿಸಲಾಗಿದೆ. ಮೇ 6ಕ್ಕೆ ಫಲಿತಾಂಶ ಪ್ರಕಟಣೆ ಸಾಧ್ಯ ಎಂಬುದು ಖಚಿತವಾದಲ್ಲಿ ಅಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನಕ್ಕೆ ಬರಲಾಗುವುದು~ ಎಂದು ಹೇಳಿದರು.
`ಬದಲಾವಣೆ ಅಸಾಧ್ಯ~: ಪದವಿಪೂರ್ವ ಶಿಕ್ಷಣ ಮಂಡಳಿ ಮತ್ತು ಪರೀಕ್ಷಾ ಪ್ರಾಧಿಕಾರದ ಉನ್ನತ ಮೂಲಗಳ ಪ್ರಕಾರ, ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಣೆ ಹಾಗೂ ಸಿಇಟಿ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಯೂ ಆಗದು. ಈಗ ನಿಗದಿ ಆಗಿರುವಂತೆ ಮೇ 21, 22, 23ರಂದೇ ಸಿಇಟಿ ಪರೀಕ್ಷೆ ನಡೆಯಲಿದೆ. ಇತರೆ ರಾಜ್ಯಗಳಲ್ಲಿ ಸಿಇಟಿ ನಡೆಯುವುದರಿಂದ ದಿನಾಂಕವನ್ನು ಹಿಂದಕ್ಕೆ ಬದಲಾಯಿಸಲು ಅವಕಾಶವೇ ಇಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.