ADVERTISEMENT

ಮೊಬೈಲ್ ಪಕ್ಕಕ್ಕಿಡಿ, ಕಡತ ವಿಲೇವಾರಿ ಮಾಡಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2017, 20:15 IST
Last Updated 1 ಡಿಸೆಂಬರ್ 2017, 20:15 IST
ರತ್ನಪ್ರಭಾ ಕೆ
ರತ್ನಪ್ರಭಾ ಕೆ   

ಬೆಂಗಳೂರು: ಸಚಿವಾಲಯದ ಸಿಬ್ಬಂದಿ ಮೊಬೈಲ್‌ಗಳನ್ನು ಪಕ್ಕಕ್ಕಿಟ್ಟು ಬಾಕಿ ಇರುವ ಕಡತಗಳ ವಿಲೇವಾರಿಗೆ ಗಮನ ಹರಿಸಬೇಕು ಎಂದು ನೂತನ ಮುಖ್ಯ ಕಾರ್ಯದರ್ಶಿ ಕೆ.ರತ್ನಾಪ್ರಭಾ ಸೂಚಿಸಿದ್ದಾರೆ.

ಸಚಿವಾಲಯ ನೌಕರರ ಸಂಘದಿಂದ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ  ಶುಕ್ರವಾರ ಅವರಿಗೆ ಏರ್ಪಡಿಸಿದ್ದ ಅಭಿನಂದನೆ ಮತ್ತು ನಿಕಟ ಪೂರ್ವ ಮುಖ್ಯ ಕಾರ್ಯದರ್ಶಿ ಸುಭಾಶ್ಚಂದ್ರ ಖುಂಟಿಆ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಮೊಬೈಲ್‌ ಫೋನ್‌ಗಳ ಹೆಚ್ಚಿನ ಬಳಕೆಯಿಂದ ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕೆಲ ರಾಜ್ಯಗಳಲ್ಲಿ ಸರ್ಕಾರಿ ನೌಕರರು ಕರ್ತವ್ಯದ ವೇಳೆ ಮೊಬೈಲ್ ಬಳಸದಂತೆ ನಿರ್ಬಂಧ ವಿಧಿಸಲಾಗಿದೆ. ರಾಜ್ಯದಲ್ಲಿ ಅಂತಹ ಕ್ರಮ ಕೈಗೊಳ್ಳುವುದಿಲ್ಲ. ಆದರೆ, ಸಿಬ್ಬಂದಿಯೇ ಸ್ವಯಂ ನಿರ್ಬಂಧ ಹಾಕಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ADVERTISEMENT

ಸರ್ಕಾರಕ್ಕೆ ಒಳ್ಳೆಯ ಹೆಸರು ಬರಬೇಕಾದರೆ ಸಚಿವರು ಅಥವಾ ಹಿರಿಯ ಅಧಿಕಾರಿಗಳಷ್ಟೇ ಅಲ್ಲದೆ ಸಿಬ್ಬಂದಿಯೂ ಪ್ರಮುಖ ಕಾರಣರಾಗುತ್ತಾರೆ. ಕರ್ನಾಟಕ ರಾಜ್ಯ ಬಹುತೇಕ ಕ್ಷೇತ್ರಗಳಲ್ಲಿ ನಂ.1 ಸ್ಥಾನದಲ್ಲಿದೆ. ಆ ಹೆಗ್ಗಳಿಕೆಗೆ ನೌಕರರೇ ಕಾರಣ. ಸರ್ಕಾರಿ ನೌಕರಿ ದೊರೆಯುವುದು ಸೌಭಾಗ್ಯ. ಈ ಅವಕಾಶವನ್ನು ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಲು ಉಪಯೋಗಿಸಬೇಕು ಎಂದು ಹೇಳಿದರು.

ಸುಭಾಶ್ಚಂದ್ರ ಖುಂಟಿಆ ಮಾತನಾಡಿ, ‘ರಾಷ್ಟ್ರದಲ್ಲೆ ಹಲವು ಹೊಸ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ  ಕರ್ನಾಟಕ ಮಾದರಿ ರಾಜ್ಯವಾಗಿದೆ. ಆ ಘನತೆಯನ್ನು ಉಳಿಸಿಕೊಳ್ಳಲು ಸಿಬ್ಬಂದಿ ಶ್ರಮಿಸಬೇಕು. ನೂತನ ಮುಖ್ಯ ಕಾರ್ಯದರ್ಶಿಗೂ ಅಗತ್ಯ ಸಹಕಾರ ನೀಡಿ’ ಎಂದು ಸಲಹೆ ನೀಡಿದರು.

ಮುಖ್ಯಮಂತ್ರಿ, ರಾಜ್ಯಪಾಲರನ್ನು ಭೇಟಿಯಾದ ರತ್ನಪ್ರಭಾ: ಅಧಿಕಾರ ವಹಿಸಿಕೊಂಡ ನಂತರದಲ್ಲಿ ರತ್ನಪ್ರಭಾ ಅವರು, ರಾಜ್ಯಪಾಲ ವಜುಭಾಯಿ ವಾಲಾ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಶುಭಾಶಯ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.