ADVERTISEMENT

ಯುಪಿಎಸ್‌ಸಿ: ರಾಜ್ಯದ ಅಭ್ಯರ್ಥಿಗಳಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 9 ಜೂನ್ 2011, 19:30 IST
Last Updated 9 ಜೂನ್ 2011, 19:30 IST

ಬೆಂಗಳೂರು: `ನೀವು ಕರ್ತವ್ಯದ ಮೇರೆಗೆ ದೇಶದ ಯಾವುದೇ ಭಾಗಕ್ಕೆ ಹೋಗಿ, ಅಲ್ಲಿ ಆಗಿರುವ ಅಭಿವೃದ್ಧಿಯ ಕುರಿತು ನಮಗೆ ತಿಳಿಸಿ. ಅದನ್ನು ನಾವೂ ಅನುಸರಿಸುತ್ತೇವೆ... ನೀವು ರಾಜ್ಯದಲ್ಲೇ ಕರ್ತವ್ಯಕ್ಕೆ ನಿಯೋಜಿತರಾದರೆ ನಿಮ್ಮ ಕ್ಷೇತ್ರದಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಕುರಿತು ನಮಗೆ ತಿಳಿಸಿ, ಅಗತ್ಯ ಸಹಕಾರ ನೀಡುತ್ತೇವೆ...~

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ ವಿವಿಧ ಆಡಳಿತ ಸೇವಾ ಪರೀಕ್ಷೆಗಳಲ್ಲಿ ಆಯ್ಕೆಯಾಗಿರುವ ರಾಜ್ಯದ 39 ಅಭ್ಯರ್ಥಿಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೀಡಿರುವ ಭರವಸೆ ಇದು.

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಆಯ್ಕೆಯಾದ ರಾಜ್ಯದ ಅಭ್ಯರ್ಥಿಗಳನ್ನು ವಿಧಾನಸೌಧದಲ್ಲಿ ಗುರುವಾರ ಸನ್ಮಾನಿಸಿದ ಯಡಿಯೂರಪ್ಪ, `ರಾಜ್ಯದಿಂದ ಇಷ್ಟು ದೊಡ್ಡ ಸಂಖ್ಯೆಯ ಅಭ್ಯರ್ಥಿಗಳು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಆಯ್ಕೆಯಾಗಿರುವುದು ಇದೇ ಮೊದಲು. ನಿಮಗೆ ದೊರೆಯುವ ಸನ್ಮಾನ ರಾಜ್ಯದ ಇತರ ಅಭ್ಯರ್ಥಿಗಳಲ್ಲೂ ಸ್ಫೂರ್ತಿ ಮೂಡಿಸಲಿ ಎಂಬುದೇ ಸರ್ಕಾರದ ಉದ್ದೇಶ~ ಎಂದರು.

`ಅದೃಷ್ಟ ಒಲಿಯುವುದು ಶ್ರಮಜೀವಿಗಳಿಗೆ ಮಾತ್ರ, ಹೇಡಿಗಳಿಗಲ್ಲ~ ಎಂದ ಅವರು, ಮಾಹಿತಿ ತಂತ್ರಜ್ಞಾನದ ಲಾಭ ಪಡೆದು ಅಭಿವೃದ್ಧಿ ಕೇಂದ್ರಿತ ಕೆಲಸ ಮಾಡಿ ಎಂದು ಕಿವಿಮಾತು ಹೇಳಿದರು. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಆಯ್ಕೆಯಾದವರಿಗೆ ಸರ್ಕಾರದ ವತಿಯಿಂದ ಸನ್ಮಾನ ನಡೆಯುತ್ತಿರುವುದು ರಾಜ್ಯದ ಇತಿಹಾಸದಲ್ಲೇ ಪ್ರಥಮ ಎನ್ನಲಾಗಿದೆ.

ಸನ್ಮಾನಿತರ ಪರವಾಗಿ ಸಂದೇಶ್ ನಾಯಕ್ ಮತ್ತು ಬಿ. ಸಿಂಧು ಮಾತನಾಡಿದರು. ಸಚಿವರಾದ ಸಿ.ಎಂ. ಉದಾಸಿ, ಶೋಭಾ ಕರಂದ್ಲಾಜೆ, ಜಗದೀಶ ಶೆಟ್ಟರ್, ವಿ.ಎಸ್. ಆಚಾರ್ಯ, ಸುರೇಶ್‌ಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.