ADVERTISEMENT

ಯೂನಿಕೋಡ್ ಕನ್ನಡದ ಶಿಷ್ಟತೆ: ಏ.30ರೊಳಗೆಆದೇಶ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2012, 19:30 IST
Last Updated 9 ಏಪ್ರಿಲ್ 2012, 19:30 IST

ಬೆಂಗಳೂರು: ಮಾಹಿತಿ ತಂತ್ರಜ್ಞಾನದಲ್ಲಿ `ಯೂನಿಕೋಡ್~ ಅನ್ನು ಕನ್ನಡದ ಶಿಷ್ಟತೆ ಎಂದು ಏಪ್ರಿಲ್ 30ರೊಳಗೆ ಅಧಿಸೂಚನೆ ಹೊರಡಿಸುವುದಾಗಿ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಅವರು ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿಯ ಸದಸ್ಯರಿಗೆ ಸೋಮವಾರ ಭರವಸೆ ನೀಡಿದ್ದಾರೆ.

`ಯೂನಿಕೋಡ್~ ಅನ್ನು ಕನ್ನಡ ಶಿಷ್ಟತೆ ಎಂಬುದಾಗಿ ಘೋಷಿಸುವ ಸಂಬಂಧ ವಿಧಾನಸೌಧದಲ್ಲಿ ಮುಖ್ಯ ಕಾರ್ಯದರ್ಶಿಯವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಾಹಿತಿ ತಂತ್ರಜ್ಞಾನ ಇಲಾಖೆ ಮತ್ತು ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿಯ ಸದಸ್ಯರ ಜೊತೆ ಸಮಾಲೋಚನಾ ಸಭೆ ನಡೆಸಿದರು. ಸಭೆಯಲ್ಲಿ ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅವರಿಗೆ ಮುಖ್ಯ ಕಾರ್ಯದರ್ಶಿಯವರು ಈ ಭರವಸೆ ನೀಡಿದರು.

ಈ ಕುರಿತು `ಪ್ರಜಾವಾಣಿ~ ಜೊತೆ ಮಾತನಾಡಿದ ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿ ಸದಸ್ಯರೂ ಆಗಿರುವ ಚಂದ್ರಶೇಖರ ಕಂಬಾರ, `ಆದೇಶ ಪ್ರಕಟಿಸುವ ಸಂಬಂಧ ಮುಖ್ಯ ಕಾರ್ಯದರ್ಶಿಯವರು ಚರ್ಚೆ ನಡೆಸಿದರು.

ಯಾವ ದಿನಾಂಕದೊಳಗೆ ಅಧಿಸೂಚನೆ ಹೊರಡಿಸಲಾಗುತ್ತದೆ ಎಂಬುದನ್ನು ತಿಳಿಸುವಂತೆ ನಾನು ಒತ್ತಾಯಿಸಿದೆ. ಆಗ, ಏ.30ರೊಳಗೆ ಅಧಿಸೂಚನೆ ಪ್ರಕಟಿಸುವುದಾಗಿ ರಂಗನಾಥ್ ನನಗೆ ಭರವಸೆ ನೀಡಿದರು~ ಎಂದರು.

ಈ ವಿಷಯದಲ್ಲಿ ಪ್ರಸ್ತಾವವೊಂದನ್ನು ಸಚಿವ ಸಂಪುಟದ ಮುಂದೆ ಮಂಡಿಸಿ ಒಪ್ಪಿಗೆ ಪಡೆದ ಬಳಿಕವೇ ಅಧಿಸೂಚನೆ ಹೊರಡಿಸಲು ಸರ್ಕಾರ ನಿರ್ಧರಿಸಿದೆ. ಅಲ್ಲದೇ `ಯೂನಿಕೋಡ್~ ಅನ್ನು ಕನ್ನಡದ ಶಿಷ್ಟತೆಯಾಗಿ ಘೋಷಿಸುವುದಕ್ಕೆ ಪೂರಕವಾಗಿ ಒಪ್ಪಿಕೊಳ್ಳುವ ಸಾಫ್ಟ್‌ವೇರ್‌ನ ಬಗ್ಗೆಯೂ ಸರ್ಕಾರದ ಮಟ್ಟದಲ್ಲೇ ತೀರ್ಮಾನ ಕೈಗೊಳ್ಳಲು ಯೋಚಿಸಲಾಗಿದೆ. ಈ ಎಲ್ಲ ವಿಷಯಗಳನ್ನೂ ಮುಖ್ಯ ಕಾರ್ಯದರ್ಶಿಯವರು ಸಮಿತಿಯ ಸದಸ್ಯರಿಗೆ ಮನವರಿಕೆ ಮಾಡಿದ್ದಾರೆ.

ಮಾಹಿತಿ ತಂತ್ರಜ್ಞಾನ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಎನ್.ವಿದ್ಯಾಶಂಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಬಸವರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು ಬಳಿಗಾರ್, ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿ ಸದಸ್ಯರಾದ ಯು.ಬಿ.ಪವನಜ, ಪ್ರೊ.ರಾಜಗೋಪಾಲ್, ಜ್ಞಾನ ಆಯೋಗದ ಸದಸ್ಯ ಕಾರ್ಯದರ್ಶಿ ಪ್ರೊ.ಎಂ.ಕೆ.ಶ್ರೀಧರ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT