ಬೆಂಗಳೂರು: ಕೆಂಗೇರಿ ಬಳಿಯ ದೊಡ್ಡಬೆಲೆಯಲ್ಲಿ ಪ್ರತಿದಿನ 140 ದಶಲಕ್ಷ ಲೀಟರ್ (ಎಂಎಲ್‌ಡಿ) ಕೊಳಚೆ ನೀರನ್ನು ಸಂಸ್ಕರಿಸುವ ಘಟಕ ಸ್ಥಾಪಿಸಲು ಬೆಂಗಳೂರು ಜಲಮಂಡಳಿ ಸಮಗ್ರ ಯೋಜನಾ ವರದಿಯನ್ನು (ಡಿಪಿಆರ್) ಸಿದ್ಧಪಡಿಸಿದೆ.
ಎರಡು ಹಂತಗಳಲ್ಲಿ ಯೋಜನೆ ಅನುಷ್ಠಾನಗೊಳಿಸಲು ಮುಂದಾಗಿರುವ ಜಲಮಂಡಳಿ ವೃಷಭಾವತಿ ಕಣಿವೆಯಲ್ಲಿ ಕೊಳಚೆ ನೀರು ಸಂಸ್ಕರಣೆ ಮತ್ತು ಮರುಬಳಕೆಯ ಯೋಜನೆ ಜಾರಿಗೊಳಿಸಲು ಉದ್ದೇಶಿಸಿದೆ.
ಮೊದಲ ಹಂತದಲ್ಲಿ ತಾಂತ್ರಿಕ ಅಂಶಗಳು, ಕಾರ್ಯಕ್ಷೇತ್ರ, ಸಂಸ್ಕರಣಾ ಘಟಕ ಸ್ಥಾಪನೆಯ ಸ್ಥಳದ ಬಗ್ಗೆ ಮತ್ತು ಎರಡನೇ ಹಂತದಲ್ಲಿ ನೀರಿನ ಮರುಬಳಕೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಹಾಗೂ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವ ವಿಚಾರಗಳಿಗೆ ವರದಿಯಲ್ಲಿ ಆದ್ಯತೆ ನೀಡಲಾಗಿದೆ.
140 ಎಂಎಲ್‌ಡಿ ನೀರನ್ನು ಸಂಸ್ಕರಿಸಲು ಯೋಜನಾ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಸಂಸ್ಕರಿಸಿದ ನೀರನ್ನು ತಾವರೆಕೆರೆ ಪಂಪಿಂಗ್ ಸ್ಟೇಷನ್‌ಗೆ ಪಂಪ್ ಮಾಡಲಾಗುವುದು. ನಂತರ 70 ಎಂಎಲ್‌ಡಿ ನೀರನ್ನು ಅರ್ಕಾವತಿ ನದಿಗೆ ಹರಿಸಲಾಗುವುದು. ಆ ನೀರನ್ನು ಮಳೆ ನೀರಿನ ಜತೆಗೆ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಹರಿಸಲಾಗುವುದು. ಇನ್ನುಳಿದ 70 ಎಂಎಲ್‌ಡಿ ನೀರನ್ನು ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಪೂರೈಸಲು ಉದ್ದೇಶಿಸಲಾಗಿದೆ.
ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ನೀರಿನ ಸಂಗ್ರಹ ಸಾಮರ್ಥ್ಯ ಕುಸಿದಿದ್ದು, ಜಲಾಶಯಕ್ಕೆ ನೀರು ಹರಿಸಿ ಸುತ್ತಮುತ್ತಲಿನ ಪ್ರದೇಶದ ಅಂತರ್ಜಲ ಮಟ್ಟ ಹೆಚ್ಚಿಸುವುದು ಯೋಜನೆಯ ಉದ್ದೇಶವಾಗಿದೆ. 145 ಎಂಎಲ್‌ಡಿ ನೀರು ಸಂಗ್ರಹ ಸಾಮರ್ಥ್ಯದ ತಿಪ್ಪಗೊಂಡನಹಳ್ಳಿ ಜಲಾಶಯದಿಂದ ಮುಂದಿನ ದಿನಗಳಲ್ಲಿ ನಗರಕ್ಕೆ ನೀರು ಪೂರೈಕೆ ಮಾಡುವುದು ಯೋಜನೆಯಲ್ಲಿ ಸೇರಿದೆ.
ಸಿಂಗಪುರದ ಪಬ್ಲಿಕ್ ಯುಟಿಲಿಟಿ ಬೋರ್ಡ್ (ಪಿಯುಬಿ) ಸಹಭಾಗಿತ್ವದಲ್ಲಿ ಯೋಜನೆ ಜಾರಿಗೆ ಬರಲಿದೆ. ಪಿಯುಬಿ, ಟೆಮಾಸೆಕ್ ಫೌಂಡೇಷನ್ ಮತ್ತು ಸಿಎಚ್2ಎಂ ಹಿಲ್ ಕನ್ಸಲ್ಟಿಂಗ್ ಸಂಸ್ಥೆಗಳು ಸಂಸ್ಕರಣಾ ಘಟಕ ಸ್ಥಾಪನೆ ಕುರಿತ ವಾಸ್ತವಾಂಶದ ವರದಿ ಸಿದ್ಧಪಡಿಸಿವೆ.ಲೋಕಸಭಾ ಚುನಾವಣೆಯ ನಂತರ ಯೋಜನೆಯ ಅಂತಿಮ ರೂಪುರೇಷೆ ಸಿದ್ಧವಾಗಲಿದೆ ಎನ್ನುತ್ತಾರೆ ಜಲಮಂಡಳಿಯ ಅಧಿಕಾರಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.