ADVERTISEMENT

ರಂಗಭೂಮಿಗೆ ಹಣೆಪಟ್ಟಿ ಕಟ್ಟುವುದು ಸಲ್ಲ

ಚಿತ್ರ ನಿರ್ದೇಶಕ ಟಿ.ಎಸ್‌.ನಾಗಾಭರಣ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2016, 19:30 IST
Last Updated 1 ಆಗಸ್ಟ್ 2016, 19:30 IST
ಕಗ್ಗೆರೆ ಮಂಜು ಅವರು ‘ಕೊನೆ ಅಂಕ’ ಏಕವ್ಯಕ್ತಿ ನಾಟಕವನ್ನು ಪ್ರದರ್ಶಿಸಿದರು
ಕಗ್ಗೆರೆ ಮಂಜು ಅವರು ‘ಕೊನೆ ಅಂಕ’ ಏಕವ್ಯಕ್ತಿ ನಾಟಕವನ್ನು ಪ್ರದರ್ಶಿಸಿದರು   

ಬೆಂಗಳೂರು:  ‘ರಂಗಭೂಮಿಯನ್ನು ಏಕವ್ಯಕ್ತಿ, ಐತಿಹಾಸಿಕ, ಪೌರಾಣಿಕ ನಾಟಕ ಎಂಬ ಹಣೆಪಟ್ಟಿಯಿಂದ ನೋಡುವುದು ಸರಿಯಲ್ಲ. ಅದು ಬಹು ಆಯಾಮಗಳನ್ನು ಒಳಗೊಂಡದ್ದು’ ಎಂದು ಚಿತ್ರ ನಿರ್ದೇಶಕ ಟಿ.ಎಸ್‌.ನಾಗಾಭರಣ ಹೇಳಿದರು.

ಪದ ಸಂಸ್ಥೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸೋಮವಾರ ಆಯೋಜಿಸಿದ್ದ ‘ರಂಗಶ್ರಾವಣ’ ರಂಗೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.‘ರಂಗಭೂಮಿಗೆ ಹಣೆಪಟ್ಟಿ ಕಟ್ಟುವ ಮೂಲಕ ಅದರ ಇತಿಹಾಸವನ್ನು ಬೇರೆ ಬೇರೆ ರೀತಿಯಲ್ಲಿ ಬರೆಯಲಾಗುತ್ತಿದೆ. ಮನುಷ್ಯನನ್ನು ಮನುಷ್ಯನನ್ನಾಗಿ ನೋಡಲು ರಂಗಭೂಮಿಯಲ್ಲಿ ಮಾತ್ರ ಸಾಧ್ಯ. ಅಂತಹ ಮಾನವತೆಯ ವೇದಿಕೆಯನ್ನು ಬಳಸಿಕೊಂಡು ಸಮಾಜದಲ್ಲಿ ಮಡುಗಟ್ಟಿರುವ ಮನೋ ವಿಕಾರವನ್ನು ಹೋಗಲಾಡಿಸಬೇಕು’ ಎಂದರು.

‘ನಾಟಕ ಅದ್ದೂರಿಯಾಗಿರಬೇಕು. ಎಲ್ಲ ವಿಭಾಗಗಳನ್ನು ಹೊಂದಿರಬೇಕು ಎಂಬ ಮಾತುಗಳು 70ರ ದಶಕದ ಈಚೆಗೆ ಕೇಳಿಬರುತ್ತಿವೆ. ಆದರೆ, ಅಂದಿನ ದಿನಗಳಲ್ಲೇ ಪ್ರೇಕ್ಷಕರನ್ನು ಪ್ರಫುಲ್ಲಗೊಳಿಸುವ ಏಕವ್ಯಕ್ತಿ ಪ್ರಯೋಗಗಳು ಪ್ರದರ್ಶನ ಕಂಡಿದ್ದವು. ನಟ ತನ್ನ ನಿಜವಾದ ಪ್ರತಿಭೆಯನ್ನು ಸಾಬೀತುಪಡಿಸಬೇಕಾದರೆ ಏಕವ್ಯಕ್ತಿ ನಾಟಕಕ್ಕೆ ಒಡ್ಡಿಕೊಳ್ಳಬೇಕು’ ಎಂದರು.

‘ಏಕವ್ಯಕ್ತಿ ನಾಟಕಗಳಿಗೆ ಪ್ರದರ್ಶಕ ಎಷ್ಟು ಮುಖ್ಯವೋ ಪ್ರೇಕ್ಷಕರು ಅಷ್ಟೇ ಮುಖ್ಯ. ಆದರೆ, ಇತ್ತೀಚಿನ ದಿನಗಳಲ್ಲಿ ಏಕವ್ಯಕ್ತಿ ನಾಟಕಗಳಿಗೆ ಪ್ರೇಕ್ಷಕರ ಕೊರತೆ ಎದುರಾಗಿದೆ’ ಎಂದು ವಿಷಾದಿಸಿದರು.

‘ಹರಿಕಥೆ ಮಾಡುವವರು ಹಲವು ಪಾತ್ರ, ವೇಷ, ಸಂಭಾಷಣೆಗಳನ್ನು ತನ್ನದಾಗಿಸಿಕೊಂಡು ವಸ್ತು ವಿಷಯವನ್ನು ರಂಜನೀಯವಾಗಿ ಹೇಳುತ್ತಾರೆ. ಆ ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ. ಅದೇ ರೀತಿ ಏಕವ್ಯಕ್ತಿ ಪ್ರದರ್ಶನವೂ ಶ್ರಮದಾಯಕವಾದದ್ದು’ ಎಂದರು. ಪಂಡಿತ್‌ ವೆಂಕಟೇಶ್‌ ಆಲ್ಕೋಡ್‌ ಅವರಿಗೆ ರಂಗಗೌರವ ಸಲ್ಲಿಸಲಾಯಿತು. ಯೋಗೇಶ್‌ ಮಾಸ್ತರ್‌ ನಿರ್ದೇಶನದ ‘ಕೊನೆ ಅಂಕ’ ನಾಟಕವನ್ನು ಕಗ್ಗೆರೆ ಮಂಜು ಅವರು ಪ್ರದರ್ಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.