ಕೃಷ್ಣರಾಜಪುರ: ವಿಜ್ಞಾನ ನಗರ ವ್ಯಾಪ್ತಿಯ ಅಬ್ಬಯ್ಯರೆಡ್ಡಿ, ನಾಗಪ್ಪರೆಡ್ಡಿ ಮತ್ತು ಕುಶಾಲ್ ಬಡಾವಣೆಯ ಮುಖ್ಯ ರಸ್ತೆ ಹಾಗೂ ಸಂಪರ್ಕ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎನ್.ಎಸ್.ನಂದೀಶರೆಡ್ಡಿ ಅವರು ಗುರುವಾರ ಚಾಲನೆ ನೀಡಿದರು.
ಬಳಿಕ ವಾರ್ಡ್ ಸಭೆಯಲ್ಲಿ ಮಾತನಾಡಿದ ಅವರು, ಬಿಬಿಎಂಪಿ 1.40 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ಕಾಮಗಾರಿಗಳು ಮೂರ‌್ನಾಲ್ಕು ತಿಂಗಳೊಳಗೆ ಮುಗಿಯಲಿವೆ.
ಕಾಮಗಾರಿಗಳ ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳು ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ ಎಂದರು.
ನಾಗರಿಕರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, `ಚುನಾವಣೆ ಎದುರಾಗಲಿದೆ ಎಂದು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮತದಾರರನ್ನು ಓಲೈಸುವ ಪ್ರಯತ್ನ ಮಾಡುವುದಿಲ್ಲ. ಆದರೆ ಈಗಾಗಲೇ 122 ಕೋಟಿ ರೂಪಾಯಿ ವೆಚ್ಚದಲ್ಲಿ ಕ್ಷೇತ್ರವ್ಯಾಪಿ ಒಳಚರಂಡಿ ವ್ಯವಸ್ಥೆ ಮುಗಿದಿದೆ.
ಇಲ್ಲಿಯೂ ಈ ಭಾಗದ್ಲ್ಲಲಿ ಒಳ ಚರಂಡಿ ವ್ಯವಸ್ಥೆ ಮುಗಿದಿದ್ದು, ಕೊನೆಯ ಹಂತವಾಗಿ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ~ ಎಂದು ಅವರು ವಿವರಿಸಿದರು.
ಪಾಲಿಕೆ ಸದಸ್ಯರಾದ ಗೀತಾ ವಿವೇಕಾನಂದಬಾಬು, ಕಾಮಗಾರಿ ಸಂದರ್ಭದಲ್ಲಿ ನಾಗರಿಕರ ಸಹಕಾರ ಅಗತ್ಯ. ನಂತರ ಉಚಿತವಾಗಿ ಸಸಿಗಳನ್ನು ರಸ್ತೆ ಬದಿಗಳಲ್ಲಿ ನೆಡಲು ನಾಗರಿಕರಿಗೆ ವಿತರಿಸಲಾಗುತ್ತದೆ. ಅವುಗಳ ಪೋಷಣೆ ಮತ್ತು ಆರೈಕೆಯಲ್ಲಿ ಆಸಕ್ತಿ ವಹಿಸಬೇಕು ಎಂದು ಕೋರಿದರು.
ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್ ವೇಣುಗೋಪಾಲ್, ಎಂಜಿನಿಯರ್ ಭೀಮೇಶ್, ರಾಮಕೃಷ್ಣರೆಡ್ಡಿ, ಬಿಜೆಪಿ ವಾರ್ಡ್ ಅಧ್ಯಕ್ಷ ಪುಟ್ಟು, ಮುಖಂಡ ಟಿ.ರಮೇಶ್, ಸುರೇಶ್‌ರೆಡ್ಡಿ, ಶ್ರೀನಿವಾಸ್, ರಾಮನ್‌ಕುಟ್ಟಿ ಮತ್ತಿತರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.