ಬೆಂಗಳೂರು: ದಾಸರಹಳ್ಳಿ ಕೆರೆಗೆ ನೀರು ಹರಿಯುವ ರಾಜಕಾಲುವೆಯನ್ನು ಪುನರ್ ನಿರ್ಮಾಣ ಮಾಡುವಂತೆ ಬಿಬಿಎಂಪಿ ಆಯುಕ್ತ ಎಂ.ಕೆ.ಶಂಕರಲಿಂಗೇಗೌಡ ಅವರು ಪಾಲಿಕೆ ಎಂಜಿನಿಯರ್‌ಗಳಿಗೆ ಗುರುವಾರ ಸೂಚನೆ ನೀಡಿದರು.
ಚೊಕ್ಕಸಂದ್ರ ವಾರ್ಡ್‌ನಲ್ಲಿರುವ ಈ ರಾಜಕಾಲುವೆಯನ್ನು ಕೆಲವು ತಿಂಗಳ ಹಿಂದೆ ಅಕ್ರಮ ಒತ್ತುವರಿ ಆರೋಪದ ಹಿನ್ನೆಲೆಯಲ್ಲಿ ಕೆಡವಿ ಹಾಕಲಾಗಿತ್ತು. ಈ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಆಯುಕ್ತರು, ಆರು ಕೋಟಿ ರೂಪಾಯಿ ವೆಚ್ಚದಲ್ಲಿ ರಾಜಕಾಲುವೆಯನ್ನು ಪುನರ್ ನಿರ್ಮಿಸುವುದಾಗಿ ಭರವಸೆ ನೀಡಿದರು.
ಚೊಕ್ಕಸಂದ್ರ ವಾರ್ಡ್‌ನಲ್ಲಿ ತ್ಯಾಜ್ಯ ವಿಲೇವಾರಿ ಆಗದೇ ಇರುವುದನ್ನು ಗಮನಿಸಿದ ಅವರು, ಘನತ್ಯಾಜ್ಯ ವಿಲೇವಾರಿ ಟೆಂಡರ್ ಪ್ರಕ್ರಿಯೆ ಕರೆಯಲಿದ್ದೇವೆ ಎಂದು ಹೇಳಿದರು. ಮೇಯರ್ ಪಿ.ಶಾರದಮ್ಮ, ಶಾಸಕ ಮುನಿರಾಜು ಮತ್ತು ಆಯುಕ್ತರು ಸೇರಿದಂತೆ ಅಧಿಕಾರಿಗಳು ಪರಿಶೀಲನೆಗಾಗಿ ಮುಂದಾಗುತ್ತಿದ್ದಂತೆ ನಿವಾಸಿಗಳು ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ದೂರುಗಳ ಮಹಾಪೂರವನ್ನೇ ಹರಿಸಿದರು. ಈ ಸಂದರ್ಭದಲ್ಲಿ ಆಯುಕ್ತರು, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕುಡಿಯುವ ನೀರು ಕೊಳವೆ ಅಳವಡಿಕೆ ಕಾಮಗಾರಿಯನ್ನು ಪುನರಾರಂಭಿಸುವಂತೆ ಸೂಚಿಸಿದರು. ಪೀಣ್ಯ ಕೈಗಾರಿಕಾ ಸಂಘದ ಪದಾಧಿಕಾರಿಗಳಿಂದ ಆಯುಕ್ತರು ಹಾಗೂ ಮೇಯರ್ ಮನವಿ ಸ್ವೀಕರಿಸಿದರು. ಸರ್ಕಾರಕ್ಕೆ ಅತಿ ಹೆಚ್ಚು ಆಸ್ತಿ ತೆರಿಗೆ ಪಾವತಿಸುತ್ತಿದ್ದೇವೆ. ಸರ್ಕಾರ ಮತ್ತು ಬಿಬಿಎಂಪಿ ಪೀಣ್ಯ ಕೈಗಾರಿಕಾ ಪ್ರದೇಶಗಳಲ್ಲಿನ ಮೂಲಸೌಕರ್ಯಗಳ ಸಮಸ್ಯೆಗಳನ್ನು ಒದಗಿಸುತ್ತಿಲ್ಲ ಎಂದು ಸಂಘದ ಅಧ್ಯಕ್ಷ ಬಾಲಸುಬ್ರಹ್ಮಣ್ಯಂ ಆರೋಪಿಸಿದರು. ಜಂಟಿ ಆಯುಕ್ತ ರಾಧಾಕೃಷ್ಣ, ಉಪ ಆಯುಕ್ತ ಜನಪ್ಪ, ಮುಖ್ಯ ಎಂಜಿನಿಯರ್ ವೆಂಕಟರಾಜು ಇತರರು ಉಪಸ್ಥಿತರಿದ್ದರು.
ಕಾರ್ಖಾನೆಗಳಿಗೆ ಪರವಾನಗಿ ಕಡ್ಡಾಯ: ಆಯುಕ್ತರು
ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲಾ ಕೈಗಾರಿಕೆಗಳು ಕಡ್ಡಾಯವಾಗಿ ಪರವಾನಗಿ ಪಡೆಯುವುದು ಕಡ್ಡಾಯ. ಪರವಾನಗಿ ಪಡೆಯದಿರುವ ಕೈಗಾರಿಕೆಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಪಾಲಿಕೆ ಆಯುಕ್ತ ಎಂ.ಕೆ. ಶಂಕರಲಿಂಗೇಗೌಡ ಎಚ್ಚರಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿರುವ ಸಣ್ಣ ಮತ್ತು ದೊಡ್ಡ ಕೈಗಾರಿಕೆಗಳು ಕೈಗಾರಿಕಾ ಪರವಾನಗಿಯನ್ನು ಪಡೆಯಬೇಕು. ನಗರದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಕೈಗಾರಿಕೆಗಳಿವೆ. ಬಹುತೇಕ ಕೈಗಾರಿಕೆಗಳು ಪರವಾನಗಿ ಇಲ್ಲದೇ ಕಾರ್ಯನಿರ್ವಹಿಸುತ್ತಿರುವುದು ಪಾಲಿಕೆ ಗಮನಕ್ಕೆ ಬಂದಿದ್ದು, ಸ್ವಯಂಪ್ರೇರಿತರಾಗಿ ಪರವಾನಗಿ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ವಿಪ್ರೊ ಸೇರಿದಂತೆ 50 ಸಾವಿರಕ್ಕೂ ಹೆಚ್ಚು ಕಂಪೆನಿಗಳು ಪರವಾನಗಿ ಪಡೆದುಕೊಂಡಿವೆ ಎಂದು ಅವರು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.