ADVERTISEMENT

ರಾಜ್ಯದ ವಿದ್ಯುತ್ ಕೊರತೆ : ಉಡುಪಿ, ಬಳ್ಳಾರಿಯಲ್ಲಿ ಘಟಕಗಳ ಆರಂಭ

​ಪ್ರಜಾವಾಣಿ ವಾರ್ತೆ
Published 9 ಜನವರಿ 2012, 19:30 IST
Last Updated 9 ಜನವರಿ 2012, 19:30 IST

ಬೆಂಗಳೂರು: `ರಾಜ್ಯದಲ್ಲಿನ ವಿದ್ಯುತ್ ಕೊರತೆ ನೀಗಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದ್ದು, ಈ ವರ್ಷಾಂತ್ಯಕ್ಕೆ ಉಡುಪಿಯಲ್ಲಿ 600 ಮೆಗಾವಾಟ್ ಹಾಗೂ ಬಳ್ಳಾರಿಯಲ್ಲಿ 500 ಮೆಗಾವಾಟ್ ಉತ್ಪಾದನಾ ಸಾಮಥ್ಯದ 2ನೇ ಘಟಕಗಳನ್ನು ಆರಂಭಿಸಲಾಗುವುದು~ ಎಂದು ಇಂಧನ, ಆಹಾರ ಮತ್ತು ನಾಗರೀಕ ಪೂರೈಕೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ನಗರದಲ್ಲಿ ಸೋಮವಾರ ವಕೀಲರ ಸಂಘ ಆಯೋಜಿಸಿದ್ದ ವಕೀಲರಿಗೆ ಆನ್‌ಲೈನ್ ಪಡಿತರ ಚೀಟಿ ನೋಂದಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, `ರಾಯಚೂರು ಹಾಗೂ ಬಳ್ಳಾರಿಗಳ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳ ಈಗಿನ ಉತ್ಪಾದನೆಯಿಂದ ರಾಜ್ಯದ ವಿದ್ಯುತ್ ಬೇಡಿೆಯನ್ನು ಪೂರೈಸಲು ಸಾಧ್ಯವಿಲ್ಲ. ರಾಯಚೂರಿನ ಒಂದು ಮತ್ತು ಎರಡನೇ ಘಟಕಗಳು 25 ವರ್ಷ ಹಳೆಯವಾಗಿದ್ದು, ಈಗ ದುರಸ್ತಿಯಲ್ಲಿವೆ. ಹೀಗಾಗಿ ಹೊಸ ಘಟಕಗಳ ಸ್ಥಾಪನೆ ಅಗತ್ಯವಾಗಿದೆ~ ಎಂದರು.

`ರಾಜ್ಯದಲ್ಲಿ ಕಳೆದ ವರ್ಷದ ಏಪ್ರಿಲ್‌ನಲ್ಲಿ 7 ಲಕ್ಷ ಟನ್ ಕಲ್ಲಿದ್ದಲು ಸಂಗ್ರಹವಿತ್ತು. ಆದರೆ ಈಗ ಕಲ್ಲಿದ್ದಲಿನ ಸಂಗ್ರಹ ಶೂನ್ಯವಾಗಿದೆ. ಅಂದೇ ಕಲ್ಲಿದ್ದಲು ತಂದು ಅಂದೇ ವಿದ್ಯುತ್ ಉತ್ಪಾದನೆ ಮಾಡುವ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ. ರಾಯಚೂರು ಸ್ಥಾವರವೊಂದಕ್ಕೇ ಪ್ರತಿನಿತ್ಯ 30 ಸಾವಿರ ಟನ್ ಕಲ್ಲಿದ್ದಲಿನ ಅಗತ್ಯವಿದೆ. ಆದರೆ ಸದ್ಯ 7.5 ಸಾವಿರ ಟನ್ ಕಲ್ಲಿದ್ದಲು ಮಾತ್ರ ಪೂರೈಕೆಯಾಗುತ್ತಿದೆ. ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಕಲ್ಲಿದ್ದಲು ಪೂರೈಕೆಗೆ ಮನವಿ ಸಲ್ಲಿಸಲಾಗಿದೆ. ಬೇಸಿಗೆಯ ವಿದ್ಯುತ್ ಕೊರತೆ ಸರಿದೂಗಿಸಲು ರಾಜ್ಯದ ಅಣೆಕಟ್ಟೆಗಳಲ್ಲಿ ನೀರು ಸಂಗ್ರಹಿಸಿಡಲಾಗಿದೆ~ ಎಂದು ತಿಳಿಸಿದರು.

`ಆನ್‌ಲೈನ್ ಪಡಿತರ ಚೀಟಿ ನೋಂದಣಿ ನಿರಂತರ ಪ್ರಕ್ರಿಯೆಯಾಗಿದ್ದು, ಇದಕ್ಕೆ ಕೊನೆಯ ದಿನಾಂಕ ಎಂಬುದಿಲ್ಲ. ಕಳೆದ 2006 ರಿಂದ ಪಡಿತರ ಚೀಟಿಗಳಿಗಾಗಿ ನಡೆದ ಕುಟುಂಬಗಳ ಸದಸ್ಯರ ಬಯೋ ಮೆಟ್ರಿಕ್ ದಾಖಲಾತಿಯಲ್ಲಿ ಲೋಪವಾಗಿದೆ. ಬಯೋ ಮೆಟ್ರಿಕ್ ದಾಖಲಾತಿಗೆ ಒಡಂಬಡಿಕೆ ಮಾಡಿಕೊಂಡಿದ್ದ ಖಾಸಗಿ ಸಂಸ್ಥೆಯ ಅವ್ಯವಸ್ಥೆಯಿಂದಾಗಿ 1 ಕೋಟಿ 70 ಲಕ್ಷ ಪಡಿತರ ಚೀಟಿಗಳು ವಿತರಣೆಯಾಗಿವೆ. ಆದರೆ ರಾಜ್ಯದಲ್ಲಿ 1 ಕೋಟಿ 10 ಲಕ್ಷ ಕುಟುಂಬಗಳಿವೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ಉಳಿದ ಸುಮಾರು 60 ಲಕ್ಷ ಅಕ್ರಮ ಪಡಿತರ ಚೀಟಿಗಳನ್ನು ಪತ್ತೆಹಚ್ಚಿ ರದ್ದು ಮಾಡಬೇಕಿದೆ. ಅದಕ್ಕಾಗಿಯೇ ಈ ಆನ್‌ಲೈನ್ ನೋಂದಣಿ ವ್ಯವಸ್ಥೆ ಜಾರಿಗೆ ತರಲಾಗಿದೆ~ ಎಂದರು.

`ತಮ್ಮ ಮನೆಗಳ ವಿದ್ಯುತ್ ಬಿಲ್‌ನ ಆರ್‌ಆರ್ ಸಂಖ್ಯೆಯನ್ನು ನಮೂದಿಸುವ ಮೂಲಕ ಜನರು ಈಗಾಗಲೇ ಇರುವ ತಮ್ಮ ಪಡಿತರ ಚೀಟಿಗಳನ್ನು ನವೀಕರಿಸಲು ತಿಳಿಸಲಾಗಿದೆ. ಹೊಸದಾಗಿ ಅರ್ಜಿ ಸಲ್ಲಿಸುವವರು ಕೂಡಾ ಎಲ್ಲಾ ವಿವರಗಳೊಂದಿಗೆ ಆರ್‌ಆರ್ ಸಂಖ್ಯೆ ನಮೂದಿಸಬೇಕು. ಗ್ರಾಮೀಣ ಭಾಗದ ಜನರು ಕಂದಾಯ ರಸೀದಿಯ ಸಂಖ್ಯೆಯನ್ನು ನಮೂದಿಸಬೇಕು. ಆನ್‌ಲೈನ್ ನೋಂದಣಿ ಆರಂಭಗೊಂಡ ಕಳೆದ ಎರಡು ತಿಂಗಳಿಂದ 15 ಲಕ್ಷ 56 ಸಾವಿರ ಹೊಸ ಅರ್ಜಿಗಳು ನೋಂದಣಿಯಾಗಿವೆ. ಇನ್ನು ಎರಡು ತಿಂಗಳೊಳಗೆ ಅರ್ಜಿಗಳ ಪರಿಶೀಲನೆ ನಡೆಸಿ ಪಡಿತರ ಚೀಟಿಗಳನ್ನು ವಿತರಿಸಲಾಗುವುದು~ ಎಂದು ಅವರು ಹೇಳಿದರು.

`ವಿದ್ಯುತ್ ಇಲಾಖೆಯಲ್ಲಿ ಈಗ 36 ಸಾವಿರ ಸಿಬ್ಬಂದಿ ಇದ್ದು, ಇನ್ನೂ ಸುಮಾರು 20 ಸಾವಿರ ಸಿಬ್ಬಂದಿಯ ಕೊರತೆ ಇದೆ. ಸದ್ಯ ಸುಮಾರು 2 ಸಾವಿರ ಲೈನ್‌ಮನ್‌ಗಳ ನೇಮಕಕ್ಕೆ ಅರ್ಜಿ ಕರೆಯಲಾಗಿದೆ. ಇಲಾಖೆಯ ಸಹಾಯಕ ಎಂಜಿನಿಯರ್ ಹಾಗೂ ಜಂಟಿ ಎಂಜಿನಿಯರ್‌ಗಳ ನೇಮಕದ ಬಗ್ಗೆಯೂ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ 6 ತಿಂಗಳಲ್ಲಿ ಇನ್ನೂ 2 ಸಾವಿರ ಲೈನ್‌ಮನ್‌ಗಳ ನೇಮಕಕ್ಕೆ ಚಿಂತನೆ ನಡೆಸಲಾಗಿದೆ~ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಾರ್ಯದರ್ಶಿ ಬಿ.ಎ. ಹರೀಶ್ ಗೌಡ, ಆಯುಕ್ತ ಕೆ.ಎಚ್. ಗೋವಿಂದರಾಜು, ವಕೀಲರ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಎ.ಪಿ. ರಂಗನಾಥ, ಉಪಾಧ್ಯಕ್ಷ ಆರ್. ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.