ADVERTISEMENT

ರಾಜ್ಯೋತ್ಸವ ಪ್ರಶಸ್ತಿ: 50ಕ್ಕೇ ಸೀಮಿತ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 19:10 IST
Last Updated 18 ಅಕ್ಟೋಬರ್ 2012, 19:10 IST

ಬೆಂಗಳೂರು:  `ಕಳೆದ ವರ್ಷದಂತೆ ಈ ಸಲವೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಆಯ್ಕೆ ಮೇಲೆ ಮಿತಿ ವಿಧಿಸಲು ಉದ್ದೇಶಿಸಲಾಗಿದ್ದು, ಈ ಸಂಬಂಧ ಅ. 25ರಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ನೇತೃತ್ವದಲ್ಲಿ ನಡೆಯುವ ಆಯ್ಕೆ ಸಮಿತಿ ಸಭೆ ನಿರ್ಧಾರ ಕೈಗೊಳ್ಳಲಿದೆ~ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ ಕಾರ್ಯದರ್ಶಿ ಬಸವರಾಜು ಪ್ರಕಟಿಸಿದರು.

ಹಂಸಜ್ಯೋತಿ ಸಂಸ್ಥೆಯ 37ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಬುಧವಾರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. `ಯಾವುದೇ ಒತ್ತಡಗಳಿಗೆ ಮಣಿಯದೆ ಅರ್ಹರಾದವರಿಗೆ ಮಾತ್ರ ಪ್ರಶಸ್ತಿ ನೀಡಬೇಕೆಂಬುದು ಸರ್ಕಾರದ ಆಶಯವಾಗಿದೆ. ಹೀಗಾಗಿ ಈ ಸಲವೂ ಪ್ರಶಸ್ತಿ ಪುರಸ್ಕೃತರ ಸಂಖ್ಯೆಯನ್ನು 50ಕ್ಕೇ ಮಿತಿಗೊಳಿಸಲು ಚಿಂತಿಸಲಾಗಿದೆ~ ಎಂದು ಅವರು ತಿಳಿಸಿದರು.

ಹಿರಿಯ ಕಲಾವಿದ ಏಣಗಿ ಬಾಳಪ್ಪ, ಸ್ವಾತಂತ್ರ್ಯ ಹೋರಾಟಗಾರ ಡಾ. ಹೋ. ಶ್ರೀನಿವಾಸಯ್ಯ, ನಿವೃತ್ತ ನ್ಯಾಯಾಧೀಶ ಡಾ.ಎಸ್.ಆರ್. ನಾಯಕ್, ವಿದುಷಿ ಶ್ಯಾಮಲಾ ಭಾವೆ, ಹಿರಿಯ ಕಲಾವಿದೆ ಭಾರತಿ, ಹಿರಿಯ ಪತ್ರಕರ್ತ ಇ.ವಿ. ಸತ್ಯನಾರಾಯಣ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 40 ಜನ ಗಣ್ಯರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಮೈಸೂರಿನ ಒಕಿನೊವಾ ಕರಾಟೆ ತರಬೇತಿ ಕೇಂದ್ರದ ಕರಾಟೆಪಟುಗಳು ಸಾಹಸ ಪ್ರದರ್ಶನ ನೀಡಿದರು.

ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಕಲಾವಿದರಾದ ಆರ್.ಎನ್. ಸುದರ್ಶನ್,  ಹರಿಣಿ ಅತಿಥಿಗಳಾಗಿದ್ದರು. ಹಂಸಜ್ಯೋತಿ ಸಂಸ್ಥೆಯ ಪಿ.ಸಂಪತ್ ಕುಮಾರ್, ಮು.ಮುರಳೀಧರ್, ಜಿ.ಆರ್. ಮಂಜೇಶ್ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.