ಬೆಂಗಳೂರು: ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಜಯಿಸಿದ ಹಿನ್ನೆಲೆಯಲ್ಲಿ ಜನರು ನಗರದೆಲ್ಲೆಡೆ ಶನಿವಾರ ರಾತ್ರಿ ವಿಜಯೋತ್ಸವ ಆಚರಿಸಿದರು.ಪ್ರಮುಖ ರಸ್ತೆಗಳು ಹಾಗೂ ಜಂಕ್ಷನ್‌ಗಳಲ್ಲಿ ಜಮಾಯಿಸಿದ ಜನರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮತ್ತೊಂದೆಡೆ ಯುವಕ ಯುವತಿಯರ ದಂಡು ಕಾರು ಮತ್ತು ಬೈಕ್‌ಗಳಲ್ಲಿ ತ್ರಿವರ್ಣ ಧ್ವಜ ಹಿಡಿದು ಸಾಗುತ್ತಾ ಸಂತಸ ವ್ಯಕ್ತಪಡಿಸುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂತು. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಮೈಸೂರು ರಸ್ತೆ, ಕೆ.ಜಿ.ರಸ್ತೆ ಸೇರಿದಂತೆ ನಗರದೆಲ್ಲೆಡೆ ಸಂಭ್ರಮ ಮನೆ ಮಾಡಿತ್ತು.
ಹಲವು ಬಗೆಯ ಸಂಭ್ರಮ: ಭಾರತ ತಂಡದ ಈ ಜಯವನ್ನು ಅಭಿಮಾನಿಗಳು ತಮಗೆ ಸಂದ ಗೆಲುವು ಎಂಬಂತೆ ಆಚರಿಸಿದರು. ಸಂಭ್ರಮದ ವಿವಿಧ ಮುಖಗಳು ರಸ್ತೆಯಲ್ಲಿ ಅನಾವರಣಗೊಂಡವು. ಹಲವೆಡೆ ಕ್ರೀಡಾಭಿಮಾನಿಗಳು ಸಾರ್ವಜನಿಕರಿಗೆ ಸಿಹಿ ಹಂಚಿ ಭಾರತ ತಂಡದ ಸಾಧನೆಗೆ ಮೆಚ್ಚುಗೆ ಸೂಚಿಸಿದರು. ಅಲ್ಲದೇ ಕಾರುಗಳ ಮೇಲೆ ಕುಳಿತು ತಂಡದ ಆಟಗಾರರ ಪರ ಜಯಘೋಷ ಹಾಕುತ್ತಿದ್ದ ದೃಶ್ಯ ಕಂಡುಬಂತು.
ನಗರದ ವಿವಿಧ ಬಡಾವಣೆಗಳಲ್ಲಿ ಮನೆಬಿಟ್ಟು ಹೊರಬಂದ ನಾಗರಿಕರು ಕುಟುಂಬ ಸದಸ್ಯರು, ನೆರೆಹೊರೆಯವರ ಜತೆ ಸೇರಿ ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿದರು. ವಯಸ್ಸಿನ ಭೇದ ವಿಲ್ಲದೆ ವಯೋವೃದ್ಧರು, ಮಕ್ಕಳು ಈ ಸಂತೋಷದಲ್ಲಿ ಪಾಲ್ಗೊಂಡರು. ಬ್ರಿಗೇಡ್ ರಸ್ತೆ, ಎಂ.ಜಿ.ರಸ್ತೆ, ಕಾವೇರಿ ಎಂಪೋರಿಯಂ ಜಂಕ್ಷನ್, ಅನಿಲ್ ಕುಂಬ್ಳೆ ವೃತ್ತದಲ್ಲಿ ಸಾಕಷ್ಟು ಕ್ರೀಡಾಭಿಮಾನಿಗಳು ನೆರೆದಿದ್ದ ಪರಿಣಾಮ ಸುತ್ತಮುತ್ತಲ ಪ್ರದೇಶದಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಯಿತು.
ಪೊಲೀಸರು ಮನೆಗೆ ತೆರಳುವಂತೆ ಸೂಚಿಸಿದರೂ ಅವರ ಮಾತು ಕೇಳದ ಕ್ರೀಡಾಭಿಮಾನಿಗಳು ರಾತ್ರಿ ಒಂದು ಗಂಟೆಯಾದರೂ ಪಟಾಕಿ ಸಿಡಿಸುತ್ತಾ ವಿಜಯೋತ್ಸವ ಆಚರಿಸಿದರು. ಈ ಹಂತದಲ್ಲಿ ಪೊಲೀಸರು ಕ್ರೀಡಾಭಿಮಾನಿಗಳ ಮೇಲೆ ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ನಿಯಂತ್ರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.