ADVERTISEMENT

ರಾತ್ರೋ ರಾತ್ರಿ ಬಂದಳು ಭುವನೇಶ್ವರಿ..!

ನ್ಯಾಷನಲ್‌ ಕಾಲೇಜು ಮೈದಾನಕ್ಕೆ ಹೊಂದಿಕೊಂಡ ಜಾಗದಲ್ಲಿ ಮೂರ್ತಿ ಪ್ರತಿಷ್ಠಾಪನೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2019, 18:59 IST
Last Updated 18 ಜನವರಿ 2019, 18:59 IST
ಪಾಲಿಕೆಯ ಬುಲೇವಾರ್ಡ್‌ ಜಾಗದಲ್ಲಿ ಗುರುವಾರ ತಡರಾತ್ರಿ ಪ್ರತಿಷ್ಠಾಪಿಸಲಾಗಿರುವ ಭುವನೇಶ್ವರಿ ದೇವಿ ಪ್ರತಿಮೆ –ಪ್ರಜಾವಾಣಿ ಚಿತ್ರ
ಪಾಲಿಕೆಯ ಬುಲೇವಾರ್ಡ್‌ ಜಾಗದಲ್ಲಿ ಗುರುವಾರ ತಡರಾತ್ರಿ ಪ್ರತಿಷ್ಠಾಪಿಸಲಾಗಿರುವ ಭುವನೇಶ್ವರಿ ದೇವಿ ಪ್ರತಿಮೆ –ಪ್ರಜಾವಾಣಿ ಚಿತ್ರ   

ಬೆಂಗಳೂರು:ಸುಂಕೇನಹಳ್ಳಿ ವಾರ್ಡ್‌ನಲ್ಲಿ ನ್ಯಾಷನಲ್‌ ಕಾಲೇಜು ಆಟದ ಮೈದಾನಕ್ಕೆ ಹೊಂದಿಕೊಂಡಿರುವ ಪಾಲಿಕೆಯ ಬುಲೇವಾರ್ಡ್‌ ಜಾಗದಲ್ಲಿ ಗುರುವಾರ ರಾತ್ರೋ ರಾತ್ರಿ ಭುವನೇಶ್ವರಿ ದೇವಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಸ್ಥಳದಲ್ಲಿ ಹೋಮ ಹಾಗೂ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಗಿದೆ.

‘ಕನ್ನಡ ಸಾಹಿತ್ಯ ಪರಿಷತ್‌ನ ಬೆಂಗಳೂರು ನಗರ ಜಿಲ್ಲಾ ಘಟಕ ಈ ಜಾಗವನ್ನು ಬಿಟ್ಟುಕೊಡುವಂತೆ ಹಟ ಹಿಡಿದಿದೆ. ಇಷ್ಟು ದಿನಗಳ ಕಾಲ ಇಲ್ಲದ ದೇವಿಯ ಮೂರ್ತಿ ಶುಕ್ರವಾರ ಇಲ್ಲಿ ಹೇಗೆ ಬಂತು? ಈ ಜಾಗವನ್ನುಕಬಳಿಸಲು ಕಸಾಪ ನಡೆಸುತ್ತಿರುವ ಯತ್ನವಿದು’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

‘ಬಟಾಬಯಲಿನ ಈ ಜಾಗದಲ್ಲಿ ಅದು ಹೇಗೆ ಮೂರ್ತಿ ಪ್ರತಿಷ್ಠಾಪನೆಯಾಯಿತು? ಕಸಾಪ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಮಾಯಣ್ಣ ಸೇರಿದಂತೆ ಹಲವರು ಶುಕ್ರವಾರ ಬೆಳಿಗ್ಗೆ ಇಲ್ಲಿ ಪೂಜೆ ನಡೆಸುತ್ತಿದ್ದುದನ್ನು ನೋಡಿ ಆಶ್ಚರ್ಯವಾಗಿದೆ. ಇದು ಅವರದ್ದೇ ಕುತಂತ್ರ’ ಎಂದು ಸ್ಥಳೀಯರೊಬ್ಬರು ದೂರಿದರು.

ADVERTISEMENT

‘ಸುಂಕೇನಹಳ್ಳಿ ವಾರ್ಡ್‌ನ ಪಾಲಿಕೆ ಸದಸ್ಯ ಬಿ.ಎನ್‌.ರಮೇಶ್‌ ಅವರನ್ನೂ ನಾನು ಈ ಕುರಿತು ಪ್ರಶ್ನಿಸಿದೆ. ಅದಕ್ಕೆ ಪಾಲಿಕೆ ಆಯುಕ್ತರೊಂದಿಗೆ ಮಾತನಾಡಿರುವೆ. ಆಯುಕ್ತರೇ ಖುದ್ದು ಸ್ಥಳಪರಿಶೀಲನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ಉತ್ತರ ಅವರಿಂದ ಬಂತು’ ಎಂದು ವಿವರಿಸಿದರು.

ಪಾಲಿಕೆ ಸದಸ್ಯ ರಮೇಶ್‌, ‘ಗುರುವಾರ ತಡರಾತ್ರಿ ಇಲ್ಲಿ ಯಾರೋ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ’ ಎಂದು ವಾರ್ಡಿನ ಎಂಜಿನಿಯರ್‌ ನನಗೆ ಶುಕ್ರವಾರ ಬೆಳಿಗ್ಗೆ ಕರೆ ಮಾಡಿ ತಿಳಿಸಿದರು. ಈ ಕುರಿತು ಸ್ಥಳೀಯ ಪೊಲೀಸ್‌ ಠಾಣೆಗೆ ದೂರು ಸಹ ದಾಖಲಿಸಿರುವುದಾಗಿ ಹೇಳಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಬೆಳಿಗ್ಗೆ ಪೂಜಾ ಕಾರ್ಯಕ್ರಮಕ್ಕೆ ಬರುವಂತೆ ಮಾಯಣ್ಣ ಅವರು ನನಗೆ ವಾಟ್ಸ್‌ ಆ್ಯಪ್‌ ‌ಆಡಿಯೊ ಮೂಲಕ ಆಹ್ವಾನ ನೀಡಿದ್ದರು. ಈ ಬಗ್ಗೆ ಪ್ರಶ್ನಿಸಲು ಮಾಯಣ್ಣ ಅವರಿಗೆ ಕರೆ ಮಾಡಿದರೆ ಅವರು ಫೋನ್ ತೆಗೆಯಲಿಲ್ಲ. ಕಾರಣಾಂತರಗಳಿಂದ ನಾನೂ ಅಲ್ಲಿಗೆ ಹೋಗಲಿಲ್ಲ’ ಎಂದು ತಿಳಿಸಿದರು.

ಮಾಯಣ್ಣ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ಇದು, ನಿನ್ನೆ ಮೊನ್ನೆಯದಲ್ಲ. ಸುಮಾರು ಎರಡು ತಿಂಗಳಿನಿಂದ ಈ ಮೂರ್ತಿ ಅಲ್ಲಿಯೇ ಇದೆ. ಜನರೇ ಇದನ್ನು ಪ್ರತಿಷ್ಠಾಪಿಸಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.