ADVERTISEMENT

ರಾಷ್ಟ್ರಪ್ರೇಮ ಮೂಡಿಸಿದ ಯೋಧರ ಸಂಸ್ಮರಣೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2012, 18:30 IST
Last Updated 5 ಫೆಬ್ರುವರಿ 2012, 18:30 IST

ಬೆಂಗಳೂರು: `ಸಮಾಜದಲ್ಲಿ ಸ್ವಾರ್ಥ ಹೆಚ್ಚಾಗಿರುವ ಸಂದರ್ಭದಲ್ಲಿ ದೇಶದ ರಕ್ಷಣೆಗಾಗಿ ಹೋರಾಡಿ ಮಡಿದ ಯೋಧರನ್ನು ನೆನೆಸಿಕೊಳ್ಳುವುದು ಅಗತ್ಯ~ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಯೋಧರ ಸ್ಮರಣಾರ್ಥ ಒನ್ ಇಂಡಿಯಾ ಸಂಸ್ಥೆಯು ನಗರದ ಸೈನಿಕ ಸ್ಮಾರಕ ಉದ್ಯಾನವನದಲ್ಲಿ ಭಾನುವಾರ ಆಯೋಜಿಸಿದ್ದ `ಜೈ ಜವಾನ್, ಮೇರಾ ಭಾರತ್ ಮಹಾನ್~ ಗೀತ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

`ದೇಶಕ್ಕಾಗಿ ಪ್ರಾಣ ನೀಡುವ ಜನರೇ ಇಂದು ಕಡಿಮೆಯಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ವೀರ ಯೋಧರನ್ನು ನೆನೆಸಿಕೊಳ್ಳುತ್ತಿರುವ ಸಂಸ್ಥೆಯ ಕಾರ್ಯ ಉತ್ತಮವಾದುದು~ ಎಂದರು.

ಸೈನ್ಯದಲ್ಲಿದ್ದು ಹುತಾತ್ಮರಾದ ಯೋಧರ ಕುಟುಂಬಗಳಿಗೆ ಸಹಾಯ ಧನದ ಚೆಕ್‌ನ್ನು ಅವರು ವಿತರಿಸಿದರು.
ಹುತಾತ್ಮ ಯೋಧರನ್ನು ಗೀತೆಗಳೊಂದಿಗೆ ನೆನೆಯಲಾಯಿತು. ನಗರದ ಸೌಂಡ್ ಆಫ್ ಮ್ಯೂಸಿಕ್‌ನ ಗುರುರಾಜ್ ಮತ್ತು ತಂಡದ ಸದಸ್ಯರು ದೇಶಭಕ್ತಿ ಗೀತೆಗಳನ್ನು ಪ್ರಸ್ತುತ ಪಡಿಸಿದರು. ಶಾರದಾ ಸ್ಕೂಲ್ ಫಾರ್ ಆರ್ಟ್ಸ್‌ನ ವಿದ್ಯಾರ್ಥಿಗಳು `ವಂದೇ ಮಾತರಂ~, `ವಿಶ್ವವಿನೂತನ ವಿದ್ಯಾಚೇತನ~ ಹಾಗೂ `ಹಚ್ಚೇವು ಕನ್ನಡದ ದೀಪ~ ಗೀತೆಗಳಿಗೆ ಹೆಜ್ಜೆಯಾದರು.

ಗಾಯಕಿ ಆಕಾಂಕ್ಷಾ ಬಾದಾಮಿ `ಯೇ ಮೇರೆ ವತನ್ ಕೆ ಲೋಗೋಂ~ ಹಾಡಿನ ಕನ್ನಡ ಅನುವಾದ `ಓ ನನ್ನ ದೇಶ ಬಾಂಧವರೆ~ ಗೀತೆಯನ್ನು ಹಾಡಿ ನೆರದವರ ಹೃದಯಗಳಲ್ಲಿ ದೇಶಭಕ್ತಿ ಉದ್ದೀಪನಗೊಳ್ಳಲು ಕಾರಣರಾದರು.

ದೇಶ ಸೇವೆಗಾಗಿ ಪ್ರಾಣ ತೆತ್ತು ಹುತಾತ್ಮರಾದ ಬೆಂಗಳೂರಿನ ನಿವಾಸಿಗಳಾದ ದಶರಥ್ ಗಾಯಕ್‌ವಾಡ್, ಡಿ.ಡೇವಿಡ್, ನಟರಾಜ್, ಎ.ಜಿ.ರಾಜಾ, ಅಶೋಕ್ ಸಂಗಾಲಿ, ಯು.ಎಸ್.ಘೋಷ್, ರಾಜೇಶ್ ರತ್ನಂ, ಮೇಜರ್ ಜನರಲ್ ಶಫೀಕ್ ಮೊಹಮ್ಮದ್ ಖಾನ್, ಲೆಫ್ಟಿನೆಂಟ್ ಕರ್ನಲ್ ಅಜಿತ್ ಬಾಬತ್‌ಕರ್ ಮತ್ತು ಅಬೆಲ್ ಅವರ ಕುಟುಂಬಗಳಿಗೆ ಒನ್ ಇಂಡಿಯಾ ಸಂಸ್ಥೆಯ ವತಿಯಿಂದ ತಲಾ ಹತ್ತು ಸಾವಿರ ರೂಪಾಯಿಗಳ ಚೆಕ್‌ಗಳನ್ನು ವಿತರಿಸಲಾಯಿತು.ಸಂಸ್ಥೆಯ ಸಂಚಾಲಕ ಮಣಿಶಂಕರ್, ಮೋಹನ್ ಅರವಿಂದ್, ಶ್ರೀನಿವಾಸ್ ನಾಯಕ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.