ADVERTISEMENT

ರೈಲಿನಲ್ಲಿ ಚಿನ್ನಾಭರಣ ಕಳವು

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2012, 18:30 IST
Last Updated 11 ಏಪ್ರಿಲ್ 2012, 18:30 IST

ಬೆಂಗಳೂರು: ದೆಹಲಿಯಿಂದ ಯಶವಂತಪುರಕ್ಕೆ ಬರುತ್ತಿದ್ದ `ನಿಜಾಮುದ್ದೀನ್ ಎಕ್ಸ್‌ಪ್ರೆಸ್~ ರೈಲಿನಲ್ಲಿದ್ದ ಪ್ರಯಾಣಿಕರ ಚಿನ್ನಾಭರಣ ಮತ್ತು ಹಣವನ್ನು ದುಷ್ಕರ್ಮಿಗಳು ಕಳವು ಮಾಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ರೈಲಿನ ಎ1, ಎ2 ಮತ್ತು ಎ3 ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರಿನ ಸೀನು ಜಾರ್ಜ್, ರಾಜಾಜಿನಗರದ ಸುನಿತಾ ಗುಪ್ತಾ ಮತ್ತು ಬಸವನಗುಡಿಯ ರಾಧಾಬಾಯಿ ಎಂಬುವರ ಹಣ ಹಾಗೂ ಆಭರಣಗಳನ್ನು ದುಷ್ಕರ್ಮಿಗಳು ಕಳವು ಮಾಡಿದ್ದಾರೆ. ಆ ಮೂರು ಮಂದಿ ರಾತ್ರಿ ನಿದ್ರೆ ಮಾಡುತ್ತಿದ್ದ ಸಂದರ್ಭದಲ್ಲಿ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ ಎಂದು ನಗರ ರೈಲು ನಿಲ್ದಾಣ ಪೊಲೀಸರು ತಿಳಿಸಿದ್ದಾರೆ.

ಸೀನು ಜಾರ್ಜ್, ಸುನಿತಾ ಮತ್ತು ರಾಧಾಬಾಯಿ ಅವರು ಆಂಧ್ರಪ್ರದೇಶದ ಧರ್ಮಾವರಂ ಬಳಿ ಬುಧವಾರ ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಎಚ್ಚರಗೊಂಡಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ. ದುಷ್ಕರ್ಮಿಗಳು ಒಟ್ಟು 16 ಸಾವಿರ ನಗದು, 13 ಗ್ರಾಂ ಚಿನ್ನಾಭರಣ ಹಾಗೂ ಮೂರು ಮೊಬೈಲ್‌ಗಳನ್ನು ಕಳವು ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ನಗರ ರೈಲು ನಿಲ್ದಾಣ ಠಾಣೆ ಪೊಲೀಸರು, ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಧರ್ಮಾವರಂ ಪೊಲೀಸರಿಗೆ ವರ್ಗಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.