ADVERTISEMENT

ರೋಗಿಗಳಿಗೂ ತಟ್ಟಿದ ಬಿಸಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2011, 19:30 IST
Last Updated 22 ಜನವರಿ 2011, 19:30 IST

ಬೆಂಗಳೂರು: ಬಿಜೆಪಿ ಶನಿವಾರ ರಾಜ್ಯದಾದ್ಯಂತ ಕರೆಕೊಟ್ಟಿದ್ದ ಬಂದ್‌ನ ಪರಿಣಾಮ ನಗರದ ಮೇಲೂ ಬೀರಿತು. ಬಹುಪಾಲು ಆಸ್ಪತ್ರೆಗಳಿಗೆ ಬರುವ, ಹೋಗುವ ನೂರಾರು ರೋಗಿಗಳು ಹಾಗೂ ಅವರೊಂದಿಗೆ ಶೂಶ್ರೂಷೆಗಾಗಿ ಬಂದವರಿಗೆ ಸಾಕಷ್ಟು ಬಿಸಿ ಮುಟ್ಟಿಸಿತು. ನಗರದ ವಿಕ್ಟೋರಿಯಾ, ಮಾರ್ಥಾಸ್, ಬೌರಿಂಗ್ ಮತ್ತಿತರ ಆಸ್ಪತ್ರೆಗಳಿಗೆ ಬಂದಿದ್ದ ರೋಗಿಗಳನ್ನು 108 ತುರ್ತು ಅಂಬುಲೆನ್ಸ್ ಮೂಲಕ ತರಲಾಗುತ್ತಿತ್ತಾದರೂ, ಈ ಬಗ್ಗೆ ತಿಳಿವಳಿಕೆಯಿಲ್ಲದ ಎಷ್ಟೋ ಜನರು ದುಪ್ಪಟ್ಟು ಬಾಡಿಗೆ ತೆತ್ತು ಆಟೊಗಳ ಮೂಲಕ ಬಂದಿದ್ದರು.

ಬಿಎಂಟಿಸಿ ಬೆಳಿಗ್ಗೆಯಿಂದಲೇ ಸಾರಿಗೆ ಸೇವೆಯನ್ನು ವಾಪಸ್ ಪಡೆದಿದ್ದರಿಂದ ಸಾಮಾನ್ಯ ತಪಾಸಣೆಗೆ ಬರಬೇಕಾಗಿದ್ದ ರೋಗಿಗಳ ಸಂಖ್ಯೆಯಲ್ಲಿ ಇಳಿಮುಖವಾಗಿತ್ತು. ಆದರೆ ತುರ್ತು ಚಿಕಿತ್ಸೆ ಅಗತ್ಯವಿದ್ದ ರೋಗಿಗಳನ್ನು ಅವರ ಸಂಬಂಧಿಕರು ಈ ಆಸ್ಪತ್ರೆಗಳಿಗೆ ದಾಖಲಿಸಿದ್ದರಾದರೂ ಬಹುತೇಕ ಹೋಟೆಲುಗಳು ಮುಚ್ಚಿದ್ದರಿಂದ ಅವರಿಗೆ ಆಹಾರ ಸಮಸ್ಯೆ ಎದುರಾಗಿತ್ತು. ದೂರದ ಊರಿನಿಂದ ಬಂದವರು ತಾವು ತಂದಿದ್ದ ತಂಗಳನ್ನವನ್ನೇ ಊಟ ಮಾಡಿದರು.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ತನ್ನ ಮಗನ ಆರೋಗ್ಯ ತಪಾಸಣೆ ಮುಗಿಸಿಕೊಂಡು ವಾಪಸ್ ತಮಿಳುನಾಡು ಗಡಿಯ ಗ್ರಾಮವೊಂದಕ್ಕೆ ಹೊರಟಿದ್ದ ಮಹಿಳೆಯೊಬ್ಬರಿಗೆ ಬಂದ್ ಕರೆಯ ಕುರಿತು ಮಾಹಿತಿಯೇ ಇರಲಿಲ್ಲ. ಬಸ್ ಬರುವುದನ್ನೇ ಕಾಯುತ್ತಿದ್ದ ಅವರಿಗೆ ಬಸ್ ಸಂಜೆಯವರೆಗೆ ಇಲ್ಲ ಎಂಬ ಸಂಗತಿ ಗೊತ್ತಾದಾಗ ಒಂದು ಕ್ಷಣ ಗೊಂದಲಕ್ಕೊಳಗಾದರು.

ಜಯನಗರದಿಂದ ತಮ್ಮ ಕುಟುಂಬ ಸದಸ್ಯರಿಗೆ ಚಿಕಿತ್ಸೆ ಕೊಡಿಸಲು ಕರೆತಂದಿದ್ದ ವಾಸೀಂ ದುಪ್ಪಟ್ಟು ಹಣಕೊಟ್ಟು ಆಟೊಗೆ ಬಂದಿದ್ದರು. ‘ಮೀಟರ್ ಹಾಕು ಎಂದರೂ ನನ್ನ ಮಾತನ್ನು ಆಟೊದವರು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಅನಿವಾರ್ಯವಾದುದರಿಂದ ಅವರು ಕೇಳಿದಷ್ಟು ಕೊಟ್ಟು ಬಂದೆವು’ ಎಂದು ಅವರು ‘ಪ್ರಜಾವಾಣಿ’ಯೊಂದಿಗೆ ತಮ್ಮ ಅಸಮಾಧಾನ ಹಂಚಿಕೊಂಡರು.

‘ಬಂದ್‌ಗೆ ಏಕಾಏಕಿ ಕರೆ ನೀಡಿದ್ದರಿಂದ ಬೆಂಗಳೂರು ಸುತ್ತಮುತ್ತಲ ಹಳ್ಳಿಗಳಿಂದ ರೋಗಿಗಳು ಬಂದಿದ್ದಾರೆ. ನಗರದವರಿಗೆ ರಾತ್ರಿ ಈ ಬಗ್ಗೆ ಗೊತ್ತಿದ್ದುದರಿಂದ ಅವರ ಸಂಖ್ಯೆ ಕಡಿಮೆ ಇದೆ’ ಎಂದು ಅದೇ ಆಸ್ಪತ್ರೆಯ ವೈದ್ಯೆ ತಿಳಿಸಿದರು. ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ತಮ್ಮ ಊರುಗಳಿಗೆ ಬಸ್ ಹಿಡಿಯಬೇಕಿದ್ದ ಎಷ್ಟೋ ರೋಗಿಗಳು ಸಾರಿಗೆ ಸೌಕರ್ಯ ಇಲ್ಲದಿದ್ದುದರಿಂದ ಆಸ್ಪತ್ರೆಯ ಹೊರಭಾಗದ ಬೆಂಚಿನ ಮೇಲೆಯೇ ಮಲಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.