ADVERTISEMENT

ರೋಗ ನಿರೋಧಕ ತಳಿ ವೃದ್ಧಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2011, 19:25 IST
Last Updated 16 ಸೆಪ್ಟೆಂಬರ್ 2011, 19:25 IST

ಬೆಂಗಳೂರು: ತನ್ನದೇ ಆದ ವಿಶಿಷ್ಟ ಕೆಂಪು ಬಣ್ಣದ ಮೂಲಕ ರಫ್ತಿಗೆ ಹೆಸರುವಾಸಿಯಾಗಿರುವ ಬ್ಯಾಡಗಿ ಮೆಣಸಿನಕಾಯಿಯ ಇಳುವರಿ ರೋಗದಿಂದ ಇತ್ತೀಚೆಗೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ರೋಗ ನಿರೋಧಕ ಶಕ್ತಿಯುಳ್ಳ ತಳಿಯನ್ನು ಅಭಿವೃದ್ಧಿಪಡಿಸಲು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ನಿರ್ಧರಿಸಿದೆ. ಇದರ ಸಂಶೋಧನೆ ಪ್ರಾರಂಭಿಕ ಹಂತದಲ್ಲಿದ್ದು, ಇನ್ನೆರಡು ವರ್ಷಗಳಲ್ಲಿ ಈ ತಳಿಯನ್ನು ಸಂಸ್ಥೆಯು ಪರಿಚಯಿಸಲಿದೆ.

ನಗರದ ಹೊರವಲಯದ ಹೆಸರಘಟ್ಟದ ಸಂಸ್ಥೆಯಲ್ಲಿ ಸುಧಾರಿತ ತರಕಾರಿ ತಳಿಗಳು ಹಾಗೂ ಆಧುನಿಕ ಬೇಸಾಯ ಪದ್ಧತಿಯನ್ನು ರೈತರಿಗೆ ಪರಿಚಯಿಸುವ ಉದ್ದೇಶದಿಂದ ಶುಕ್ರವಾರ ಹಮ್ಮಿಕೊಂಡಿದ್ದ `ಕ್ಷೇತ್ರೋತ್ಸವ~ದ ನಂತರ ಸಂಸ್ಥೆಯ ತರಕಾರಿ ವಿಭಾಗದ ಮುಖ್ಯಸ್ಥರೂ ಆಗಿರುವ ಪ್ರಧಾನ ವಿಜ್ಞಾನಿ ಡಾ.ಎ.ಟಿ. ಸದಾಶಿವ ಸುದ್ದಿಗಾರರಿಗೆ ಈ ಕುರಿತು ಮಾಹಿತಿ ನೀಡಿದರು.

ರಾಜ್ಯದಲ್ಲಿ ಸುಮಾರು ಒಂದು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬ್ಯಾಡಗಿ ಮೆಣಸಿನಕಾಯಿ ಬೆಳೆಯಲಾಗುತ್ತಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಬ್ಯಾಡಗಿ ಮೆಣಸಿನಕಾಯಿ ಇಳುವರಿ ರೋಗದಿಂದ ಶೇ 60ರಿಂದ 70ರಷ್ಟು ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಮಲ್ಲೆ ರೋಗ, ಕಾಯಿ ಕೊಳೆಯುವ ರೋಗ ಹಾಗೂ ನುಸಿ ರೋಗವನ್ನು ತಡೆಯುವಂತಹ ನಿರೋಧಕ ಶಕ್ತಿಯುಳ್ಳ ಹೊಸ ತಳಿಯನ್ನು ಅಭಿವೃದ್ಧಿಪಡಿಸುವ ಸಂಶೋಧನೆ ಪ್ರಾರಂಭಿಸಲಾಗಿದ್ದು, ಅದರ ಪ್ರಕ್ರಿಯೆ ಮಧ್ಯಂತರ ಹಂತದಲ್ಲಿದೆ ಎಂದರು.

 ಪ್ರಸ್ತುತ ಒಂದು ಹೆಕ್ಟೇರ್ ಪ್ರದೇಶದಲ್ಲಿ 1ರಿಂದ 1.5 ಟನ್ ಬ್ಯಾಡಗಿ ಮೆಣಸಿನಕಾಯಿ ಬೆಳೆಯಲಾಗುತ್ತಿದ್ದು, ರೋಗ ನಿರೋಧಕ ಶಕ್ತಿಯುಳ್ಳ ಹೊಸ ತಳಿಯಿಂದ ಹೆಕ್ಟೇರ್‌ಗೆ ನಾಲ್ಕು ಟನ್‌ಗಳಷ್ಟು ಇಳುವರಿ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದರು.

ರೋಗ ಮುಕ್ತ ಟೊಮೆಟೋ ತಳಿ ಬಿಡುಗಡೆ: ಈಗಾಗಲೇ ಸೊಗಡು ರೋಗ, ನಂಜುರೋಗ, ಎಲೆಚುಕ್ಕೆ ರೋಗದ ನಿರೋಧಕ ಶಕ್ತಿಯುಳ್ಳ ಟೊಮೆಟೋ ಪರಿಚಯಿಸಿರುವ ಸಂಸ್ಥೆಯು, ಇನ್ನೆರಡು ವರ್ಷಗಳಲ್ಲಿ ಬೇರುಗಂಟು ರೋಗ ಹಾಗೂ ಅಂಗಮಾರಿ ರೋಗ ನಿರೋಧಕ ಶಕ್ತಿಯುಳ್ಳ ಸುಧಾರಿತ ಹಾಗೂ ಹೈಬ್ರೀಡ್ ಟೊಮೆಟೋ ತಳಿಗಳನ್ನು ಬಿಡುಗಡೆ ಮಾಡುವ ನಿಟ್ಟಿನಲ್ಲಿ ಹೆಜ್ಜೆಯನ್ನಿಟ್ಟಿದೆ ಎಂದು ಹೇಳಿದರು.

ಇದಲ್ಲದೆ, ವಿವಿಧ ರೋಗ ನಿರೋಧಕ ಶಕ್ತಿಯುಳ್ಳ, ಮಳೆಯಾಶ್ರಿತ, ಅಧಿಕ ಉಷ್ಣಾಂಶ ತಡೆಯುವ, ಸಾವಯವ ಕೃಷಿ ಮತ್ತು ಯಾಂತ್ರಿಕ ಕೃಷಿಗೆ ಸೂಕ್ತವಾದಂತಹ ತರಕಾರಿ ತಳಿಗಳನ್ನು ಅಭಿವೃದ್ಧಿಪಡಿಸಲು ಪ್ರಯತ್ನ ನಡೆದಿದೆ. ಈ ಪೈಕಿ ಆರೋಗ್ಯವನ್ನು ವೃದ್ಧಿಸುವಂತಹ ಟೊಮೆಟೋ, ಕ್ಯಾಪ್ಸಿಕಾಮ್ ಹಾಗೂ ವಿಟಮಿನ್ `ಎ~ ಪ್ರಮಾಣ ಹೆಚ್ಚಿರುವಂತಹ ಚೆರ‌್ರಿ ಟೊಮೆಟೋ ತಳಿಗಳನ್ನು ಇನ್ನೆರಡು ವರ್ಷಗಳಲ್ಲಿ ಪರಿಚಯಿಸಲಾಗುತ್ತಿದೆ ಎಂದರು.

ತಿಂಗಳ ಹುರುಳಿ: ಹೆಚ್ಚಿನ ಉಷ್ಣಾಂಶ ತಡೆಯುವಂತಹ ತಿಂಗಳ ಹುರುಳಿ, ನಂಜುರೋಗ ನಿರೋಧಕ ಶಕ್ತಿಯಿರುವ ತಿಂಗಳ ಬಳ್ಳಿ ಹುರುಳಿ ತಳಿಯನ್ನು ಕೂಡ ಅಭಿವೃದ್ಧಿಪಡಿಸಲಾಗುತ್ತಿದೆ. ಇದಲ್ಲದೆ, ತುಕ್ಕು ರೋಗ ನಿರೋಧಕ ಶಕ್ತಿಯಿರುವ ಹುರುಳಿ ತಳಿಯ ಅಭಿವೃದ್ಧಿಗೆ ಸಂಶೋಧನೆ ನಡೆಯುತ್ತಿದೆ.

ಬೇಸಿಗೆ ಕಾಲದಲ್ಲಿ ಉಷ್ಣಾಂಶ ತಡೆಗಟ್ಟುವಂತಹ ಶಕ್ತಿಯುಳ್ಳ ಹಸಿರು ಬಟಾಣಿ, ಉದ್ದನೆಯ ಅಲಸಂದೆ, ಬೇಸಿಗೆ ಕಾಲದಲ್ಲಿ ಬೆಳೆಯಲು ಸೂಕ್ತವಾದಂತಹ ಬೂದಿ ನಿರೋಧಕ ಶಕ್ತಿಯುಳ್ಳ ದೊಣ್ಣೆ ಮೆಣಸಿನಕಾಯಿ ತಳಿಯನ್ನು ಕೂಡ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಮತ್ತೊಬ್ಬ ಪ್ರಧಾನ ವಿಜ್ಞಾನಿ ಡಾ. ಅಘೋರ ಮಾಹಿತಿ ನೀಡಿದರು.

`ಕಿಚನ್ ಗಾರ್ಡನ್~ಗೆ ಪ್ರೋತ್ಸಾಹ: ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ನಿರ್ದೇಶಕ ಅಮರೀಕ್ ಸಿಂಗ್ ಸಿಧು ಮಾತನಾಡಿ, `ನಗರೀಕರಣ ಬೆಳೆದಂತೆಲ್ಲಾ ಎಲ್ಲರೂ ಸಮರ್ಪಕವಾಗಿ ತರಕಾರಿ ಸೇವನೆ ಮಾಡುವುದು ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮನೆ ಆವರಣದಲ್ಲಿ ತರಕಾರಿ ಬೆಳೆಯುವ `ಕಿಚನ್ ಗಾರ್ಡನ್~ಗೆ ಸಂಸ್ಥೆಯು ಸೂಕ್ತ ಪ್ರೋತ್ಸಾಹ ನೀಡುತ್ತಿದೆ ಎಂದು ತಿಳಿಸಿದರು.

ಈ ಸಂಬಂಧ ಸ್ವಸಹಾಯ ಸಂಸ್ಥೆಗಳ ಮೂಲಕ ಮಹಿಳೆಯರಿಗೆ ಸೂಕ್ತ ತರಬೇತಿ ನೀಡಲಾಗುತ್ತಿದೆ. ವಿವಿಧ ತರಕಾರಿ ಬೀಜಗಳನ್ನು ಕಡಿಮೆ ದರದಲ್ಲಿ ವಿತರಿಸುವ ಮೂಲಕ ಮನೆಯ ಆವರಣದಲ್ಲಿ ತರಕಾರಿ ಬೆಳೆಯಲು ಉತ್ತೇಜನ ನೀಡಲಾಗುತ್ತಿದೆ. ಇದರಿಂದ ರಾಸಾಯನಿಮುಕ್ತ ಹಾಗೂ ತಾಜಾ ತರಕಾರಿ ಸೇವನೆಗೆ ಸಹಕಾರಿಯಾಗಲಿದೆ ಎಂದರು.

ಇದಕ್ಕೂ ಮುನ್ನ ಸಂಸ್ಥೆಯು ಇತ್ತೀಚೆಗೆ ಅಭಿವೃದ್ಧಿಪಡಿಸಿರುವಂತಹ ತಳಿಗಳನ್ನು ರೈತರಿಗೆ ಪರಿಚಯಿಸುವ ಉದ್ದೇಶದಿಂದ `ಕ್ಷೇತ್ರೋತ್ಸವ~ ಹಮ್ಮಿಕೊಳ್ಳಲಾಗಿತ್ತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ರೈತರು `ಕ್ಷೇತ್ರೋತ್ಸವ~ದ ಪ್ರಯೋಜನ ಪಡೆದುಕೊಂಡರು. ಸುಧಾರಿತ ತರಕಾರಿ ತಳಿಗಳು ಹಾಗೂ ಆಧುನಿಕ ಬೇಸಾಯ ಪದ್ಧತಿಗೆ ಅನುಕೂಲಕರವಾದ ರೀತಿಯಲ್ಲಿ ಅಭಿವೃದ್ಧಿಪಡಿಸಿದ ಟೊಮೆಟೋ, ಮೆಣಸಿನಕಾಯಿ, ಬದನೆಕಾಯಿ, ಹೈಬ್ರಿಡ್ ಈರುಳ್ಳಿ, ಬೆಂಡೆಕಾಯಿ, ಅಲಸಂದೆ, ಕುಂಬಳಕಾಯಿ, ಅವರೆ, ಹುರುಳಿ, ದಂಟಿನ ಸೊಪ್ಪು ಮತ್ತಿತರ ಬೆಳೆಗಳನ್ನು ರೈತರಿಗೆ ಪರಿಚಯಿಸಲಾಯಿತು.

ಪ್ರಧಾನ ವಿಜ್ಞಾನಿ (ಸುಧಾರಿತ ಬೇಸಾಯ ಕ್ರಮಗಳು) ಡಾ. ಪ್ರಭಾಕರ್, ಸಂಶೋಧನಾ ಮತ್ತು ನಿರ್ವಹಣಾ ಸಮಿತಿಯ ಅಧ್ಯಕ್ಷ ಎಂ.ಆರ್. ಹೆಗಡೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.