ಬೆಂಗಳೂರು: ಲಹರಿ ರೆಕಾರ್ಡಿಂಗ್ ಕಂಪೆನಿ ಮಾಲೀಕ ವೇಲು ಅವರನ್ನು ಕಾರಿನಲ್ಲಿ ಅಪಹರಿಸಿದ ದುಷ್ಕರ್ಮಿಗಳು ಅವರಿಗೆ ಪ್ರಾಣ ಬೆದರಿಕೆ ಹಾಕಿ ಬಳಿಕ ಬಿಟ್ಟು ಪರಾರಿಯಾದ ಘಟನೆ ಕ್ವೀನ್ಸ್ ರಸ್ತೆಯ ಅಂಬೇಡ್ಕರ್ ಭವನದ ಎದುರು ಬುಧವಾರ ರಾತ್ರಿ ನಡೆದಿದೆ. ಈ ಬಗ್ಗೆ ವೇಲು ಅವರು ನಗರದ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
‘ಅಂಬೇಡ್ಕರ್ ಭವನದಲ್ಲಿ ನಡೆದ ಖಾಸಗಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ಮನೆಗೆ ಹಿಂತಿರುಗುತ್ತಿದ್ದೆ. ಕಾರು ರಸ್ತೆಗೆ ಬರುತ್ತಿದ್ದಂತೆ ಶ್ರೀನಿವಾಸ (ಒಲವೇ ಮಂದಾರ ಸಿನಿಮಾ ನಿರ್ಮಾಪಕ ಗೋವಿಂದರಾಜು ಅವರ ಸಹೋದರ) ಮತ್ತು ಇತರೆ ನಾಲ್ಕು ಮಂದಿ ಮಂದಿ ವಾಹನವನ್ನು ಅಡ್ಡಗಟ್ಟಿದರು’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
‘ಅವರಲ್ಲಿ ಒಬ್ಬ ಚಾಕುವಿನಿಂದ ಬೆದರಿಸಿ ಕಾರು ಚಾಲಕನನ್ನು ಕೆಳಗಿಳಿಸಿದ. ಆ ನಂತರ ಶ್ರೀನಿವಾಸ್ ಮತ್ತು ಇನ್ನೊಬ್ಬ ವ್ಯಕ್ತಿ ಕಾರಿನಲ್ಲಿ ಕುಳಿತುಕೊಂಡರು. ಶ್ರೀನಿವಾಸ್ ಪಕ್ಕದಲ್ಲಿ ಕುಳಿತು ನನ್ನನ್ನು ಬೆದರಿಸಿದ. ಇನ್ನೊಬ್ಬ ವ್ಯಕ್ತಿ ಕಾರು ಚಾಲನೆ ಮಾಡಿಕೊಂಡು ಇಂಡಿಯನ್ ಎಕ್ಸ್‌ಪ್ರೆಸ್ ವೃತ್ತದ ಬಳಿ ಕರೆದೊಯ್ದ. ಇನ್ನೊಂದು ಕಾರಿನಲ್ಲಿ ಕೆಲವು ಕಿಡಿಗೇಡಿಗಳು ವಾಹನವನ್ನು ಹಿಂಬಾಲಿಸಿದರು’ ಎಂದು ವೇಲು ದೂರಿನಲ್ಲಿ ವಿವರಿಸಿದ್ದಾರೆ.
‘ಒಲವೇ ಮಂದಾರ ಚಿತ್ರದ ಸಿ.ಡಿಗಳು ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ. ಸಿ.ಡಿ ಗಳು ಮಾರುಕಟ್ಟೆಯಲ್ಲಿ ಲಭ್ಯವಾಗುವಂತೆ ಮಾಡಬೇಕು. ಇಲ್ಲವಾದರೆ ಕೊಲೆ ಮಾಡುತ್ತೇನೆ ಎಂದು ಶ್ರೀನಿವಾಸ್ ಬೆದರಿಸಿದ. ಆ ನಂತರ ವಾಹನದಿಂದ ನನ್ನನ್ನು ಇಳಿಸಿದ ಅವರು ಪರಾರಿಯಾದರು’ ಎಂದು ಅವರ ಆರೋಪಿಸಿದ್ದಾರೆ.ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಹೈಗ್ರೌಂಡ್ಸ್ ಠಾಣೆ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.