ADVERTISEMENT

ಲಾಲ್‌ಬಾಗ್‌ನಲ್ಲಿ ಗಂಧದ ಮರ ಕಳವು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 19:30 IST
Last Updated 19 ಡಿಸೆಂಬರ್ 2013, 19:30 IST
ಲಾಲ್‌ಬಾಗ್‌ ಆವರಣದಲ್ಲಿನ ಗಂಧದ ಮರವನ್ನು ಬುಧವಾರ ರಾತ್ರಿ ಕತ್ತರಿಸಿ ಕದ್ದೊಯ್ದಿರುವ ದುಷ್ಕರ್ಮಿಗಳು 	– ಪ್ರಜಾವಾಣಿ ಚಿತ್ರ
ಲಾಲ್‌ಬಾಗ್‌ ಆವರಣದಲ್ಲಿನ ಗಂಧದ ಮರವನ್ನು ಬುಧವಾರ ರಾತ್ರಿ ಕತ್ತರಿಸಿ ಕದ್ದೊಯ್ದಿರುವ ದುಷ್ಕರ್ಮಿಗಳು – ಪ್ರಜಾವಾಣಿ ಚಿತ್ರ   

ಬೆಂಗಳೂರು: ಲಾಲ್‌ಬಾಗ್‌ನ ಕೆಂಪು ತೋಟದಲ್ಲಿ ಬುಧವಾರ ರಾತ್ರಿ ಗಂಧದ ಮರವನ್ನು ಕತ್ತರಿಸಿರುವ ಕಿಡಿಗೇಡಿಗಳು, ಮರದ ತುಂಡುಗಳನ್ನು ಸರಾಗವಾಗಿ ಕದ್ದೊಯ್ದಿದ್ದಾರೆ. 20 ದಿನಗಳ ಅಂತರ­ದಲ್ಲಿ ಲಾಲ್‌ಬಾಗ್‌ ಆವರಣದಲ್ಲಿ ನಡೆದ ಎರಡನೇ ಪ್ರಕರಣ ಇದಾಗಿದ್ದು, ಭದ್ರತೆ ಬಿಗಿಗೊಳಿಸುವುದಾಗಿ ತೋಟ­ಗಾ­ರಿಕೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ತೋಟಗಾರಿಕೆ ಇಲಾಖೆ ನಿರ್ದೇಶಕರ ಕಚೇರಿ ಪಕ್ಕದಲ್ಲಿದ್ದ 14 ವರ್ಷದ ಹಳೆಯ ಗಂಧದ ಮರವನ್ನು ಬುಡದ­ವರೆಗೆ ಕತ್ತರಿಸಿರುವ ದುಷ್ಕರ್ಮಿಗಳು, ಅಲ್ಲೇ ತುಂಡುಗಳನ್ನಾಗಿ ಮಾಡಿ ಕೊಂಡೊ­ಯ್ದಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಕಳವಾದ ಮರದ ಮಾರುಕಟ್ಟೆ ಮೌಲ್ಯ ನಿಖರವಾಗಿ ಗೊತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ರಾತ್ರಿ ಪಾಳಿಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಇದ್ದರು. ಆದರೆ, ಬೆಳಿಗ್ಗೆ ವಾಯುವಿಹಾರಕ್ಕೆ ಬಂದವರು ಹೇಳುವವರೆಗೂ ಗಂಧದ ಮರ ಕಳ­ವಾ­ಗಿ­ರುವ ವಿಷಯ ಸಿಬ್ಬಂದಿಗೆ ಗೊತ್ತಿರಲಿಲ್ಲ. ಅಲ್ಲದೇ, ಕಿಡಿಗೇಡಿಗಳು ಅಷ್ಟು ಸಲೀಸಾಗಿ ಕಳವು ಮಾಡಿರುವುದನ್ನು ನೋಡಿದರೆ ಕೃತ್ಯದ ಹಿಂದೆ ಲಾಲ್‌ಬಾಗ್‌ ಸಿಬ್ಬಂದಿಯ ಕೈವಾಡವಿರುವ ಸಾಧ್ಯತೆ ಇದೆ’ ಎಂದು ಸಿದ್ದಾಪುರ ಪೊಲೀಸರು ಶಂಕಿಸಿದ್ದಾರೆ.

ನ.29ರ ರಾತ್ರಿಯೂ ಕಳವಿಗೆ ಯತ್ನಿ­ಸಿದ್ದ ದುಷ್ಕರ್ಮಿ­ಗಳು, ತುಂಡುಗಳನ್ನು ಸಾಗಿಸಲಾಗದೆ ಬಿಟ್ಟು ಹೋಗಿದ್ದರು.

ಭದ್ರತೆ ಬಿಗಿಗೊಳಿಸುತ್ತೇವೆ...
‘ಲಾಲ್‌ಬಾಗ್‌ ಒಟ್ಟು 242 ಎಕರೆ ವಿಸ್ತೀರ್ಣ ಹೊಂದಿದೆ. ಭದ್ರತೆ ದೃಷ್ಟಿಯಿಂದ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲು ಟೆಂಡರ್‌ ಕರೆಯಲಾಗಿದೆ. ಶೀಘ್ರವೇ ಇಡೀ ಆವರಣಕ್ಕೆ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗುವುದು. ಜತೆಗೆ ಹೆಚ್ಚಿನ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗುವುದು. ಪ್ರಕರಣ ಸಂಬಂಧ ಸಿದ್ದಾಪುರ ಠಾಣೆಗೆ ದೂರು ಕೊಟ್ಟಿದ್ದೇನೆ. ಪೊಲೀಸರು ಶೀಘ್ರವೇ ಆರೋಪಿಗಳನ್ನು ಬಂಧಿಸುವ ವಿಶ್ವಾಸವಿದೆ’

– ಜೆ.ಗುಣವಂತ, ಉಪ ನಿರ್ದೇಶಕರು (ಲಾಲ್‌ಬಾಗ್), ತೋಟಗಾರಿಕೆ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT