ADVERTISEMENT

ಲೋಕಾಯುಕ್ತರ ನೇಮಕಕ್ಕೆ ಜೂನ್ 10ರವರೆಗೆ ಗಡುವು

​ಪ್ರಜಾವಾಣಿ ವಾರ್ತೆ
Published 26 ಮೇ 2012, 19:20 IST
Last Updated 26 ಮೇ 2012, 19:20 IST

ಬೆಂಗಳೂರು: `ಜೂನ್ 10ರೊಳಗೆ ಲೋಕಾಯುಕ್ತ ಹುದ್ದೆಗೆ ನೇಮಕ ಮಾಡಬೇಕು. ಇಲ್ಲವಾದರೆ ರಾಜ್ಯವ್ಯಾಪಿ ಹೋರಾಟ ನಡೆಸಲಾಗುವುದು~ ಎಂದು ಸಮಾನ ಮನಸ್ಕ ರಾಜಕೀಯ ಪಕ್ಷಗಳು ಮತ್ತು ಸಂಘ ಸಂಸ್ಥೆಗಳ ವೇದಿಕೆಯಾದ `ಕರ್ನಾಟಕ ಜಾಗೃತಿ ಜನಾಂದೋಳನ~ ಸಂಘಟನೆಯು ಎಚ್ಚರಿಕೆ ನೀಡಿದೆ.

ಲೋಕಾಯುಕ್ತರ ನೇಮಕಕ್ಕೆ ಆಗ್ರಹಿಸಿ ಹೋರಾಟ ರೂಪಿಸಲು ಶನಿವಾರ ನಗರದಲ್ಲಿ ಕರೆಯಲಾಗಿದ್ದ ಸಮಾಲೋಚನಾ ಸಭೆಯಲ್ಲಿ ಸಂಘಟನೆಯ ಸಂಚಾಲಕ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, `ಲೋಕಾಯುಕ್ತರ ಸ್ಥಾನ ತೆರವಾಗಿ ಹತ್ತು ತಿಂಗಳು ಕಳೆದಿವೆ. ಅರ್ಹರನ್ನು ನೇಮಿಸಲು ಹತ್ತು ದಿನಗಳು ಸಾಕಾಗಿತ್ತು. ಆದರೆ ಸರ್ಕಾರ ಉದ್ದೇಶಪೂರ್ವಕವಾಗಿ ಲೋಕಾಯುಕ್ತ ಸಂಸ್ಥೆಯನ್ನು ನಿಷ್ಕ್ರಿಯಗೊಳಿಸಿದೆ~ ಎಂದರು.

ಮಾಜಿ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಮಾತನಾಡಿ, `ಮುಖ್ಯಮಂತ್ರಿ, ಮುಖ್ಯ ನ್ಯಾಯಮೂರ್ತಿ, ವಿಧಾನ ಪರಿಷತ್ತಿನ ಸಭಾಪತಿ, ವಿಧಾನಸಭಾಧ್ಯಕ್ಷ ಹಾಗೂ ಉಭಯಸದನಗಳ ವಿರೋಧ ಪಕ್ಷದ ನಾಯಕರು ಒಂದು ದಿನ ಸಭೆ ಸೇರಿ ಅರ್ಧ ಗಂಟೆ ಚರ್ಚಿಸಿದರೆ ಹೊಸ ಲೋಕಾಯುಕ್ತರನ್ನು ನೇಮಕ ಮಾಡಬಹುದು. ಆದರೆ ಸರ್ಕಾರಕ್ಕೆ ಮನಸ್ಸಿಲ್ಲ. ಸಬೂಬುಗಳನ್ನು ಹೇಳುವ ಮೂಲಕ ಸರ್ಕಾರ, ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚುವ ಪ್ರಯತ್ನ ನಡೆಸಿದೆ~ ಎಂದು ಶಂಕೆ ವ್ಯಕ್ತಪಡಿಸಿದರು.

`ನನ್ನ ಅವಧಿಯಲ್ಲಿ ನಡೆದ ಜನಹಿತದ ಕೆಲಸಗಳ ಪೈಕಿ ಭ್ರಷ್ಟಾಚಾರದ ವಿರುದ್ಧದ ಪ್ರಕರಣಗಳ ಪಾಲು ಶೇಕಡಾ 10ರಷ್ಟು ಮಾತ್ರ. ಆದರೆ ಅವುಗಳಿಗೆ ಶೇ 90ರಷ್ಟು ಪ್ರಚಾರ ಸಿಕ್ಕಿತು. ಆದರೆ ಪ್ರಚಾರಕ್ಕೆ ಬಾರದೇ ಬಡವರ ಪರವಾದ ಕೆಲಸಗಳು ಆಗಿವೆ. ಅವುಗಳ ಬಗ್ಗೆ ನನಗೆ ಹೆಚ್ಚು ತೃಪ್ತಿ ಇದೆ. ಬಡವರಿಗೆ ಸರ್ಕಾರದ ಸೌಲಭ್ಯಗಳನ್ನು ಸರಿಯಾಗಿ ತಲುಪಿಸಲು ಲೋಕಾಯುಕ್ತ ಸಂಸ್ಥೆಯ ಅಗತ್ಯವಿದೆ~ ಎಂದು ಅವರು ಹೇಳಿದರು.

ವಿಧಾನಸಭೆ ಮಾಜಿ ಅಧ್ಯಕ್ಷ ಕೃಷ್ಣ, ಮಾಜಿ ಶಾಸಕ ಡಾ.ಎಂ.ಪಿ.ನಾಡಗೌಡ, ನಿವೃತ್ತ ಐಎಫ್‌ಎಸ್ ಅಧಿಕಾರಿ ಮುತ್ತು, ಸಂಘಟನೆ ಸಂಚಾಲನಾ ಸಮಿತಿ ಸದಸ್ಯರಾದ ಕೋಡಿಹಳ್ಳಿ ಚಂದ್ರಶೇಖರ್, ಎಂ.ವೆಂಕಟಸ್ವಾಮಿ, ಜಿ.ಕೆ.ಸಿ.ರೆಡ್ಡಿ, ಟಿ.ಜೆ.ಅಬ್ರಹಾಂ, ಸುಜಾತ ಕುಮಟಾ, ಅಬ್ದುಲ್ ಮಜೀದ್ ಇತರರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.