ADVERTISEMENT

ಲೋಕಾಯುಕ್ತರ ನೇಮಕಾತಿ: ಸಭೆಗೆ ಸಿಎಂ ನಕಾರ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 19:30 IST
Last Updated 10 ಅಕ್ಟೋಬರ್ 2011, 19:30 IST

ಬೆಂಗಳೂರು: ನೂತನ ಲೋಕಾಯುಕ್ತರ ನೇಮಕಾತಿಗೆ ಸಂಬಂಧಿಸಿದಂತೆ ಸಮಾಲೋಚನಾ ಸಭೆ ನಡೆಸಬೇಕೆಂಬ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರ ಆಗ್ರಹವನ್ನು ತಿರಸ್ಕರಿಸಿರುವ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಪತ್ರದ ಮೂಲಕವೇ ಸಲಹೆ ನೀಡುವಂತೆ ಶನಿವಾರ ಪತ್ರ ಬರೆದಿದ್ದಾರೆ.

ಹೊಸ ಲೋಕಾಯುಕ್ತರನ್ನು ನೇಮಕ ಮಾಡಲು ಪ್ರಕ್ರಿಯೆ ಆರಂಭಿಸಿರುವ ಮುಖ್ಯಮಂತ್ರಿ, ಹುದ್ದೆಗೆ ಅರ್ಹರಾಗಿರುವವರ ಕುರಿತು ಸಲಹೆ ನೀಡುವಂತೆ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್, ವಿಧಾನಸಭೆ ಅಧ್ಯಕ್ಷ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕಿ ಮೋಟಮ್ಮ ಅವರಿಗೆ ಪತ್ರ ಬರೆದಿದ್ದರು. ಪತ್ರದ ಮೂಲಕವೇ ಸಲಹೆ ನೀಡುವಂತೆ ಕೋರಿದ್ದರು.

ಮುಖ್ಯಮಂತ್ರಿಯವರ ಪತ್ರಕ್ಕೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ, ಲೋಕಾಯುಕ್ತರ ನೇಮಕಾತಿ ಸಂಬಂಧ ಸಭೆ ಕರೆದು ಚರ್ಚಿಸುವಂತೆ ಒತ್ತಾಯಿಸಿದ್ದರು. ಆದರೆ, ಅವರ ಆಗ್ರಹವನ್ನು ಸ್ಪಷ್ಟವಾಗಿ ತಿರಸ್ಕರಿಸಿ ಪತ್ರ ಬರೆದಿರುವ ಮುಖ್ಯಮಂತ್ರಿ, `ಲೋಕಾಯುಕ್ತರ ನೇಮಕಾತಿ ಸಂಬಂಧ ಹಿಂದೆ ಯಾವ ಸಂದರ್ಭದಲ್ಲೂ ಸಭೆ ಕರೆದು ಚರ್ಚಿಸಿರಲಿಲ್ಲ. ಈಗ ಅಂತಹ ಪ್ರಕ್ರಿಯೆ ನಡೆಸಲು ಸಾಧ್ಯವಿಲ್ಲ. ಪತ್ರದ ಮೂಲಕವೇ ವಾರದೊಳಗೆ ಸಲಹೆ ಕಳುಹಿಸಿ~ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.