ADVERTISEMENT

ಲೋಕಾಯುಕ್ತ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2015, 19:47 IST
Last Updated 30 ಜೂನ್ 2015, 19:47 IST
ಲೋಕಾಯುಕ್ತ ಸಂಸ್ಥೆಯಲ್ಲಿ ಕೇಳಿ ಬಂದಿರುವ ಭ್ರಷ್ಟಾಚಾರ ಖಂಡಿಸಿ, ನಗರದ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು, ಲೋಕಾಯುಕ್ತ ನ್ಯಾಯಮೂರ್ತಿ ವೈ. ಭಾಸ್ಕರರಾವ್‌ ಅವರ ಪ್ರತಿಕೃತಿಯನ್ನು ದಹನ ಮಾಡಿದರು
ಲೋಕಾಯುಕ್ತ ಸಂಸ್ಥೆಯಲ್ಲಿ ಕೇಳಿ ಬಂದಿರುವ ಭ್ರಷ್ಟಾಚಾರ ಖಂಡಿಸಿ, ನಗರದ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು, ಲೋಕಾಯುಕ್ತ ನ್ಯಾಯಮೂರ್ತಿ ವೈ. ಭಾಸ್ಕರರಾವ್‌ ಅವರ ಪ್ರತಿಕೃತಿಯನ್ನು ದಹನ ಮಾಡಿದರು   

ಬೆಂಗಳೂರು: ಲೋಕಾಯುಕ್ತದಲ್ಲಿ ಕೇಳಿಬಂದಿರುವ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ, ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರರಾವ್ ಅವರು, ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ, ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ನಂತರ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ ಸಂಘಟನೆಯ ರಾಜ್ಯಾಧ್ಯಕ್ಷ ಬಿ.ಎನ್‌. ಜಗದೀಶ್‌, ‘ಲೋಕಾಯುಕ್ತರ ನಿವಾಸಕ್ಕೆ ಅವರ ಪುತ್ರ ಅಶ್ವಿನ್‌ ರಾವ್ ಮತ್ತು ಕೃಷ್ಣ ರಾವ್‌ ಎಂಬುವವರು ಕೆಲ ಅಧಿಕಾರಿಗಳನ್ನು ಕರೆಯಿಸಿಕೊಂಡು ಲಂಚಕ್ಕೆ ಬೇಡಿಕೆ ಇಟ್ಟಿರುವುದು ಕೇಳಿ ಬಂದಿದೆ. ಭ್ರಷ್ಟಾಚಾರ ತಡೆಯಬೇಕಾದ ಲೋಕಾಯುಕ್ತರ ನಿವಾಸದಲ್ಲೇ ಲಂಚದ ವ್ಯವಹಾರ ನಡೆದಿದೆ’ ಎಂದು ಅವರು ಆರೋಪಿಸಿದರು.

‘ಲೋಕಾಯುಕ್ತರ ನಿವಾಸವನ್ನು ದುರುಪಯೋಗ ಮಾಡಿಕೊಂಡ  ಅಶ್ವಿನ್‌ರಾವ್‌ ಮತ್ತು ಕೃಷ್ಣರಾವ್ ವಿರುದ್ದ ಪೊಲೀಸರು ಎಫ್‌ಐಆರ್‌ ದಾಖಲಿಸದಂತೆ, ಸ್ವತಃ ಭಾಸ್ಕರ್‌ರಾವ್‌ ಅವರೇ ತಡೆಯುತ್ತಿದ್ದಾರೆ. ಈ ಕುರಿತು ಸರ್ಕಾರ ಕೂಡ ಮೌನ ವಹಿಸಿದೆ’ ಎಂದು ಅವರು  ದೂರಿದರು.

‘ಭಾಸ್ಕರರಾವ್ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅಲ್ಲದೆ, ಪ್ರಕರಣದ ಇಬ್ಬರನ್ನೂ ಬಂಧಿಸಿ, ಲೋಕಾಯುಕ್ತ ಸಂಸ್ಥೆಗೆ ಅಂಟಿರುವ ಲಂಚದ ಕಳಂಕವನ್ನು ಕಿತ್ತೊಗೆಯಬೇಕು. ಇಲ್ಲದಿದ್ದರೆ, ರಾಜ್ಯದಾದ್ಯಂತ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.