ADVERTISEMENT

ಲೋಭಿಗಳಾಗಬೇಡಿ- ಯುವಕರಿಗೆ ಹೆಗ್ಡೆ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2012, 20:44 IST
Last Updated 1 ಡಿಸೆಂಬರ್ 2012, 20:44 IST

ಬೆಂಗಳೂರು: `ಯುವಜನತೆ ಮಹತ್ವಾಕಾಂಕ್ಷೆಯನ್ನು ಬೆಳೆಸಿಕೊಳ್ಳಬೇಕು. ಆದರೆ, ಎಂದಿಗೂ ಲೋಭಿಗಳಾಗಬಾರದು' ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಕಿವಿಮಾತು ಹೇಳಿದರು.

ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್ 317 ಇ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಭಾಗೀಯ ಸಭೆಯಲ್ಲಿ ಅವರು ಮಾತನಾಡಿದರು.

`ದಿನದಿಂದ ದಿನಕ್ಕೆ ಬಯಲಿಗೆ ಬರುತ್ತಿರುವ ಹಗರಣಗಳ ಮೊತ್ತವು ದೊಡ್ಡದಿದೆ. ಇದು ಯುವಜನತೆಗೆ ತಪ್ಪು ಸಂದೇಶ ನೀಡಿದಂತಾಗುತ್ತದೆ. ಹಣ ಗಳಿಸುವುದೇ ಜೀವನದ ಪರಮಗುರಿಯೆಂದು ಬಿಂಬಿಸುತ್ತಿರುವ ಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸಬೇಕು' ಎಂದು ತಿಳಿಸಿದರು.

ADVERTISEMENT

`ಐದು ವರ್ಷಗಳ ಕಾಲ ಲೋಕಾಯುಕ್ತನಾಗಿ ಕಾರ್ಯನಿರ್ವಹಿಸಿದ ಸಂದರ್ಭದಲ್ಲಿ ಹಲವು ಭ್ರಷ್ಟಾಚಾರ ಪ್ರಕರಣಗಳು ಬಯಲಿಗೆ ಬಂದಿತ್ತು. ಇವೆಲ್ಲವೂ ಹಣದ ಮೇಲಿನ ದುರಾಸೆಯಿಂದಲೇ ನಡೆದ ಕಾನೂನುಬಾಹಿರ ಕೃತ್ಯಗಳು. ನೈತಿಕತೆಯನ್ನು ಜಾಗೃತಗೊಳಿಸದ ಹೊರತು ಯಾವುದೇ ಬದಲಾವಣೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ' ಎಂದು ಅಭಿಪ್ರಾಯಪಟ್ಟರು.

ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್‌ನ ಸರೋಜಾ ವಿ. ನಾಯ್ಡು, ಎಂ.ಎಸ್.ಶ್ರೀಹರಿ, ಪರಶಿವಮೂರ್ತಿ, ಡಾ.ಕೆ.ಸಿ.ಬಲ್ಲಾಳ್ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.