ADVERTISEMENT

ವಕೀಲರಿಂದ ಹಲ್ಲೆ ಅಮಾನುಷ: ಪತ್ರಕರ್ತರ ದೂರು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2012, 19:30 IST
Last Updated 13 ಮಾರ್ಚ್ 2012, 19:30 IST

ಬೆಂಗಳೂರು: ಮಾಧ್ಯಮ ಪ್ರತಿನಿಧಿಗಳ ಮೇಲಿನ ವಕೀಲರ ಹಲ್ಲೆ ನಡೆಸಿರುವುದು ಒಂದು ಅಮಾನುಷ ಘಟನೆ ಎಂದು ಪತ್ರಕರ್ತರು `ಬ್ರಾಡ್‌ಕಾಸ್ಟ್ ಎಡೀಟರ್ಸ್‌ ಅಸೋಸಿಯೇಷನ್~ ನೇಮಿಸಿರುವ   ಎನ್.ಕೆ.ಸಿಂಗ್ ನೇತೃತ್ವದ ಸತ್ಯ ಶೋಧನಾ ಸಮಿತಿಯ ಮುಂದೆ ದೂರು ಸಲ್ಲಿಸಿದರು.

ಮಾರ್ಚ್ 2 ರಂದು ನಡೆದ ಮಾಧ್ಯಮ ಪ್ರತಿನಿಧಿಗಳ ಮೇಲಿನ ವಕೀಲರ ಹಲ್ಲೆ ಮತ್ತು ಸದನದಲ್ಲಿ ಬ್ಲೂ ಫಿಲ್ಮ್ ವೀಕ್ಷಣೆ ಪ್ರಕರಣಗಳ ಬಗ್ಗೆ  ತನಿಖೆ ನಡೆಸಲು ಆಗಮಿಸಿರುವ ಸಮಿತಿಯ ಮುಂದೆ ಮಂಗಳವಾರ ಪತ್ರಕರ್ತರು ಅಹವಾಲು ಸಲ್ಲಿಸಿದರು.

`ಘಟನೆಯ ಸಂದರ್ಭದಲ್ಲಿ ವಕೀಲರು ಮಾನವೀಯತೆ ಮರೆತು ವರ್ತಿಸಿದರು. ಕೈಗೆ ಸಿಕ್ಕ ವಸ್ತುಗಳಿಂದ ಪತ್ರಕರ್ತರ ಮೇಲೆ ಹಲ್ಲೆ ಮಾಡಿದರು. ಸಿವಿಲ್ ನ್ಯಾಯಾಲಯದ ಆವರಣದ ಎಲ್ಲ ವಸ್ತುಗಳೂ ವಕೀಲರ ದಾಳಿಗೆ ಅಂದು ಅಸ್ತ್ರಗಳಾಗಿದ್ದವು. ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿಯ ಹಾನಿಗೆ ವಕೀಲರೇ ನೇರ ಕಾರಣ~ ಎಂದು ಪತ್ರಕರ್ತರು ಸಮಿತಿಯ ಮುಂದೆ ತಮ್ಮ ಹೇಳಿಕೆ ನೀಡಿದರು.

ADVERTISEMENT

ಘಟನೆ ನಡೆಯುವಾಗ ಪೊಲೀಸ್ ಅಧಿಕಾರಿಗಳೂ ಜವಾಬ್ದಾರಿ ಮರೆತು ವರ್ತಿಸಿದರು. ಪರಿಸ್ಥಿತಿ ಕೈ ಮೀರುವ ವರೆಗೂ ಪೊಲೀಸರು ಯಾವುದೇ ಕ್ರಮಕ್ಕೆ ಮುಂದಾಗದೇ ಹೋದದ್ದು ವಿಷಾದನೀಯ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ದಾಳಿ ನಡೆಯುವವರೆಗೂ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ಮುಂದಾಗದೇ ಇದ್ದದ್ದು ಅವರ ಬೇಜವಾಬ್ದಾರಿತನವನ್ನು ಮತ್ತೊಮ್ಮೆ ಸಾಬೀತು ಮಾಡಿದೆ ಎಂದು ಪತ್ರಕರ್ತರು ಅಭಿಪ್ರಾಯಪಟ್ಟರು.

ಈ ಹಿಂದೆ ಚಲನಚಿತ್ರ ನಟ  ದರ್ಶನ್, ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಂಧನದ ಸಂದರ್ಭಗಳಲ್ಲಿಯೂ ವಕೀಲರು ಪತ್ರಕರ್ತರ ಮೇಲೆ ದಾಳಿ ನಡೆಸುತ್ತಲೇ ಬಂದಿದ್ದಾರೆ. ಆದರೆ ಮಾರ್ಚ್ 2 ರಂದು ನಡೆದ ಘಟನೆ ವಕೀಲರ ವರ್ತನೆಯ ಮೇರೆ ಮೀರಿದೆ. ವಕೀಲರ ನಿಯಂತ್ರಣಕ್ಕೆ ಸರ್ಕಾರ ಸಮರ್ಪಕ ಕ್ರಮಕ್ಕೆ ಮುಂದಾಗಬೇಕು ಎಂದು ಪತ್ರಕರ್ತರು ಸಮಿತಿಯ ಮುಂದೆ ಮನವಿ ಮಾಡಿದರು.

ಮಾಧ್ಯಮ ಪ್ರತಿನಿಧಿಗಳ ಮೇಲಿನ ವಕೀಲರ ಹಲ್ಲೆ ಮತ್ತು ಸದನದಲ್ಲಿ ಬ್ಲೂ ಫಿಲ್ಮ್ ವೀಕ್ಷಣೆ ಪ್ರಕರಣಗಳಲ್ಲಿ ಸರ್ಕಾರ ಮಾಧ್ಯಮಗಳನ್ನು ರಕ್ಷಿಸುವ ಕ್ರಮಕ್ಕೆ ಮುಂದಾಗಿಲ್ಲ. ಬದಲಾಗಿ ಸದನದಲ್ಲಿ ಖಾಸಗಿ ಚಾನೆಲ್‌ಗಳ ಪ್ರವೇಶ ನಿಷೇಧದ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಅವರು ದೂರಿದ್ದಾರೆ. ಪತ್ರಕರ್ತರಾದ ಲಕ್ಷ್ಮಣ   ಹೂಗಾರ್, ಕೆ.ಪ್ರಭಾಕರ್, ಸದಾಶಿವ ಶೆಣೈ ಮತ್ತಿತರರು ಸಮಿತಿಯ ಮುಂದೆ ಅಹವಾಲು ಸಲ್ಲಿಸಿದರು.

ರಾಷ್ಟ್ರೀಯ ಪ್ರಸಾರ ಪ್ರಾಧಿಕಾರದ ಮೇಲ್ವಿಚಾರಣೆಯಲ್ಲಿ ಸಮಿತಿಯು ಕಾರ್ಯಾರಂಭ ಮಾಡಿದೆ. ಇದೇ 15 ರ ವರೆಗೆ ಬೆಂಗಳೂರಿನಲ್ಲಿ ಇರಲಿರುವ ಸಮಿತಿಯು ಪತ್ರಕರ್ತರು, ವಕೀಲರು ಹಾಗೂ ವಿಧಾನ ಸಭೆಯ ಸ್ಪೀಕರ್ ಅವರ ಜೊತೆಗೆ ಮಾತುಕತೆ ನಡೆಸಲಿದೆ. ಎನ್.ಕೆ.ಸಿಂಗ್ ಅಧ್ಯಕ್ಷತೆ ಹಾಗೂ ಆಯಿಷಾ ಖಾನುಂ, ದೀಪಾ ಬಾಲಕೃಷ್ಣನ್ ಅವರು ಸದಸ್ಯರಾಗಿರುವ ಸಮಿತಿಯು ಇದೇ 28 ರೊಳಗೆ ಲೋಕಸಭೆಯ ಸ್ಪೀಕರ್ ಮೀರಾಕುಮಾರ್ ಅವರಿಗೆ ವರದಿ ಸಲ್ಲಿಸಲಿದೆ.

ವೈದ್ಯನಾಥನ್ ಅಧಿಕಾರ ಸ್ವೀಕಾರ

ಬೆಂಗಳೂರು: ನಗರದ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಇದೇ ಎರಡರಂದು ಮಾಧ್ಯಮದವರು, ಪೊಲೀಸರು ಮತ್ತು ವಕೀಲರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ರಚಿಸಿರುವ ವಿಚಾರಣಾ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಆರ್.ಜಿ.ವೈದ್ಯನಾಥನ್ ಅಧಿಕಾರ ಸ್ವೀಕರಿಸಿದ್ದಾರೆ.

ಆಯೋಗದ ಕಚೇರಿಗೆ ಸ್ಥಳಾವಕಾಶ ಒದಗಿಸಿದ ನಂತರ ಈ ಘಟನೆಗೆ ಸಂಬಂಧಪಟ್ಟ ವ್ಯಕ್ತಿಗಳು, ಸಾರ್ವಜನಿಕರಿಂದ ಪ್ರಮಾಣ ಪತ್ರ ಸ್ವೀಕರಿಸುವ ಬಗ್ಗೆ ಅಧಿಸೂಚನೆ ಹೊರಡಿಸಲಾಗುವುದು.
ವಕೀಲರು, ಮಾಧ್ಯಮ ಪ್ರತಿನಿಧಿಗಳು ಹಾಗೂ ಪೊಲೀಸರು ವಿಚಾರಣೆಗೆ ಸಹಕಾರ ನೀಡಬೇಕು ಎಂದು ಆಯೋಗವು ಪ್ರಕಟಣೆಯಲ್ಲಿ ಕೋರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.