ADVERTISEMENT

ವರದಕ್ಷಿಣೆ ಕಾಟ ತಾಳದೆ ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 12 ಜೂನ್ 2011, 19:45 IST
Last Updated 12 ಜೂನ್ 2011, 19:45 IST

ಬೆಂಗಳೂರು: ವರದಕ್ಷಿಣೆ ಕಿರಕುಳ ತಾಳಲಾರದೆ ಹನಿವೆಲ್ ಕಂಪೆನಿಯ ಸಾಫ್ಟ್‌ವೇರ್ ಎಂಜಿನಿಯರ್ ಉಮಾಮಹೇಶ್ ಎಂಬುವರ ಪತ್ನಿ ಅರ್ಚನಾ (23)  ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಂದ್ರಾಲೇಔಟ್‌ನ ಭೈರವೇಶ್ವರನಗರದಲ್ಲಿ ಭಾನುವಾರ ನಡೆದಿದೆ.

ತ್ಯಾಗರಾಜನಗರದ ನಿವಾಸಿಗಳಾದ ಹರಿಕೃಷ್ಣ ಮತ್ತು ಚಂದ್ರಮ್ಮ ದಂಪತಿಯ ಮಗಳು ಅರ್ಚನಾ. ಎರಡು ವರ್ಷದ ಹಿಂದೆ ಅವರ ವಿವಾಹವಾಗಿತ್ತು. ವರದಕ್ಷಿಣಿಗಾಗಿ ಪತಿ ಮತ್ತು ಆತನ ಮನೆಯವರು ಹಿಂಸೆ ನೀಡುತ್ತಿದ್ದರು. ಇದರಿಂದ ಬೇಸತ್ತ ಅರ್ಚನಾ ಅವರು ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಮಾ ಮಹೇಶ್, ಅವರ ತಂದೆ ಮುನಿರಾಜು ಮತ್ತು ತಾಯಿ ಮುನಿರತ್ನಮ್ಮ ಅವರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಣ ತರುವಂತೆ ಉಮಾಮಹೇಶ್ ಮತ್ತು ಅವರ ಪೋಷಕರು ಅರ್ಚನಾಳಿಗೆ ಕಿರುಕುಳ ನೀಡುತ್ತಿದ್ದರು. ಅರ್ಚನಾಳ ಆರು ತಿಂಗಳ ಗಂಡು ಮಗುವಿನ ನಾಮಕರಣ ಸಮಾರಂಭವನ್ನು ದೊಡ್ಡ ಛತ್ರದಲ್ಲಿ ಮಾಡಿಕೊಡಿ ಎಂದು ಅವರು ಬೇಡಿಕೆ ಇಟ್ಟಿದ್ದರು. ಆದರೆ ಮನೆಯಲ್ಲಿಯೇ ನಾಮಕರಣ ಮಾಡಲಾಗಿತ್ತು. ಇದಾದ ನಂತರ ಅರ್ಚನಾಳಿಗೆ ಹಂಗಿಸಿ ಕಿರುಕುಳ ನೀಡುತ್ತಿದ್ದರು. ಈಗ ಅವರೇ ಹೊಡೆದು ನೇಣು ಹಾಕಿದ್ದಾರೆ ಎಂದು ಸಂಬಂಧಿಕರು ದೂರಿದ್ದಾರೆ.

ADVERTISEMENT

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಚಂದ್ರಾಲೇಔಟ್ ಠಾಣೆ ಪೊಲೀಸರು ತಿಳಿಸಿದ್ದಾರೆ.

ಮುಖ್ಯ ಕಾನ್‌ಸ್ಟೆಬಲ್ ಆತ್ಮಹತ್ಯೆ
ಅನಾರೋಗ್ಯದಿಂದ ಬಳಲುತ್ತಿದ್ದ ನಗರ ಸಶಸ್ತ್ರ ಮೀಸಲು ಪಡೆಯ (ಸಿಎಎಆರ್) ಮುಖ್ಯ ಕಾನ್‌ಸ್ಟೆಬಲ್ ರಾಜಣ್ಣ (50) ಎಂಬುವರು ನಂದಿನಿಲೇಔಟ್‌ನ ಪೊಲೀಸ್ ವಸತಿ ಗೃಹದಲ್ಲಿ ಶನಿವಾರ ರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಿಎಆರ್ ಕೇಂದ್ರ ಕಚೇರಿಯಲ್ಲಿ ಅವರು ಕೆಲಸ ಮಾಡುತ್ತಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ರಜೆಯಲ್ಲಿದ್ದರು. ಭಾನುವಾರದಿಂದ ಅವರು ಕೆಲಸಕ್ಕೆ ಹೋಗಬೇಕಿತ್ತು. ಆದರೆ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನೆಲಮಂಗಲದ ಬೆತ್ತನಗೆರೆ ಗ್ರಾಮದವರಾದ ರಾಜಣ್ಣ ಅವರು ಕುಟುಂಬದೊಂದಿಗೆ ನಗರದಲ್ಲಿ ನೆಲೆಸಿದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ. ನಂದಿನಿಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಗುವಿನ ಶವ ಪತ್ತೆ
ಯಲಹಂಕದ ಸುರಭಿ ಲೇಔಟ್‌ನ ಪೊದೆಯೊಂದರಲ್ಲಿ ಸುಮಾರು ಎರಡೂವರೆ ವರ್ಷ ವಯಸ್ಸಿನ ಗಂಡು ಮಗುವಿನ ಶವ ಭಾನುವಾರ ಪತ್ತೆಯಾಗಿದೆ.

ಇದು ಕೊಲೆಯೋ ಅಥವಾ ಸಹಜ ಸಾವೋ ಎಂಬುದು ಗೊತ್ತಾಗಿಲ್ಲ. ಶವ ಪರೀಕ್ಷೆಯ ನಂತರ ಸಾವಿಗೆ ಕಾರಣ ಏನೆಂದು ಗೊತ್ತಾಗಲಿದೆ.

ಕಾಫಿ ಬಣ್ಣದ ಪ್ಯಾಂಟ್ ಧರಿಸಿರುವ ಮಗುವಿನ ಎತ್ತರ ಸುಮಾರು ಎರಡೂವರೆ ಅಡಿ ಎಂದು ಯಲಹಂಕ ಪೊಲೀಸರು ತಿಳಿಸಿದ್ದಾರೆ. ಮಗುವಿನ ಬಗ್ಗೆ ಮಾಹಿತಿ ಇದ್ದವರು 2294 2536 ಸಂಪರ್ಕಿಸಲು ಕೋರಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.