ADVERTISEMENT

ವರ್ಷವಾದರೂ ಕಟ್ಟಾ ಕಾರ್ಮಿಕರು ನಾಪತ್ತೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2012, 19:30 IST
Last Updated 22 ಜನವರಿ 2012, 19:30 IST

ಬೆಂಗಳೂರು: ಪ್ರಭಾವಿ ರಾಜಕಾರಣಿಗಳು, ಹಿರಿಯ ಅಧಿಕಾರಿಗಳನ್ನು ಖೆಡ್ಡಾಕ್ಕೆ ಬೀಳಿಸಿದ ಲೋಕಾಯುಕ್ತ ಪೊಲೀಸರಿಗೆ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಕುಟುಂಬ ಒಡೆತನದ ಪೆಟ್ರೋಲ್ ಬಂಕ್ ಕಾರ್ಮಿಕರಿಬ್ಬರು ಸವಾಲಾಗಿ ಪರಿಣಮಿಸಿದ್ದಾರೆ.

13 ತಿಂಗಳಿನಿಂದ ತಲೆ ಮರೆಸಿಕೊಂಡಿರುವ ಇವರು ಲೋಕಾಯುಕ್ತ ಪೊಲೀಸರ ಜೊತೆಯೇ ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದಾರೆ.

ಎಚ್‌ಎಸ್‌ಆರ್ ಬಡಾವಣೆಯ ಸೌಭಾಗ್ಯ ಪೆಟ್ರೋಲ್ ಬಂಕ್‌ನ ಕಾರ್ಮಿಕರಾಗಿದ್ದ ವೆಂಕಯ್ಯ ಮತ್ತು ಜಗ್ಗಯ್ಯ ಕೆಐಎಡಿಬಿ ಹಗರಣದ ಪ್ರಮುಖ ಆರೋಪಿಗಳು. ಹಗರಣಕ್ಕೆ ಸಂಬಂಧಿಸಿದಂತೆ 2010ರ ಡಿಸೆಂಬರ್ 3ರಂದು ಮೊಕದ್ದಮೆ ದಾಖಲಿಸಿದ ದಿನದಿಂದಲೂ ತಲೆ ಮರೆಸಿಕೊಂಡಿರುವ ಇವರು, ಈವರೆಗೂ ತನಿಖಾ ತಂಡಕ್ಕೆ ಸಿಗದೇ `ಚಳ್ಳೆಹಣ್ಣು~ ತಿನ್ನಿಸುತ್ತಿದ್ದಾರೆ.

ಇಟಾಸ್ಕಾ ಸಾಫ್ಟ್‌ವೇರ್ ಕಂಪೆನಿಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮೂಲಕ 325 ಎಕರೆ ಭೂಮಿ ಮಂಜೂರು ಮಾಡಲು ಕೈಗಾರಿಕಾ ಸಚಿವರಾಗಿದ್ದ ಕಟ್ಟಾ ಅವರು 87 ಕೋಟಿ ರೂಪಾಯಿ ಲಂಚ ಪಡೆದಿದ್ದರು ಎಂಬ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ದಾಖಲಿಸಿದ ಮೊಕದ್ದಮೆಯಲ್ಲಿ ಈ ಇಬ್ಬರೂ ಕ್ರಮವಾಗಿ ನಾಲ್ಕು ಮತ್ತು ಐದನೇ ಆರೋಪಿಗಳು. ಈ ಪ್ರಕರಣದಲ್ಲಿ ಒಟ್ಟು ಹತ್ತು ಮಂದಿಯ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಕಲಮುಗಳ ಅಡಿಯಲ್ಲಿ ಮೊಕದ್ದಮೆ ದಾಖಲಿಸಲಾಗಿತ್ತು.

ಪ್ರಕರಣದ ಕೇಂದ್ರ ಬಿಂದು:  ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿ ಪ್ರಕಾರ, ಕಟ್ಟಾ ಮತ್ತು ಅವರ ಪುತ್ರ ಜಗದೀಶ್ ಇಟಾಸ್ಕಾ ಕಂಪೆನಿಗೆ ಭೂಮಿ ಮಂಜೂರು ಮಾಡಲು ಹಣ ಪಡೆದಿರುವುದು, ರೈತರಿಗೆ ಸಂದಾಯವಾಗಬೇಕಿದ್ದ ಪರಿಹಾರದ ಮೊತ್ತವನ್ನು ವಂಚಿಸಿರುವುದು ಎಲ್ಲವೂ ನಡೆದಿರುವುದು ವೆಂಕಯ್ಯ ಹಾಗೂ ಜಗ್ಗಯ್ಯರ ಮೂಲಕ. ಇಬ್ಬರು ಆರೋಪಿಗಳೂ ಕಟ್ಟಾ ಅವರ ಪತ್ನಿ ಸೌಭಾಗ್ಯ ಹೆಸರಿನಲ್ಲಿದ್ದ ಪೆಟ್ರೋಲ್ ಬಂಕ್‌ನ ಕಾರ್ಮಿಕರು. ಭೂಮಿ ಪಡೆಯಲು ಇಟಾಸ್ಕಾ ಕಂಪೆನಿ ನೀಡಿದ ರೂ 87 ಕೋಟಿ ಈ ಕಾರ್ಮಿಕರ ಹೆಸರಿನಲ್ಲಿದ್ದ ಕಂಪೆನಿ ಮೂಲಕವೇ ಕಟ್ಟಾ ಕುಟುಂಬದ ಕೈಸೇರಿತ್ತು.

2010ರ ಡಿ. 3ರಿಂದಲೂ ವೆಂಕಯ್ಯ ಮತ್ತು ಜಗ್ಗಯ್ಯ ಪತ್ತೆಗಾಗಿ ಲೋಕಾಯುಕ್ತ ಪೊಲೀಸರು ಶೋಧ ಆರಂಭಿಸಿದ್ದರು. ಹಲವು ಕಡೆಗಳಿಗೆ ತೆರಳಿ ತಪಾಸಣೆ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ಅವರಿಬ್ಬರ ನಾಪತ್ತೆಯ ನಡುವೆಯೂ ಕಳೆದ ಜುಲೈನಲ್ಲಿ ಹಗರಣದ ತನಿಖೆ ಪೂರ್ಣಗೊಳಿಸಿದ್ದ ಲೋಕಾಯುಕ್ತ ಪೊಲೀಸರು, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ (ಲೋಕಾಯುಕ್ತ) ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

ಅಂದಿನಿಂದ ಹಲವು ಬಾರಿ ನ್ಯಾಯಾಧೀಶರು ಈ ಆರೋಪಿಗಳ ಬಂಧನಕ್ಕಾಗಿ ಜಾಮೀನುರಹಿತ ವಾರೆಂಟ್ ಹೊರಡಿಸಿದ್ದಾರೆ.

ನಿರಂತರ ಪ್ರಯತ್ನದ ನಡುವೆಯೂ ಈ ಆರೋಪಿಗಳ ಪತ್ತೆ ಸಾಧ್ಯವಾಗಿಲ್ಲ ಎಂದು ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಹೇಳಿಕೆಯನ್ನು ಪರಿಗಣಿಸಿದ್ದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರು, ವೆಂಕಯ್ಯ ಮತ್ತು ಜಗ್ಗಯ್ಯ ಅವರನ್ನು ಘೋಷಿತ ಅಪರಾಧಿಗಳೆಂದು ಅಧಿಸೂಚನೆ ಹೊರಡಿಸುವಂತೆ ಆದೇಶಿಸಿದ್ದರು.

ನಂತರ ಆರೋಪಪಟ್ಟಿಯಲ್ಲಿ ಇವರ ವಿರುದ್ಧದ ಆರೋಪಗಳ ಭಾಗವನ್ನು ಪ್ರತ್ಯೇಕಿಸಿರುವ ನ್ಯಾಯಾಲಯ, ಪ್ರಕರಣದ ವಿಚಾರಣೆಗೆ ಅಡ್ಡಿಯಾಗದಂತೆ ಕ್ರಮ ಕೈಗೊಂಡಿದೆ.

ಮೂಲವೇ ರಹಸ್ಯ:  ಇಬ್ಬರು ಆರೋಪಿಗಳೂ ಸೌಭಾಗ್ಯ ಪೆಟ್ರೋಲ್ ಬಂಕ್‌ನ ಕಾರ್ಮಿಕರು ಎಂಬುದಕ್ಕೆ ತನಿಖಾ ತಂಡಕ್ಕೆ ಸಾಕಷ್ಟು ದಾಖಲೆಗಳು ಲಭ್ಯವಾಗಿದ್ದವು. ಆದರೆ, ಅವರ ಮೂಲ ಪತ್ತೆ ಹಚ್ಚುವುದು ಮಾತ್ರ ಸಾಧ್ಯವಾಗಿರಲಿಲ್ಲ. ಈಗಲೂ ಅದೇ ಪರಿಸ್ಥಿತಿ ಮುಂದುವರಿದಿದೆ. ಆರೋಪಪಟ್ಟಿಯನ್ನು ಪ್ರತ್ಯೇಕಿಸಿರುವುದರಿಂದ ವಿಚಾರಣೆಗೆ ತೊಂದರೆ ಆಗದಿದ್ದರೂ, ಈ ಇಬ್ಬರೂ ಆರೋಪಿಗಳಷ್ಟೇ ಅಲ್ಲ ಪ್ರಕರಣದ ಅತಿಮುಖ್ಯ ಆರೋಪಿಗಳ ವಿರುದ್ಧದ ಆರೋಪಗಳ ವಿಷಯದಲ್ಲಿ ಮಹತ್ವದ ಸಾಕ್ಷಿಗಳಾಗುತ್ತಾರೆ.

ಇದರಿಂದಾಗಿ ವೆಂಕಯ್ಯ ಮತ್ತು ಜಗ್ಗಯ್ಯ ಬಂಧನಕ್ಕೆ ನ್ಯಾಯಾಲಯ ಪದೇ ಪದೇ ವಾರೆಂಟ್ ಹೊರಡಿಸುತ್ತಲೇ ಇದೆ. ತಲೆ ಮರೆಸಿಕೊಂಡ ಆರೋಪಿಗಳನ್ನು ಪತ್ತೆಹಚ್ಚ ಲೇಬೇಕೆಂಬ ಹಠಕ್ಕೆ ಬಿದ್ದು ತನಿಖಾ ತಂಡ ತನ್ನ ಕೆಲಸ ಮುಂದುವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.