ADVERTISEMENT

ವಾಣಿಜ್ಯ ಪರವಾನಗಿ ರದ್ದತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2011, 19:00 IST
Last Updated 24 ಅಕ್ಟೋಬರ್ 2011, 19:00 IST

ಬೆಂಗಳೂರು: ಕರ್ನಾಟಕ ಪುರಸಭೆ ಕಾನೂನಿನ್ವಯ ಕೈಗಾರಿಕೆಗಳ ಮೇಲೆ ಹೇರಿರುವ ವಾಣಿಜ್ಯ ಪರವಾನಗಿಯನ್ನು ಕೂಡಲೇ ರದ್ದುಪಡಿಸಬೇಕು ಎಂದು `ಪೀಣ್ಯ ಕೈಗಾರಿಕಾ ಸಂಘ~ವು ಸರ್ಕಾರವನ್ನು ಆಗ್ರಹಿಸಿದೆ.

ಈ ಕುರಿತು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಸ್.ಬಾಲಸುಬ್ರಹ್ಮಣ್ಯ `ಕೈಗಾರಿಕಾ ಸಂಸ್ಥೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೊಳಿಸಿರುವ ಕಾನೂನುಗಳ ಪ್ರಕಾರ ಪರವಾನಗಿ ಪಡೆದು ಚಟುವಟಿಕೆಗಳನ್ನು ನಡೆಸುತ್ತಿವೆ. ಆದ್ದರಿಂದ ಬಿಬಿಎಂಪಿಯಿಂದ ಮತ್ತೊಂದು ಪರವಾನಗಿಯನ್ನು ಪಡೆಯುವ ಅವಶ್ಯಕತೆ ಉದ್ಭವಿಸುವುದಿಲ್ಲ. ಕೇವಲ ತೆರಿಗೆ ಸಂಗ್ರಹಣೆ ಉದ್ದೇಶದಿಂದ ಇಂತಹ ಪರವಾನಗಿಯನ್ನು ಹೇರಿರುವುದು ಅನ್ಯಾಯ ಎಂದರು.

ಸರ್ಕಾರಕ್ಕೆ ಮೌಲ್ಯಾಧಾರಿತ ತೆರಿಗೆ, ಅಬಕಾರಿ ತೆರಿಗೆ, ರಾಜ್ಯ ವಿಮಾ ನಿಗಮಕ್ಕೆ ನಿಗದಿತ ಹಣ ಪಾವತಿ, ಕಾರ್ಮಿಕ ಭವಿಷ್ಯ ನಿಧಿ, ಆಸ್ತಿ ತೆರಿಗೆ, ಮಾಲಿನ್ಯ ನಿಯಂತ್ರಣ ಮಂಡಳಿ ಸಮ್ಮತಿ ಶುಲ್ಕ ತೆರಿಗೆಗಳನ್ನು ಪಾವತಿ ಮಾಡಲಾಗುತ್ತಿದೆ.

ಅಲ್ಲದೇ ಪೀಣ್ಯ ಕೈಗಾರಿಕಾ ವಸಾಹತು ಪ್ರದೇಶದಲ್ಲಿರುವ ಉದ್ಯಮಗಳಿಗೆ ಈ ನಿಯಮ ಅನ್ವಯ ಆಗುವುದಿಲ್ಲ. ಆದರೂ ಆಯುಕ್ತರು ವಾಣಿಜ್ಯ ಪರವಾನಗಿ ಪಡೆಯುವಂತೆ ಆದೇಶ ಹೊರಡಿಸಿದ್ದು ಕೈಗಾರಿಕೆಗಳ ಬೆಳವಣಿಗೆಯ ದೃಷ್ಟಿಯಿಂದ ಹಾನಿಕರ. ಆದ್ದರಿಂದ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಈ ಆದೇಶವನ್ನು ಹಿಂತೆಗೆದುಕೊಳ್ಳುವಂತೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.

ಸಂಘದ ಜಂಟಿ ಕಾರ್ಯದರ್ಶಿ ಕೆ.ಆನಂದರಾವ್, ಖಜಾಂಚಿ ಚಂದ್ರಶೇಖರ್ ವೈ.ಪುತ್ರನ್, ಜಂಟಿ ಖಜಾಂಚಿ ಸಿ.ಪ್ರಕಾಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.